ಸದ್ಯ ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿ ಹೆಚ್ಚಾಗಿದೆ. ಸಾಲ ಮರುಪಾವತಿಸುವಂತೆ ಜನರ ಮನೆಗೆ ತೆರಳಿ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಸಾಲಗಾರರ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಇದರ ನಡುವೆ ಬ್ಯಾಂಕ್ ಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಿಜಯ್ ಮಲ್ಯ ಮತ್ತೆ ಸುದ್ದಿಯಲ್ಲಿದ್ದಾರೆ. ಪಾವತಿಸಬೇಕಿರುವುದಕ್ಕಿಂತ ಮಿತಿ ಮೀರಿ ಸಾಲ ವಸೂಲಿ ಪ್ರಶ್ನಿಸಿ ಇದೀಗ ಬ್ಯಾಂಕ್ಗಳ ವಿರುದ್ಧವೇ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಹಾಗಾದ್ರೆ, ವಿಜಯ್ ಮಲ್ಯ ಸಲ್ಲಿಸಿದ ಅರ್ಜಿಯಲ್ಲೇನಿದೆ?
![](https://samagrasuddi.co.in/wp-content/uploads/2025/02/image-43-1024x576.png)
ಬೆಂಗಳೂರು, (ಫೆಬ್ರವರಿ 05): ಪಾವತಿಸಬೇಕಿರುವುದಕ್ಕಿಂತ ಹೆಚ್ಚು ಸಾಲ ವಸೂಲಿ ಪ್ರಶ್ನಿಸಿ ಬ್ಯಾಂಕ್ಗಳ ವಿರುದ್ಧವೇ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಿಜಯ್ ಮಲ್ಯ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸಾಲದ ಮೊತ್ತ ಹಾಗೂ ವಸೂಲಿ ಮಾಡಿರುವ ಒಟ್ಟು ಮೊತ್ತದ ವಿವರ ನೀಡುವಂತೆ ಬ್ಯಾಂಕ್ಗಳಿಗೆ ನಿರ್ದೇಶಿಸಬೇಕೆಂದು ಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಮನವಿ ಮಾಡಿದ್ದು, ಈ ಸಂಬಂಧ ಇಂದು (ಫೆಬ್ರವರಿ 05) ಮಲ್ಯ ಪರ ಹಿರಿಯ ವಕೀಲ ಸಜನ್ ಪೂವಯ್ಯ ವಾದ ಮಂಡಿಸಿದ್ದು.ಈ ಸಂಬಂಧ ಕೋರ್ಟ್, ಬ್ಯಾಂಕ್ಗಳಿಗೆ ನೋಟಿಸ್ ಜಾರಿ ಮಾಡಿದೆ.
6200 ಕೋಟಿ ರೂಪಾಯಿ ಸಾಲ ಕೊಡಬೇಕಿತ್ತು, ಅದರಲ್ಲಿ 14,000 ಕೋಟಿ ರೂ. ವಸೂಲಾಗಿದೆ. ಹೀಗೆಂದು ಹಣಕಾಸು ಸಚಿವೆ ಲೋಕಸಭೆಗೆ ತಿಳಿಸಿದ್ದಾರೆ. ಸಾಲ ವಸೂಲಾತಿ ಅಧಿಕಾರಿ 10,200 ಕೋಟಿ ರೂಪಾಯಿ ವಸೂಲಾಗಿದೆ ಎಂದಿದ್ದಾರೆ. ಸಂಪೂರ್ಣ ಸಾಲ ತೀರಿದ್ದರೂ ಈಗಲೂ ಪ್ರಕ್ರಿಯೆ ಮುಂದುವರಿಸಲಾಗುತ್ತಿದೆ. ಹೀಗಾಗಿ ಸಾಲ ವಸೂಲಿಯಾದ ಲೆಕ್ಕಪತ್ರ ನೀಡುವಂತೆ ಬ್ಯಾಂಕ್ಗಳಿಗೆ ನಿರ್ದೇಶಿಸಬೇಕೆಂದು ಕೋರ್ಟ್ಗೆ ವಕೀಲ ಸಜನ್ ಪೂವಯ್ಯ ಮನವಿ ಮಾಡಿದರು.
ಅಲ್ಲದೇ ಹಣ ವಸೂಲಾತಿ ಪ್ರಕ್ರಿಯೆ ಮುಂದುವರಿದಿದ್ದು, ಪ್ರಾಥಮಿಕ ಸಾಲವನ್ನು ಪಾವತಿಸಲಾಗಿದೆಯೇ ಅಥವಾ ಇಲ್ಲವೇ ಎಂಬುವುದರ ಬಗ್ಗೆ ಯಾವುದೇ ಆದೇಶ ಮಾಡಲಾಗಿಲ್ಲ. ಆದ್ರೆ, ಸಾಲ ವಸೂಲಿ ಪ್ರಕ್ರಿಯೆ ಮುಂದುವರಿಸದಂತೆ ಮಧ್ಯಂತರ ಆದೇಶ ಮಾಡಬೇಕು ಎಂದು ಮನವಿ ಮಾಡಿದರು.
ಇನ್ನು ವಿಜಯ್ ಮಲ್ಯ ಪರ ವಕೀಲ ಸಜನ್ ಪೂವಯ್ಯ ಅವರ ವಾದ ಆಲಿಸಿದ ಕರ್ನಾಟಕ ಹೈಕೋರ್ಟ್ ನ್ಯಾyಮೂರ್ತಿ ಆರ್. ದೇವದಾಸ್ ಅವರಿದ್ದ ಹೈಕೋರ್ಟ್ ಪೀಠ. ಬ್ಯಾಂಕ್ಗಳು ಹಾಗೂ ಸಾಲ ವಸೂಲಾತಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ ಮುಂದಿನ ವಿಚಾರಣೆಯನ್ನು ಫೆಬ್ರವರಿ 19ಕ್ಕೆ ಮುಂದೂಡಿದರು.
ಚೆನ್ನೈನ ಸಾಲ ವಸೂಲಾತಿ ನ್ಯಾಯಮಂಡಳಿಯ ವಸೂಲಾತಿ ಅಧಿಕಾರಿಗಳು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ದಿ ಫೆಡರಲ್ ಬ್ಯಾಂಕ್ ಲಿಮಿಟೆಡ್, ಐಡಿಬಿಐ ಬ್ಯಾಂಕ್ ಲಿಮಿಟೆಡ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಜಮ್ಮು ಅಂಡ್ ಕಾಶ್ಮೀರ್ ಬ್ಯಾಂಕ್ ಲಿಮಿಟೆಡ್, ಪಂಜಾಬ್ ಅಂಡ್ ಸಿಂದ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯುಕೊ ಬ್ಯಾಂಕ್, ಜೆ ಎಂ ಫೈನಾನ್ಶಿಯಲ್ ಅಸೆಟ್ ರಿಕನಸ್ಟ್ರಕ್ಷನ್ ಕಂಪನಿ ಪ್ರೈ.ಲಿ., ಯುಬಿಎಚ್‌ಎಲ್‌ನ ಅಧಿಕೃತ ಲಿಕ್ವಿಡೇಟರ್‌ಗೆ ನ್ಯಾಯಾಲಯ ತುರ್ತು ನೋಟಿಸ್ ಜಾರಿ ಮಾಡಿದೆ.