ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ, ರಾಜ್ಯ ಸರಕಾರದ ನಡೆಯನ್ನು ಕರ್ನಾಟಕ ನವ ನಿರ್ಮಾಣ ಸೇನೆ ಬಲವಾಗಿ ಖಂಡಿಸಿತು.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜೂ. 28ಅಗತ್ಯ ವಸ್ತುಗಳ ಬೆಲೆ ಇಳಿಸಿ ರಾಜ್ಯದ ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವಂತೆ ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯರವರನ್ನು ಒತ್ತಾಯಿಸಿದೆ.

ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನೆಯನ್ನು ನಡೆಸಿದ ಕರ್ನಾಟಕ ನವನಿರ್ಮಾಣ ಸೇನೆಯ ಪದಾಧಿಕಾರಿಗಳು ದಾರಿಯುದ್ದಕ್ಕೂ ಸರ್ಕಾರದ ವಿರುದ್ದ ಘೋಷಣೆಯನ್ನು ಕೂಗಲಾಯಿತು. ಬೆಲೆಯನ್ನು ಇಳಿಸುವಂತೆ ಸರ್ಕಾರವನ್ನು ಆಗ್ರಹಿಸಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನ ವಿರೋಧಿ ಆಡಳಿತ ನಡೆಸುತ್ತಿರುವ ರಾಜ್ಯ ಸರಕಾರದ ನಡೆಯನ್ನು ಕರ್ನಾಟಕ ನವನಿರ್ಮಾಣ ಸೇನೆ ಬಲವಾಗಿ ಖಂಡಿಸಲಾಯಿತು.

ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ಸ್ಪರ್ಧೆಗೆ ಬಿದ್ದತಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿವೆ. ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆ ಮುಗಿಯುವುದರೊಳಗಾಗಿ ಹಾಲಿನ ಬೆಲೆ ಹೆಚ್ಚಳ ಮಾಡಿ ಜನ ಸಾಮಾನ್ಯರ ಬದುಕಿನ ಮೇಲೆ ಸರಕಾರ ಹೊರೆ ಹೆಚ್ಚು ಮಾಡಿದೆ.ರಾಜ್ಯದ ಬೆಂಗಳೂರು ಹೊರತು ಪಡಿಸಿ ಬಹುತೇಕ ಜಿಲ್ಲೆ,ತಾಲೂಕು, ಹೋಬಳಿ ಪ್ರದೇಶಗಳಲ್ಲಿ ಬಡತನ ರೇಖೆಗಿಂತ ಕೆಳಗಡೆ ಇರುವ ಕೂಲಿ ಕಾರ್ಮಿಕ ವರ್ಗದ ಜನರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ.ತಮ್ಮ ಆಡಳಿತದ ಅನುಕೂಲಕ್ಕಾಗಿ ಬೇಕಾ ಬಿಟ್ಟಿ ಬೆಲೆ ಏರಿಕೆ ಮಾಡಿ  ಅವರ ದೈನಂದಿನ ಬದುಕಿನ ಜೊತೆ ಆಟವಾಡುವ ಕೆಲಸ ಸರಕಾರ ಮಾಡುತ್ತಿದೆ.ವಿದ್ಯಾರ್ಥಿ,ರೈತ ಕಾರ್ಮಿಕ ಸೇರಿದಂತೆ ಮಧ್ಯಮವರ್ಗದ ಬಡಜನರಿಗೆ ಸರಕಾರದ ಈ ನಡೆ ಆಘಾತವನ್ನುಂಟು ಮಾಡಿದೆ ಎಂದರು.

ಮುಂಬರುವ ದಿನಗಳಲ್ಲಿ ಬಸ್ ದರ ಹೆಚ್ಚಿಸುವ ಪ್ರಸ್ತಾವನೆಯನ್ನೂ ಸಾರಿಗೆ ಸಚಿವರು ಮಾಡಲಿದ್ದಾರೆ ಎನ್ನುವ ಮಾಹಿತಿ ಇದೆ.ಆರ್ಥಿಕ ಸಂಪನ್ಮೂಲಗಳ ಕ್ರೂಢಿಕರಣಕ್ಕೆ ಸರಕಾರಕ್ಕೆ ಸಾಕಷ್ಟು ದಾರಿಗಳಿವೆ.ಆದರೆ ಸರಕಾರ ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕಿ ಆ ಹಣದಿಂದಲೇ ಆಡಳಿತ ಯಂತ್ರ ನಡೆಸುತ್ತಿರುವುದು ನಿಜಕ್ಕೂ ನಾಚಿಕೆಗೇಡು.ಬೆಲೆ ಏರಿಕೆ ದುಷ್ಪರಿಣಾಮದ ಮಾಹಿತಿ ಸರಕಾರಕ್ಕೆ ಸ್ಪಷ್ಟವಾಗಿ ಇಲ್ಲ. ಸರಕಾರ ಈ ಕೂಡಲೇ ತನ್ನ ನಿರ್ಧಾರದಿಂದ ಹಿಂದೆ ಸರಿದು ಅಗತ್ಯ ವಸ್ತುಗಳ ಬೆಲೆ ಇಳಿಸುವಂತೆ ಕರ್ನಾಟಕ ನವನಿರ್ಮಾಣ ಸೇನೆ ಒತ್ತಾಯಿಸಿದ್ದು,ಒಂದು ವೇಳೆ ಸರಕಾರ ಇದೇ ರೀತಿ  ಜನ ಸಾಮಾನ್ಯರ ಬದುಕಿಗೆ ಹೊರೆಯಾಗುವಂತಹ ಆಡಳಿತ ಮಾಡಿದ್ದೇ ಆದರೆ ಮುಂಬರುವ ದಿನಗಳಲ್ಲಿ ಕರ್ನಾಟಕ ನವನಿರ್ಮಾಣ ಸೇನೆ ಸರ್ಕಾರದ  ಸಚಿವರು ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳಲ್ಲಿ ರಾಜ್ಯಾದ್ಯಂತ ಕಪ್ಪು ಬಟ್ಟೆ ಪ್ರದರ್ಶಿಸಿ ಹೋರಾಟ ಮಾಡಬೇಕುತ್ತದೆ ಎಂದು ಎಚ್ಚರಿಸಲಾಯಿತು.

ಈ ಹೋರಾಟದಲ್ಲಿ ಜಿಲ್ಲಾಧ್ಯಕ್ಷ ಎಂ.ತಿಪ್ಪೇಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತ್ಯಾಗರಾಜ್, ಉಪಾಧ್ಯಕ್ಷ ಶರೀಫ್, ಶಿವಣ್ಣ, ಕಾರ್ಮಿಕ ಘಟಕದ ಅಧ್ಯಕ್ಷ ಫೈಜುಲ್ಲಾ, ಹಿರಿಯೂರು ತಾ.ಅಧ್ಯಕ್ಷ ಲಕ್ಷ್ಮೀಕಾಂತ್, ನಗರಾಧ್ಯಕ್ಷ ರಾಮು, ಯುವ ಘಟಕದ ಅಧ್ಯಕ್ಷ ಅನಿಲ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ನಂದಕುಮಾರ್, ಗ್ರಾಮ ಘಟಕದ ಅಧ್ಯಕ್ಷ ಶಿವರಾಜ್, ಸದಸುರಾದ ಮಲ್ಲಿಕಾರ್ಜನ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *