Monsoon pattern in Karnataka: ಜೂನ್ ತಿಂಗಳಲ್ಲಿ ಕೈ ಕೊಟ್ಟ ಮಳೆ, ಜುಲೈ ತಿಂಗಳಲ್ಲಿ ವಾಡಿಕೆಗಿಂತ ಶೇ.37ರಷ್ಟು ಹೆಚ್ಚು ಸುರಿದಿದೆ. ಕಾವೇರಿ ಮತ್ತು ಕೃಷ್ಣ ಜಲಾನಯನ ಪ್ರದೇಶದ ಜಲಾಶಯಗಳಿಗೆ ಶೇ.60ರಿಂದ 70ರಷ್ಟು ನೀರು ಹರಿದುಬಂದಿದೆ. ಮುಂದಿನ ಒಂದು ವಾರಗಳ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಜೂನ್ ತಿಂಗಳಲ್ಲಿ ಸಕಾಲಕ್ಕೆ ಬಾರದೇ ಬರದ ಛಾಯೆ ಮೂಡಿಸಿದ್ದರೆ ಜುಲೈ ತಿಂಗಳಲ್ಲಿ ಧಾರಾಕಾರವಾಗಿ ಸುರಿದು ಬರದ ಭೀತಿಯನ್ನು ಹೋಗಲಾಡಿಸಿದೆ. ಜೂನ್‌ನಲ್ಲಿ ವಾಡಿಕೆಯಷ್ಟು ಮುಂಗಾರು ಮಳೆ ಬರದೇ ವಿಫಲವಾಗಿದೆ. ಆದರೆ ಜುಲೈ ತಿಂಗಳಲ್ಲಿ ಹೆಚ್ಚು ಮಳೆಯಾಗಿದೆ. ಜೂನ್‌ನಲ್ಲಿ ಶೇ56ರಷ್ಟು ಮಳೆ ಕೊರತೆಯಾದರೆ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಶೇಕಡಾ 37ರಷ್ಟು ಹೆಚ್ಚು ಮಳೆ ಬಿದ್ದಿದೆ.
ಉತ್ತಮ ಮುಂಗಾರು ಮಳೆಯ ಪರಿಣಾಮ ರಾಜ್ಯದ ಜಲಾಶಯಗಳಿಗೆ ಕಳೆ ಬಂದಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಅತಿ ಹೆಚ್ಚು ಮಳೆಯಿಂದಾಗಿ ಕಾವೇರಿ ಮತ್ತು ಕೃಷ್ಣ ಜಲಾನಯನ ಪ್ರದೇಶದ ಜಲಾಶಯಗಳಿಗೆ ಶೇ 60ರಿಂದ 70ರಷ್ಟು ನೀರು ಹರಿದು ಬಂದಿದೆ. ಕೇವಲ ಒಂದು ವಾರದಲ್ಲಿ ರಾಜ್ಯದ ಜಲಾಶಯಗಳಿಗೆ 227 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಗುರುವಾರ ಮತ್ತು ಶುಕ್ರವಾರ ಅತಿ ಹೆಚ್ಚು ಮಳೆ ಬೀಳಲಿದೆ. ಅಷ್ಟೇ ಅಲ್ಲ, ಮುಂದಿನ ಒಂದು ವಾರದ ತನಕವೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯದಲ್ಲಿನ ಹವಾಮಾನ ಹಾಗೂ ಮಳೆ-ಬೆಳೆ ಕುರಿತಂತೆ ಬುಧವಾರ ಸಂಜೆ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ, ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಪರಿಹಾರ ಕಾಮಗಾರಿ ಹಾಗೂ ಪ್ರವಾಹ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯದ ಕೋಲಾರ, ಚಿಕ್ಕಬಳ್ಳಾಪುರ ಹಾಗು ರಾಮನಗರ ಸೇರಿದಂತೆ ಆರು ಜಿಲ್ಲೆಗಳಲ್ಲಿ ಮಳೆಯ ಕೊರತೆ ಇದೆ. 21 ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಮಲೆನಾಡು ಭಾಗದ ಚಿಕ್ಕಮಗಳೂರು, ಕೊಡಗು ಸೇರಿದಂತೆ ಹಲವೆಡೆ ಉತ್ತಮ ಪ್ರಮಾಣದ ಮಳೆ ಬೀಳತೊಡಗಿದೆ. ಬೀದರ್ನಲ್ಲಿಯೂ ಸಹ ಅತಿ ಹೆಚ್ಚು ಮಳೆ ಸುರಿದಿದೆ ಎಂದು ಸಿದ್ದರಾಮಯ್ಯ ಮಳೆ ಪರಿಸ್ಥಿತಿ ಕುರಿತ ಮಾಹಿತಿಯನ್ನು ಮಾಧ್ಯಮಗಳ ಬಳಿ ಹಂಚಿಕೊಂಡಿದ್ದಾರೆ.
ಮಳೆ ಪ್ರದೇಶಗಳಲ್ಲಿ ಪ್ರವಾಸ: ಅತಿ ಹೆಚ್ಚು ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿರುವ ಮಂಗಳೂರು, ಉಡುಪಿ, ಉತ್ತರ ಕನ್ನಡ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸೋಮವಾರದ ನಂತರ ಪ್ರವಾಸ ಕೈಗೊಂಡು ಮಳೆ ಹಾನಿ ಮತ್ತು ಪರಿಹಾರ ಕ್ರಮಗಳನ್ನು ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಹೆಚ್ಚಿನ ನೀರು ಬಿಡುವ ಮುಂಚೆ ರಾಜ್ಯದ ಅಧಿಕಾರಿಗಳಿಗೆ ತಿಳಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ತಿಳಿಸಲಾಗುವುದೆಂದು ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಮಳೆಯಿಂದಾಗಿ ರಾಜ್ಯದಲ್ಲಿ ಈವರೆಗೆ 38 ಜನ ಪ್ರಾಣ ಕಳೆದುಕೊಂಡಿದ್ದು, ಅವರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ ಪರಿಹಾರ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಬುಧವಾರ ತಿಳಿಸಿದ್ದಾರೆ.
Views: 0