ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಶಿಷ್ಯವೇತನ ಅರ್ಜಿ ಆಹ್ವಾನ – ಡಿ.20 ಅಂತಿಮ ದಿನ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2025-26ನೇ ಸಾಲಿನ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 20 ಕೊನೆಯ ದಿನವಾಗಿದ್ದು, ರಾಜ್ಯದ ವಿವಿಧ ಕಲಾರಂಗಗಳಲ್ಲಿ ಅಭ್ಯಾಸ ಮಾಡುತ್ತಿರುವ ಯುವ ಪ್ರತಿಭೆಗಳು ಈ ಅವಕಾಶವನ್ನು ಬಳಸಿಕೊಳ್ಳಲು ಅಕಾಡೆಮಿ ಮನವಿ ಮಾಡಿದೆ.

ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ನೃತ್ಯ, ಸುಗಮ ಸಂಗೀತ, ಕಥಾಕೀರ್ತನ ಮತ್ತು ಗಮಕ ಕಲಾಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ 16 ರಿಂದ 24 ವರ್ಷದ ಒಳಗಿನ ಅಭ್ಯರ್ಥಿಗಳು ಮಾತ್ರ ಶಿಷ್ಯವೇತನಕ್ಕೆ ಅರ್ಹರಾಗಿರುತ್ತಾರೆ.

ಅರ್ಜಿ ನಮೂನೆಯನ್ನು ಅಕಾಡೆಮಿಯ ಅಧಿಕೃತ ಅಂತರ್ಜಾಲತಾಣ https://sangeetanrityaacademy.karnataka.gov.in  ಮೂಲಕ ಡೌನ್‌ಲೋಡ್ ಮಾಡಬಹುದು. ಇದಲ್ಲದೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಫೇಸ್‌ಬುಕ್ ಪುಟದಲ್ಲೂ ಅರ್ಜಿಗಳು ಲಭ್ಯವಿರುತ್ತವೆ. ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿಯೂ ಅರ್ಜಿ ನಮೂನೆ ಸಿಗಲಿದೆ.

ಈ ಬಾರಿ ಸಂದರ್ಶನದ ಬದಲಾಗಿ, ಅಭ್ಯರ್ಥಿಗಳು ಅರ್ಜಿಯಲ್ಲಿ ಸೂಚಿಸಿರುವ ಪಠ್ಯಕ್ರಮವನ್ನು ಮೊಬೈಲ್ ಅಥವಾ ವಿಡಿಯೋ ಮೂಲಕ ಚಿತ್ರೀಕರಿಸಿ ಪೆನ್‌ಡ್ರೈವ್‌ನಲ್ಲಿ ಸಂಗ್ರಹಿಸಿ, ಇದೇ ಪೆನ್‌ಡ್ರೈವ್‌ನ್ನು ಅರ್ಜಿಯೊಂದಿಗೆ ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು – 560002 ಎಂಬ ವಿಳಾಸಕ್ಕೆ ಅಂಚೆಯ ಮೂಲಕ ಅಥವಾ ಖುದ್ದಾಗಿ ಸಲ್ಲಿಸಬೇಕು.

ಬಂದಿರುವ ಅರ್ಜಿಗಳು ಹಾಗೂ ಅಭ್ಯರ್ಥಿಗಳಿಂದ ಕಳುಹಿಸಲಾದ ಪೆನ್‌ಡ್ರೈವ್‌ಗಳನ್ನು ಆಯಾ ಕಲಾ ಪ್ರಕಾರದ ತೀರ್ಪುಗಾರರು ಪರಿಶೀಲನೆ ಮಾಡಿ, ಯೋಗ್ಯ ಅಭ್ಯರ್ಥಿಗಳನ್ನು ಶಿಷ್ಯವೇತನಕ್ಕೆ ಆಯ್ಕೆ ಮಾಡಲಿದ್ದಾರೆ. ಪೆನ್‌ಡ್ರೈವ್‌ ಸೇರಿದಂತೆ ಅರ್ಜಿಯನ್ನು ಸಲ್ಲಿಸಲು ಡಿಸೆಂಬರ್ 20 ಕೊನೆಯ ದಿನ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತೀರ್ಪುಗಾರರ ತೀರ್ಮಾನವೇ ಅಂತಿಮ ಎನ್ನುವುದಾಗಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಎನ್. ನರೇಂದ್ರ ಬಾಬು ತಿಳಿಸಿದ್ದಾರೆ.

Leave a Reply

Your email address will not be published. Required fields are marked *