ಬೆಂಗಳೂರು ಸೇರಿದಂತೆ 12 ಜಿಲ್ಲೆಗಳ 37 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಮಧ್ಯಾಹ್ನ 2ರಿಂದ 5ರವರೆಗೆ ನಡೆಯಿತು. ಪರೀಕ್ಷೆ ತೆಗೆದುಕೊಂಡಿದ್ದ ಒಟ್ಟು 18,215 ವಿದ್ಯಾರ್ಥಿಗಳ ಪೈಕಿ ಶೇ.96ರಷ್ಟು ಅಭ್ಯರ್ಥಿಗಳು ಹಾಜರಾಗಿದ್ದರು.
ಬೆಂಗಳೂರು: ಡಿಪ್ಲೊಮಾ ಪಾಸಾದವರಿಗೆ (Diploma ) ಎಂಜಿನಿಯರಿಂಗ್ (engineering admission 2024 ) 3ನೇ ಸೆಮಿಸ್ಟರ್ ಗೆ ನೇರ ಪ್ರವೇಶ ಅರ್ಹತೆ ನಿರ್ಧರಿಸಲು ಶನಿವಾರ ಡಿಸಿಇಟಿ-24 ಪರೀಕ್ಷೆಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (Karnataka Examination Authority) (ಕೆಇಎ) ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ಪ್ರಾಯೋಗಿಕ ವೆಬ್ ಕ್ಯಾಸ್ಟಿಂಗ್ (Web Casting) ನೆರವಿನಿಂದ ಯಶಸ್ವಿಯಾಗಿ ನಡೆಯಿತು.
ಬೆಂಗಳೂರು ಸೇರಿದಂತೆ 12 ಜಿಲ್ಲೆಗಳ 37 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಮಧ್ಯಾಹ್ನ 2ರಿಂದ 5ರವರೆಗೆ ನಡೆಯಿತು. ಪರೀಕ್ಷೆ ತೆಗೆದುಕೊಂಡಿದ್ದ ಒಟ್ಟು 18,215 ವಿದ್ಯಾರ್ಥಿಗಳ ಪೈಕಿ ಶೇ.96ರಷ್ಟು ಅಭ್ಯರ್ಥಿಗಳು ಹಾಜರಾಗಿದ್ದರು. ವೆಬ್ ಕ್ಯಾಸ್ಟಿಂಗ್ ಪ್ರಕ್ರಿಯೆಯ ಮೇಲ್ವಿಚಾರಣೆಯನ್ನು ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಮ್ಮ ಕಚೇರಿಯಿಂದಲೇ ನಡೆಸಿದರು.
ಇದೇ ಮೊದಲ ಸಲ ಪ್ರಾಯೋಗಿಕವಾಗಿ ನಡೆದ ವೆಬ್ ಕ್ಯಾಸ್ಟಿಂಗ್, ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರ ಕೊಠಡಿಯಲ್ಲಿ ನಡೆಯುವ ಪ್ರಕ್ರಿಯೆಗೆ ಸೀಮಿತವಾಗಿತ್ತು. ಪರೀಕ್ಷಾ ಸಮಯಕ್ಕಿಂತ ಮುಂಚೆ ಆಯಾ ಜಿಲ್ಲಾ ಖಜಾನೆಗಳಿಂದ ಬರುವ ಪ್ರಶ್ನೆಪತ್ರಿಕೆಗಳ ಮತ್ತು ಒಎಂಆರ್ ಷೀಟುಗಳ ಬಂಡಲ್ ಗಳನ್ನು ತಕ್ಷಣವೇ ಪ್ರಾಂಶುಪಾಲರ ಕೊಠಡಿಯ ಕಪಾಟಿನಲ್ಲಿ ಸೀಲ್ ಮಾಡಿ ಇಡಬೇಕೆಂಬುದು ನಿಯಮ. ಇದನ್ನು ಯಾವುದೇ ಕಾರಣಕ್ಕೂ ಪರೀಕ್ಷೆ ಆರಂಭವಾಗುವ 20 ನಿಮಿಷಕ್ಕಿಂತ ಮುಂಚೆ ಹೊರಕ್ಕೆ ತೆಗೆಯಬಾರದು. ಇದರ ಕಡ್ಡಾಯ ಪಾಲನೆಯನ್ನು ಖುದ್ದು ಎಚ್.ಪ್ರಸನ್ನ ಅವರು ಖಾತರಿಪಡಿಸಿಕೊಂಡರು. ಖಜಾನೆಯಿಂದ ಬಂದ ಬಂಡಲ್ ಅನ್ನು ಬಾಗಲಕೋಟೆಯ ಪರೀಕ್ಷಾ ಕೇಂದ್ರದಲ್ಲಿ ಪ್ರಾಂಶುಪಾಲರು ಮೇಜಿನ ಮೇಲೆ ಇರಿಸಿಕೊಂಡು ಕುಳಿತಿರುವುದನ್ನು ಗಮನಿಸಿದ ಪ್ರಸನ್ನ ಅವರು, ಅದನ್ನು 1.40ರವರೆಗೆ ಕಪಾಟಿನ ಒಳಗೆ ಇರುವಂತೆ ಸೂಚಿಸಿದರು. ಇದೇ ರೀತಿ ಸಣ್ಣಪುಟ್ಟ ದೋಷಗಳನ್ನು ಪಟ್ಟಿ ಮಾಡಿ ಅವುಗಳನ್ನು ಸರಿಪಡಿಸುವ ಕೆಲಸ ನಡೆಯಿತು. ಎಲ್ಲಿಯೂ ಅಕ್ರಮಗಳಿಗೆ ಅವಕಾಶ ಇಲ್ಲದಂತೆ ಯಶಸ್ವಿಯಾಗಿ ನಡೆಯಿತು.
ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳನ್ನು ಕೊಠಡಿ ಮೇಲ್ವಿಚಾರಕರು ತಂದು ಕೊಡುವ ವ್ಯವಸ್ಥೆ ಮೇಲೂ ನಿಗಾ ವಹಿಸಲಾಯಿತು. “ಯಾವುದೇ ರೀತಿಯ ಪರೀಕ್ಷಾ ಅಕ್ರಮಗಳಿಗೆ ಅವಕಾಶ ಆಗಬಾರದೆಂಬ ನಿಟ್ಟಿನಲ್ಲಿ ಪರೀಕ್ಷಾ ಪ್ರಕ್ರಿಯೆಯನ್ನು ವೆಬ್ ಕ್ಯಾಸ್ಟಿಂಗ್ ನೆರವಿನಿಂದ ವೀಕ್ಷಿಸುವ ವ್ಯವಸ್ಥೆ ಅಳವಡಿಸಿಕೊಳ್ಳಲು ಕೆಇಎ ನಿರ್ಧರಿಸಿದೆ. ಇದರ ಮೊದಲ ಹಂತವಾಗಿ, ಇಂದು ಪ್ರಾಂಶುಪಾಲರ ಕೊಠಡಿಯ ಪ್ರಕ್ರಿಯೆಯ ವೆಬ್ ಕ್ಯಾಸ್ಟಿಂಗ್ ಯಶಸ್ವಿಯಾಗಿ ನಡೆದಿದೆ. ಮುಂಬರುವ ದಿನಗಳಲ್ಲಿ ಪರೀಕ್ಷಾ ಕೊಠಡಿಗಳಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುವ ಪ್ರಕ್ರಿಯೆಯನ್ನೂ ವೆಬ್ ಕ್ಯಾಸ್ಟಿಂಗ್ ಗೆ ಒಳಪಡಿಸಿ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸಲಾಗುವುದು” ಎಂದು ಪ್ರಸನ್ನ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಕೆಇಎ ಪರೀಕ್ಷಾ ವಿಭಾಗದ ಜಂಟಿ ನಿಯಂತ್ರಕ ಮಂಜುನಾಥ ಅವರೂ ಇದ್ದರು.
ಪಿಜಿಸಿಇಟಿ: ಶುಲ್ಕ ಪಾವತಿ, ತಿದ್ದುಪಡಿ, ಪರೀಕ್ಷಾ ಕೇಂದ್ರ ಆಯ್ಕೆಗೆ ಜೂ 24 ಕೊನೆ ದಿನ
2024-25ನೇ ಶೈಕ್ಷಣಿಕ ಸಾಲಿನ ಎಂಬಿಎ/ ಎಂಸಿಎ / ಎಂಇ / ಎಂ.ಟೆಕ್ / ಎಂ.ಆರ್ಕಿಟೆಕ್ಚರ್ ಕೋರ್ಸುಗಳ ಪ್ರವೇಶಕ್ಕಾಗಿ, ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿರುವ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸಲು, ಪರೀಕ್ಷಾ ಕೇಂದ್ರಗಳನ್ನು ನಮೂದಿಸಲು ಹಾಗೂ ಅರ್ಜಿಯಲ್ಲಿನ ಮಾಹಿತಿಯನ್ನು ತಿದ್ದುಪಡಿ ಮಾಡಲು ಜೂನ್ 24ರ ಸಂಜೆ 6ರವರೆಗೆ ಅವಕಾಶ ನೀಡಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ಅವರು ಶನಿವಾರ ಪತ್ರಿಕಾ ಪ್ರಕಟಣೆ ನೀಡಿ ಈ ಮೇಲಿನ ಕಾರ್ಯಗಳನ್ನು ಮಾಡಲು ಅನುಕೂಲವಾಗುವಂತೆ ಪೋರ್ಟಲ್ ಅನ್ನು ತೆರೆಯಲಾಗಿದೆ ಎಂದು ತಿಳಿಸಿದ್ದಾರೆ. ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸದೆ ಇರುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.