ರಾವಣನ ನೆಲದಲ್ಲಿ ‘ಭಾರತ’ಕ್ಕೆ ರಾಮ-ಲಕ್ಷ್ಮಣರಾದ ಕೊಹ್ಲಿ-ರಾಹುಲ್: 11 ವರ್ಷ ಹಳೆಯ ವಿಶ್ವದಾಖಲೆ ಮುರಿದು ಇತಿಹಾಸ ಬರೆದ ಜೋಡಿ!

Asia Cup 2023: ವಿರಾಟ್ ಕೊಹ್ಲಿ 94 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್‌’ಗಳ ನೆರವಿನಿಂದ ಅಜೇಯ 122 ರನ್ ಗಳಿಸಿದರು. ಈ ಮೂಲಕ ವೃತ್ತಿಜೀವನದ 47ನೇ ಶತಕ ಬಾರಿಸಿದರು.

Asia Cup 2023, Virat Kohli-KL Rahul Record: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್‌’ಗಳಾದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಒಟ್ಟಾಗಿ ಏಷ್ಯಾಕಪ್‌’ನಲ್ಲಿ 11 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಸೋಮವಾರ ನಡೆದ ಏಷ್ಯಾ ಕಪ್ 2023ರ ಸೂಪರ್-4 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ನಡುವಿನ ಅಜೇಯ 233 ರನ್‌’ಗಳ ಜೊತೆಯಾಟದೊಂದಿಗೆ ಭಾರತವು ಪಾಕಿಸ್ತಾನದ ವಿರುದ್ಧ 2 ವಿಕೆಟ್‌’ಗೆ 356 ರನ್ ಗಳಿಸಿತು.

ವಿರಾಟ್ ಕೊಹ್ಲಿ 94 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್‌’ಗಳ ನೆರವಿನಿಂದ ಅಜೇಯ 122 ರನ್ ಗಳಿಸಿದರು. ಈ ಮೂಲಕ ವೃತ್ತಿಜೀವನದ 47ನೇ ಶತಕ ಬಾರಿಸಿದರು.

11 ವರ್ಷಗಳ ಹಳೆಯ ದಾಖಲೆ ಮುರಿದ ‘ಜೊತೆಯಾಟ’:

ಪಾಕಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ಕೆಎಲ್ ರಾಹುಲ್ 106 ಎಸೆತಗಳಲ್ಲಿ 111 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದ್ದರು. ರಾಹುಲ್ ಅವರ ಸ್ಫೋಟಕ ಇನ್ನಿಂಗ್ಸ್‌’ನಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್‌’ಗಳು ಸೇರಿದ್ದವು. ಇನ್ನು ಈ ಜೋಡಿಯ ಅದ್ಭುತ ಆಟವು ಏಷ್ಯಾಕಪ್’ನಲ್ಲಿ ಇತಿಹಾಸ ಬರೆದಿದೆ. ಇದುವರೆಗೆ ಯಾವುದೇ ಜೋಡಿ 233 ರನ್‌’ಗಳ ಜೊತೆಯಾಟವನ್ನು ಆಡಿರಲಿಲ್ಲ. ಈ ಹಿಂದೆ ಏಷ್ಯಾಕಪ್‌’ನಲ್ಲಿ ಅತಿ ದೊಡ್ಡ ಜೊತೆಯಾಟದ ದಾಖಲೆ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳಾದ ಮೊಹಮ್ಮದ್ ಹಫೀಜ್ ಮತ್ತು ನಾಸಿರ್ ಜಮ್ಶೆಡ್ ಹೆಸರಿನಲ್ಲಿತ್ತು. ಮೊಹಮ್ಮದ್ ಹಫೀಜ್ ಮತ್ತು ನಾಸಿರ್ ಜಮ್ಶೆಡ್ 2012 ರ ಏಷ್ಯಾಕಪ್‌’ನಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ 224 ರನ್ ಕಲೆಹಾಕಿದ್ದರು.

ಏಷ್ಯಾಕಪ್ ಇತಿಹಾಸದಲ್ಲಿ ಅತಿ ದೊಡ್ಡ ಜೊತೆಯಾಟವಾಡಿದ ಜೋಡಿ:

1. ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ – ಪಾಕಿಸ್ತಾನ ವಿರುದ್ಧ 233 ರನ್ (2023)

2. ಮೊಹಮ್ಮದ್ ಹಫೀಜ್ ಮತ್ತು ನಾಸಿರ್ ಜಮ್ಶೆಡ್ – ಭಾರತ ವಿರುದ್ಧ 224 ರನ್ (2012)

3. ಯೂನಿಸ್ ಖಾನ್ ಮತ್ತು ಶೋಯೆಬ್ ಮಲಿಕ್ – ಹಾಂಗ್ ಕಾಂಗ್ ವಿರುದ್ಧ 223 ರನ್ (2004)

4. ಬಾಬರ್ ಅಜಮ್ ಮತ್ತು ಇಫ್ತಿಕರ್ ಅಹ್ಮದ್ – ನೇಪಾಳ ವಿರುದ್ಧ 214 ರನ್ (ವರ್ಷ 2023)

5. ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ – ಬಾಂಗ್ಲಾದೇಶ ವಿರುದ್ಧ 213 ರನ್ (2014)

100 ಎಸೆತಗಳಲ್ಲಿ ಶತಕ ಪೂರೈಸಿದ ರಾಹುಲ್:

ನಿಧಾನಗತಿಯ ಆರಂಭದ ನಂತರ ವೇಗವನ್ನು ಹೆಚ್ಚಿಸಿದ ರಾಹುಲ್ 55 ಎಸೆತಗಳಲ್ಲಿ ಶಾದಾಬ್ ಅವರ ಒಂದು ರನ್‌’ನೊಂದಿಗೆ ಅರ್ಧಶತಕವನ್ನು ಪೂರ್ಣಗೊಳಿಸಿದರು. 43ನೇ ಓವರ್‌’ನಲ್ಲಿ ಇಫ್ತಿಕರ್ ಎಸೆತಕ್ಕೆ ಕೊಹ್ಲಿ ಮೊದಲ ಸಿಕ್ಸರ್ ಬಾರಿಸಿದರು ಮತ್ತು ಅದೇ ಓವರ್‌’ನಲ್ಲಿ ಬೌಂಡರಿ ಕೂಡ ಬಾರಿಸಿದರು. 45ನೇ ಓವರ್‌ನಲ್ಲಿ ಫಹೀಮ್ ಎಸೆತದಲ್ಲಿ ಎರಡು ಬೌಂಡರಿ ಹಾಗೂ ಒಂದು ರನ್ ನೆರವಿನಿಂದ ರಾಹುಲ್ ಭಾರತದ ಸ್ಕೋರ್ ಅನ್ನು 300ರ ಗಡಿ ದಾಟಿಸಿದರು. IPL ಸಮಯದಲ್ಲಿ ಗಾಯ, ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಾಹುಲ್ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಆ ನಂತರದ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುತ್ತಿರುವ ರಾಹುಲ್, ನಸೀಮ್ ಶಾ ಎಸೆತದಲ್ಲಿ ಎರಡು ರನ್‌’ಗಳೊಂದಿಗೆ 100 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು.

ಇನ್ನೊಂದೆಡೆ 98 ರನ್ ಪೂರೈಸುತ್ತಿದ್ದಂತೆ, ಕೊಹ್ಲಿ ಏಕದಿನ ಕ್ರಿಕೆಟ್‌’ನಲ್ಲಿ 13 ಸಾವಿರ ರನ್ ಪೂರೈಸಿದ ಭಾರತದ ಎರಡನೇ ಮತ್ತು ವಿಶ್ವದ ಐದನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇವರಿಗಿಂತ ಮೊದಲು ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ (18426), ಶ್ರೀಲಂಕಾದ ಕುಮಾರ ಸಂಗಕ್ಕಾರ (14234), ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ (13704) ಮತ್ತು ಶ್ರೀಲಂಕಾದ ಸನತ್ ಜಯಸೂರ್ಯ (13430) ಈ ಸಾಧನೆ ಮಾಡಿದ್ದಾರೆ.

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://zeenews.india.com/kannada/sports/virat-kohli-and-kl-rahul-made-history-by-breaking-the-11-year-old-record-in-asia-cup-history-157828

Leave a Reply

Your email address will not be published. Required fields are marked *