Kolar ATM Robbery: ಬ್ಯಾಂಕ್ ಸಿಬ್ಬಂದಿ ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಕೆಜಿಎಫ್ ಡಿವೈಎಸ್‌ಪಿ ರಮೇಶ್ ಸೇರಿದಂತೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೋಲಾರ: ಗ್ಯಾಸ್ ಕಟರ್ ಬಳಸಿ ಕೆನರಾ ಬ್ಯಾಂಕ್ ಎಟಿಎಂನಲ್ಲಿ 15 ಲಕ್ಷ ರೂ. ದರೋಡೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹಂಚಾಳ ಗೇಟ್‌ನಲ್ಲಿರುವ ಕೆನರಾ ಬ್ಯಾಂಕ್‍ಗೆ ನುಗ್ಗಿದ ಖದೀಮರು, ಗ್ಯಾಸ್ ಕಟರ್ ಬಳಸಿ ಎಟಿಎಂನ ಮಿಷನ್ ಅನ್ನು ಕೊರೆದಿದ್ದಾರೆ. ಬಳಿಕ ಎಟಿಎಂನಲ್ಲಿದ್ದ 15 ಲಕ್ಷ ರೂ. ಹಣವನ್ನು ದೋಚಿ ಎಸ್ಕೇಪ್ ಆಗಿದ್ದಾರೆ.
ಬ್ಯಾಂಕ್ ಸಿಬ್ಬಂದಿ ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಕೆಜಿಎಫ್ ಡಿವೈಎಸ್‌ಪಿ ರಮೇಶ್ ಸೇರಿದಂತೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾಣಿಜ್ಯ ಮಳಿಗೆ ಕಟ್ಟಡದಲ್ಲಿ ಸಿಸಿಟಿವಿ ಇಲ್ಲದ್ದನ್ನು ಗಮನಿಸಿದ ಡಿವೈಎಸ್‌ಪಿ ರಮೇಶ್ ಮಾಲೀಕರಿಗೆ ಪಬ್ಲಿಕ್ ಸೇಫ್ಟಿ ಆಕ್ಟ್ ಅಡಿ ನೋಟಿಸ್ ನೀಡುವಂತೆ ಬಂಗಾರಪೇಟೆ ಪೊಲೀಸರಿಗೆ ಸೂಚಿದ್ದಾರೆ. ಸಿಸಿಟಿವಿ ಇಲ್ಲದ್ದನ್ನು ಗಮನಿಸಿಯೇ ಕಳ್ಳರು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಈ ಹಿಂದೆ ಇದೇ ಪ್ರದೇಶದಲ್ಲಿ ರಾತ್ರಿ 11 ಗಂಟೆಗೆ ಎಟಿಎಂನಲ್ಲಿ ಹಣ ಡ್ರಾ ಮಾಡಿ ಈಚೆ ಬರುತ್ತಿದ್ದ ವ್ಯಕ್ತಿಯ ಮೇಲೆ ಕಿಡಿಗೇಡಿಗಳು ಮಚ್ಚಿನಿಂದ ಹಲ್ಲೆ ನಡೆಸಿದ್ದರು. ಆತನಿಂದ 5 ಸಾವಿರ ರೂ. ದೋಚಿ ಪರಾರಿಯಾಗಿದ್ದರು. ಇದೀಗ ಕಳ್ಳರು ಎಟಿಎಂ ಕೊರೆದು 15 ಲಕ್ಷ ದೋಚಿ ಎಸ್ಕೇಪ್ ಆಗಿದ್ದಾರೆ. ಈ ಬಗ್ಗೆ ಬಂಗಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
ಕಲಬುರಗಿಯಲ್ಲೂ ಎಟಿಎಂಗೆ ಕನ್ನ!
ಕಲಬುರಗಿ ಜಿಲ್ಲೆಯಲ್ಲೂ ಕಳ್ಳರು ಕೆನರಾ ಬ್ಯಾಂಕ್ ಎಟಿಎಂಗೆ ಕನ್ನ ಹಾಕಿದ್ದಾರೆ. ಅಫಜಲ್ ಪುರದ ಹೃದಯ ಭಾಗದಲ್ಲಿರುವ ಕೆನರಾ ಬ್ಯಾಂಕಿನ ಎಟಿಎಂಗೆ ನುಗ್ಗಿದ ಕಳ್ಳರು 14.86 ಲಕ್ಷ ರೂ. ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.