ಕೊಪ್ಪಳ ಜಿಲ್ಲೆಯಿಂದ ಆರಂಭವಾದ ವಾಟರ್ ಬೆಲ್ ಕಲ್ಪನೆಯನ್ನು ಈಗ ರಾಜ್ಯದ 119 ಆಶ್ರಮ ಶಾಲೆಯಲ್ಲಿ ಜಾರಿಗೊಳಿಸಲಾಗಿದೆ.

ಕೊಪ್ಪಳ: ಮನುಷ್ಯ ದೇಹಕ್ಕೆ ನೀರು ಅವಶ್ಯ. ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೆ ಅನೇಕ ಕಾಯಿಲೆಗಳು ಬರುತ್ತವೆ. ನಿತ್ಯ ಹೆಚ್ಚು ನೀರು ಸೇವಿಸುವದರಿಂದ ರೋಗಗಳಿಂದ ಮುಕ್ತವಾಗಿ ದೈಹಿಕ ಹಾಗೂ ಮಾನಸಿಕ ನೆಮ್ಮದಿ ಹೊಂದಿರಬಹುದು. ಆದರೆ ಬಹಳಷ್ಟು ಜನ ಅಗತ್ಯದಷ್ಟು ನೀರು ಕುಡಿಯುವುದಿಲ್ಲ. ಇನ್ನೂ ಕೆಲವರಿಗೆ ಈ ರೂಢಿಯೂ ಇರುವದಿಲ್ಲ. ಇದೇ ಕಾರಣಕ್ಕೆ ಕೊಪ್ಪಳ ಜಿಲ್ಲೆಯ ಆಶ್ರಮ ಶಾಲೆಯಲ್ಲಿ ವಾಟರ್ ಬೆಲ್ ಎಂಬ (Water Bell In Schools) ಕಲ್ಪನೆಯ ಎಚ್ಚರಿಕೆ ಗಂಟೆ ಬಾರಿಸಲಾಗುತ್ತಿದೆ. ಇಲ್ಲಿಯ ವಾಟರ್ ಬೆಲ್ ಈಗ ಮಾದರಿಯಾಗಿದ್ದು, ರಾಜ್ಯದ ಇತರ ಆಶ್ರಮ ಶಾಲೆಯಲ್ಲಿ (Koppal News) ಜಾರಿಯಾಗುತ್ತಿದೆ.
ಸಾಮಾನ್ಯವಾಗಿ ಶಾಲೆಯ ಆರಂಭ, ಶಾಲೆ ಬಿಡುವಾಗ, ತರಗತಿಗಳ ಅವಧಿ ಮುಗಿದಾಗ ಬೆಲ್ ಹೊಡೆಯುತ್ತಾರೆ. ಇನ್ನೂ ಬೇರೆ ಬೇರೆ ಸಂದರ್ಭದಲ್ಲಿ ಎಚ್ಚರಿಕೆ ಗಂಟೆಯನ್ನು ಬಾರಿಸುತ್ತಾರೆ. ಆದರೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕ ಬೆಣಕಲ್ಲಿನಲ್ಲಿಯ ಪರಿಶಿಷ್ಟ ವರ್ಗಗಳ ಆಶ್ರಮ ಶಾಲೆಯಲ್ಲಿ ಕಳೆದ 2 ವರ್ಷಗಳಿಂದ ವಾಟರ್ ಬೆಲ್ ಬಾರಿಸಲಾಗುತ್ತಿದೆ.

4 ಬಾರಿ ವಾಟರ್ ಬೆಲ್
ಶಾಲಾ ಅವಧಿಯಲ್ಲಿ ಪಾಠ ಮಾಡುವಾಗಲೇ ವಾಟರ್ ಬೆಲ್ ಬಾರಿಸುತ್ತಾರೆ. ಈ ವಾಟರ್ ಬೆಲ್ ಬಾರಿಸಿದಾಗ ಮಕ್ಕಳ ತಾವು ತಂದಿರುವ ಬಾಟಲಿಯಲ್ಲಿ ನೀರು ಕುಡಿಯುತ್ತಾರೆ. ಶಾಲಾ ಅವಧಿಯಲ್ಲಿ ಸುಮಾರು 4 ಬಾರಿ ವಾಟರ್ ಬೆಲ್ ಬಾರಿಸಲಾಗುತ್ತಿದೆ. ಇದು ಮಕ್ಕಳ ಆರೋಗ್ಯ ಸಮಸ್ಯೆಯನ್ನು ದೂರ ಮಾಡಿದೆ ಎನ್ನಲಾಗಿದೆ.
164 ವಿದ್ಯಾರ್ಥಿಗಳಿರುವ ಶಾಲೆ
ಚಿಕ್ಕಬೆಣಕಲ್ಲಿ ಆಶ್ರಮ ಶಾಲೆಯಲ್ಲಿ ಒಂದರಿಂದ ಐದನೆಯ ತರಗತಿಯವರೆಗೂ ಒಟ್ಟು 164 ಮಕ್ಕಳು ಓದುತ್ತಿದ್ದಾರೆ. ಇದು ವಸತಿ ಸಹಿತ ಶಾಲೆಯಾಗಿರುವದರಿಂದ ಬಡ ಹಾಗು ಗ್ರಾಮೀಣ ಭಾಗದ ಕಾಡಿನಲ್ಲಿ ವಾಸವಾಗಿರುವ ಮಕ್ಕಳಿಗೆ ಊಟ ವಸತಿ ನೀಡಿ ಶಿಕ್ಷಣ ನೀಡಲಾಗುತ್ತಿದೆ.

ನೀರು ಕುಡಿದರೆ ಬರಲ್ಲ ಈ ಖಾಯಿಲೆಗಳು
ಇಲ್ಲಿ ಮಕ್ಕಳು ಹಾಗೂ ಪಾಲಕರಿಗೆ ದೇಹಕ್ಕೆ ಕುಡಿವ ನೀರು ಎಷ್ಟು ಅವಶ್ಯ ಎಂಬ ಕಲ್ಪನೆ ಇಲ್ಲ. ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೆ ಅನಿಮಿಯಾ, ಡಿಹೈಡ್ರೇಷನ್, ಚರ್ಮ ರೋಗ ಹೀಗೆ ಹಲವಾರು ಕಾಯಿಲೆಗಳು ಬರುತ್ತವೆ. ಅದಕ್ಕಾಗಿ ವೈದ್ಯರು ಸಹ ಆಗಾಗ ನೀರು ಕುಡಿಯಲು ಸೂಚಿಸುತ್ತಾರೆ. ಇದೇ ಕಲ್ಪನೆಯ ಹಿನ್ನೆಲೆಯಲ್ಲಿ ಶಾಲೆಗೆ 10 ಗಂಟೆಗೆ ಬಂದ ಮಕ್ಕಳು ಮಧ್ಯದಲ್ಲಿ ನಾಲ್ಕು ಬಾರಿ ನೀರು ಕುಡಿಯಬೇಕು ಎನ್ನುವ ಕಾರಣಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಗ್ಯಾನನಗೌಡ ಎಂಬುವವರು ಆಶ್ರಮ ಶಾಲೆಯಲ್ಲಿ ವಾಟರ್ ಬೆಲ್ ಎಂಬ ಕಲ್ಪನೆಯನ್ನು ಜಾರಿಗೊಳಿಸಲಾಗಿದೆ.
ಎಲ್ಲಾ ಆಶ್ರಮ ಶಾಲೆಗಳಲ್ಲೂ ಇದೇ ಪದ್ಧತಿ ಅಳವಡಿಕೆ
ಕೊಪ್ಪಳ ಜಿಲ್ಲೆಯಿಂದ ಆರಂಭವಾದ ವಾಟರ್ ಬೆಲ್ ಕಲ್ಪನೆಯನ್ನು ಈಗ ರಾಜ್ಯದ 119 ಆಶ್ರಮ ಶಾಲೆಯಲ್ಲಿ ಜಾರಿಗೊಳಿಸಲಾಗಿದೆ. ಇದಕ್ಕೆ ಸರ್ಕಾರ ಸಹಮತ ನೀಡಿ ಸುತ್ತೋಲೆ ಹೊರಡಿಸಲು ಸೂಚಿಸಿದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಆಶ್ರಮ ಶಾಲೆಗಳಲ್ಲಿ ವಾಟರ್ ಬೆಲ್ ಬಾರಿಸಲಾಗುತ್ತಿದೆ. ಇದು ಮಕ್ಕಳಿಗೆ ಅನುಕೂಲ ಹಾಗು ಮುಂದಿನ ಜೀವನದಲ್ಲಿ ಕುಡಿವ ನೀರಿನ ಅವಶ್ಯಕತೆಯ ಮುನ್ನುಡಿಯಾಗಿದೆ ಎನ್ನುತ್ತಾರೆ ಪರಿಶಿಷ್ಠ ವರ್ಗಗಳ ಇಲಾಖೆಯ ನಿರ್ದೇಶಕರ ಬಿ ಕಲ್ಲೇಶ.
ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ವಾಟರ್ ಬೆಲ್ ಕಲ್ಪನೆಯು ಶಾಲಾ ಹಂತದಲ್ಲಿ ಎಲ್ಲಾ ಮಕ್ಕಳಿಗೆ ಮೂಡಿಸುವದರಿಂದ ಮಕ್ಕಳು ಮುಂದಿನ ದಿನಗಳಲ್ಲಿ ಆರೋಗ್ಯವಂತರಾಗಿರುವ ಭರವಸೆ ಮೂಡಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1