ಮೇ 2 ರಂದು ಚಿತ್ರದುರ್ಗಕ್ಕೆ ಪ್ರಧಾನಿ ನರೇಂದ್ರಮೋದಿ : ಎರಡುವರೆ ಲಕ್ಷ ಜನ ಸೇರುವ ನಿರೀಕ್ಷೆ : ಕೆ.ಎಸ್.ನವೀನ್

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಏ.30) : ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರಮೋದಿರವರು ಮೇ. 2 ರಂದು ಚಿತ್ರದುರ್ಗಕ್ಕೆ ಆಗಮಿಸಲಿದ್ದಾರೆಂದು ವಿಧಾನಪರಿಷತ್ ಸದಸ್ಯ ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್ ತಿಳಿಸಿದರು.

ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್.ನವೀನ್ ಬೆಳಿಗ್ಗೆ 10-30 ಕ್ಕೆ ಪ್ರಧಾನಿ ಮೋದಿರವರು ವೇದಿಕೆಗೆ ಆಗಮಿಸಿ ಅಭ್ಯರ್ಥಿಗಳ ಪರ ಭಾಷಣ ಮಾಡಲಿದ್ದಾರೆ. ಎರಡುವರೆ ಲಕ್ಷ ಜನ ಸೇರುವ ನಿರೀಕ್ಷೆಯಿದ್ದು, ಹತ್ತು ವಿಧಾನಸಭಾ ಕ್ಷೇತ್ರಗಳಿಂದ ಕಾರ್ಯಕರ್ತರು ಆಗಮಿಸಲಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದ್ದು, ಎಂಟು ದಿನದಿಂದ ತಯಾರಿ ನಡೆಯುತ್ತಿದೆ. ಭವ್ಯವಾದ ವೇದಿಕೆ ನಿರ್ಮಿಸಿ ಎಪ್ಪತ್ತೈದು ಸಾವಿರ ಕುರ್ಚಿಗಳನ್ನು ಪೆಂಡಾಲ್‍ನಲ್ಲಿ ಹಾಕಲಾಗುವುದು. ಎರಡು ಜಿಲ್ಲೆಗಳ ಸಂಸದರು, ಅಭ್ಯರ್ಥಿಗಳು, ಅಧ್ಯಕ್ಷರುಗಳು ವೇದಿಕೆಯಲ್ಲಿರುತ್ತಾರೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರು ಬರಬಹುದು ಎಂದು ಹೇಳಿದರು.

ಎರಡು ದಿನಗಳಿಂದ ಪ್ರಧಾನಿ ಮೋದಿರವರು ರಾಜ್ಯದಲ್ಲಿ ರೋಡ್‍ಶೋ, ಸಮಾವೇಶದಲ್ಲಿ ಭಾಗವಹಿಸಿದ್ದು, ಎಲ್ಲೆಡೆ ಜನೋತ್ಸಾಹ ಮುಗಿಲು ಮುಟ್ಟಿದೆ. ಮೋದಿರವರ ಭಾಷಣ ಮತಗಳಾಗಿ ಪರಿವರ್ತನೆಯಾಗಿ ಚುನಾವಣೆ ದಿಕ್ಕು ಬದಲಾಗುತ್ತದೆ. ಪ್ರಧಾನಿ ನರೇಂದ್ರಮೋದಿರವರು ಅಪ್ಪರ್ ಭದ್ರಾ  ಯೋಜನೆಗಾಗಿ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ನೀಡಿದ್ದಾರೆ.

ಚಿತ್ರದುರ್ಗಕ್ಕೆ ಮೆಡಿಕಲ್ ಕಾಲೇಜು, ಹಿರಿಯೂರಿನ ವಾಣಿವಿಲಾಸ ಸಾಗರದ ನಾಲೆ ದುರಸ್ಥಿಗೆ ಹಣ ಬಿಡುಗಡೆ, ಜಲಜೀವನ್ ಮಿಷನ್ ಇವರುಗಳೆಲ್ಲಾ ನಮ್ಮ ಸರ್ಕಾರದ ಜನೋಪಯೋಗಿ ಕೊಡುಗೆಗಳು. ಡಬ್ಬಲ್ ಇಂಜಿನ್ ಸರ್ಕಾರದಿಂದ ಅನೇಕ ಉಪಯೋಗವಾಗಿದೆ. ಜಿಲ್ಲೆಯಲ್ಲಿ ಹನ್ನೆರಡು ಲಕ್ಷ ಫಲಾನುಭವಿಗಳಿದ್ದಾರೆ. ಕಳೆದ ಬಾರಿ ಮೋದಿರವರು ಚಿತ್ರದುರ್ಗಕ್ಕೆ ಬಂದಾಗ ಪುಣ್ಯಕ್ಷೇತ್ರ ನಾಯಕನಹಟ್ಟಿಯ ರಥದ ಮಾದರಿಯನ್ನು ಉಡುಗೊರೆಯಾಗಿ ನೀಡಲಾಗಿತ್ತು. ಅದರಂತೆ ಈ ಬಾರಿಯೂ ಏನಾದರೂ ವಿಶೇಷ ಕೊಡುಗೆ ನೀಡುವುದಾಗಿ ಕೆ.ಎಸ್.ನವೀನ್ ತಿಳಿಸಿದರು.

ಬುಡಕಟ್ಟು ಸಂಸ್ಕೃತಿಯನ್ನು ಪ್ರಧಾನಿ ಮೋದಿಗೆ ಈ ಸಲ ಪರಿಚಯಿಸಲಾಗುವುದು. ಸಮಾವೇಶಕ್ಕೆ ಬರುವವರಿಗೆ ಐದು ಕಡೆ ವಾಹನಗಳ ಪಾರ್ಕಿಂಗ್‍ಗೆ ವ್ಯವಸ್ಥೆ ಮಾಡಲಾಗುವುದು. ಕುಡಿಯುವ ನೀರಿನ ವ್ಯವಸ್ಥೆಯಿರುತ್ತದೆ. ಬೆಳಿಗ್ಗೆ ಸರಿಯಾಗಿ 10-30 ಕ್ಕೆ ಮೋದಿರವರ ಆಗಮನವಾಗಲಿರುವುದರಿಂದ ಕಾರ್ಯಕರ್ತರು ಹಾಗೂ ಸಮಾವೇಶಕ್ಕೆ ಬರುವವರು 9 ರಿಂದ 9-30 ರೊಳಗೆ ಪೆಂಡಾಲ್‍ನಲ್ಲಿರುವಂತೆ ಕೆ.ಎಸ್.ನವೀನ್ ಮನವಿ ಮಾಡಿದರು.

ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ, ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಮಾಜಿ ಸಂಸದ ಜನಾರ್ಧನಸ್ವಾಮಿ, ಪ್ರಧಾನ ಕಾರ್ಯದರ್ಶಿ ನರೇಂದ್ರ, ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ, ಗ್ರಾಮಾಂತರ ಮಂಡಲ ಅಧ್ಯಕ್ಷ ಕಲ್ಲೇಶಯ್ಯ, ವಕ್ತಾರ ನಾಗರಾಜ್‍ಬೇದ್ರೆ, ಯುವ ಮುಖಂಡ ಜಿ.ಎಸ್.ಅನಿತ್‍ಕುಮಾರ್ ಇನ್ನು ಅನೇಕರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

The post ಮೇ 2 ರಂದು ಚಿತ್ರದುರ್ಗಕ್ಕೆ ಪ್ರಧಾನಿ ನರೇಂದ್ರಮೋದಿ : ಎರಡುವರೆ ಲಕ್ಷ ಜನ ಸೇರುವ ನಿರೀಕ್ಷೆ : ಕೆ.ಎಸ್.ನವೀನ್ first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/dWCFfMS
via IFTTT

Leave a Reply

Your email address will not be published. Required fields are marked *