ವರದಿ ಮತ್ತು ಪೋಟೋ ಕೃಪೆ ಸುರೇಶ್ ಪಟ್ಟಣ್

ಚಿತ್ರದುರ್ಗ ಮೇ. 10 ನಗರದ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿ ವತಿಯಿಂದ ಇಂದು ಶನಿವಾರ ವಿದ್ಯಾರ್ಥಿಗಳಿಗೆ ಚಾರಣದ ಮೂಲಕ ಕಲಿಕೆ ಎಂಬ ಶೀರ್ಷಿಕೆಯಡಿ ಸುಮಾರು 80 ವಿದ್ಯಾರ್ಥಿಗಳಿಗೆ ಜೋಗಿಮಟ್ಟಿ ಅರಣ್ಯದ ಹಿಮ್ಮತ್ ಕೇದಾರಗಿರಿಗೆ ಚಾರಣ ಆಯೋಜನೆ ಮಾಡಲಾಗಿತ್ತು.
ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿಯ ಅಧ್ಯಕ್ಷರಾದ ಯೋಗೀಶ್ ಸಹ್ಯಾದ್ರಿ ಅವರು ಚಾರಣದ ನೇತೃತ್ವ ವಹಿಸಿದ್ದು, ವಿದ್ಯಾರ್ಥಿಗಳ ಕಲಿಕೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಮಾತ್ರವಲ್ಲದೆ ಪ್ರಕೃತಿಯ ನಡುವೆ ಅಪಾರವಾದ ವಿಷಯ ಸಂಪತ್ತನ್ನು ಗಳಿಸಿಕೊಳ್ಳಲು ಸಾಧ್ಯವಿದೆ ಎಂದು ಮಕ್ಕಳಿಗೆ ತಿಳಿಸಿದರು. ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಆಯೋಜನೆ ಮಾಡಲಾಗಿದ್ದ ಸ್ಪೋಕನ್ ಇಂಗ್ಲಿಷ್ ಬೇಸಿಗೆ ಶಿಬಿರವು ಮುಕ್ತಾಯವಾದ ಹಿನ್ನೆಲೆಯಲ್ಲಿ ಮಕ್ಕಳು ಹಾಗೂ ಆಸಕ್ತ ಪೋಷಕರು ಚಾರಣದಲ್ಲಿ ಭಾಗವಹಿಸಿದ್ದರು. ವಿವಿಧ ತರಗತಿಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು ಚಾರಣದಲ್ಲಿ, ಅರಣ್ಯ ಇಲಾಖೆಯ ಸಿಬ್ಬಂದಿ ಶರಣ್ ಅವರು ಹಲವು ಪ್ರಾಣಿ ಪಕ್ಷಿಗಳ ಬಗ್ಗೆ ಮಾಹಿತಿ ನೀಡಿದರು. ನಿಸರ್ಗ ಹಾಗೂ ಮಾನವನ ಸೌಹಾರ್ದತೆ ಕುರಿತು ಮಕ್ಕಳಿಗೆ ತಿಳಿಸಿದರು.
ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಶಿವಕುಮಾರ್ ಭಾಗವಹಿಸಿ ಮಾತನಾಡಿ, ಇಂದಿನ ಮಕ್ಕಳಿಗೆ ಪ್ರಕೃತಿ ಪ್ರೇಮದ ಕುರಿತು ಅರಿವು ಮೂಡಿಸುವ ಅಗತ್ಯವಿದೆ. ಪುಸ್ತಕಗಳ ಅಭ್ಯಾಸದ ಜೊತೆ ಜೊತೆಗೆ ಮಕ್ಕಳು ನಿಸರ್ಗ ಪ್ರೇಮವನ್ನು ಬೆಳೆಸಿಕೊಳ್ಳಬೇಕಿದೆ ಹಾಗೂ ಈ ನಿಟ್ಟಿನಲ್ಲಿ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿಯ ಅಧ್ಯಕ್ಷರಾದ ಯೋಗೀಶ್ ಸಹ್ಯಾದ್ರಿ ಅವರ ಕಾರ್ಯ ಶ್ಲಾಘನೀಯವಾದುದು ಎಂದು ಅಭಿಪ್ರಾಯಪಟ್ಟರು.
ಚಾರಣ ಹಾಗೂ ಸ್ಪೋಕನ್ ಇಂಗ್ಲಿಷ್ ಬೇಸಿಗೆ ಶಿಬಿರವನ್ನು ಕುರಿತು ಪೋಷಕರಾದ ಲಾಯರ್ ಚಂದ್ರಶೇಖರ್ ಹಾಗೂ ಮಧು ಮಾತನಾಡಿದರು. ವಿದ್ಯಾರ್ಥಿಗಳು ಹಾಗೂ ಅನೇಕ ಪೋಷಕರು ಚಿತ್ರದುರ್ಗದ ಹೆಮ್ಮೆಯ ಜೋಗಿಮಟ್ಟಿ ಅರಣ್ಯದ ಸೌಂದರ್ಯವನ್ನು ಸವಿದು ಸಂತೋಷ ವ್ಯಕ್ತಪಡಿಸಿದರು.