ಬೆಂಗಳೂರಿನ ಹೋಟೆಲ್​ಗಳಲ್ಲಿ ನೈಟ್ರೋಜನ್ ಆ್ಯಸಿಡ್ ಪಾನ್ ಬ್ಯಾನ್, ಸರ್ಕಾರಕ್ಕೆ‌ ಪತ್ರ.

ಬೆಂಗಳೂರು, ಮೇ 26: ನಗರದಲ್ಲಿ ನೈಟ್ರೋಜನ್ ಆ್ಯಸಿಡ್ ಪಾನ್ (Nitrogen acid pan) ತಿಂದು ಆಗುತ್ತಿರುವ ಅನಾಹುತಗಳನ್ನು ತಡೆಯುವ ಸಲುವಾಗಿ ಬೆಂಗಳೂರು (Bengaluru) ಹೋಟೆಲ್ ಅಸೋಸಿಯೇಷನ್ (Hotel Association) ನೈಟ್ರೋಜನ್ ಸಂಪೂರ್ಣವಾಗಿ ಬ್ಯಾನ್ ಮಾಡಲು ಮುಂದಾಗಿದೆ. ‌ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ. ‌

ಬೆಂಗಳೂರಿನಲ್ಲಿ ನೈಟ್ರೋಜನ್ ಆ್ಯಸಿಡ್ ಪಾನ್ ತಿಂದು 12 ವರ್ಷರ ಪುಟ್ಟ ಬಾಲಕಿಯ ಹೊಟ್ಟೆಯಲ್ಲಿ ರಂದ್ರವಾಗಿತ್ತು. ಈ ಕುರಿತಾಗಿ ಟಿವಿ9 ಸುದ್ದಿ‌ ಕೂಡ ಬಿತ್ತರಿಸಿತ್ತು. ಜೊತೆಗೆ ಹೋಟೆಲ್ ಅಸೋಸಿಯೇಷನ್ ಗಮನಕ್ಕೂ ತಂದಿತ್ತು. ಇದೀಗ ಹೋಟೆಲ್ ಅಸೋಸಿಯೇಷನ್ ನಗರದ ಎಲ್ಲ ಹೋಟೆಲ್​ಗಳ‌ ಮಾಲೀಕರ ಸಭೆ‌ ಕರೆದು ನೈಟ್ರೋಜನ್ ಪಾನ್ ಬ್ಯಾನ್ ಮಾಡುವ ಕುರಿತು ಚರ್ಚಿಸಿದರು. ಸಭೆಯಲ್ಲಿ ನೈಟ್ರೋಜನ್​ ಆ್ಯಸಿಡ್ ಪಾನ್​ಗಳನ್ನು ಸಂಪೂರ್ಣವಾಗಿ‌ ನಿಷೇಧಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ನೈಟ್ರೋಜನ್​ ಆ್ಯಸಿಡ್​ ಪಾನ್​ ನಿಷೇಧಿಸುವಂತೆ ಫೆಡರೇಶನ್ ಆಫ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಚೇಂಬರ್ಸ್ (FKCCI) ಅಸೋಸಿಯೇಷನ್ ಪತ್ರ ಬರೆದಿದೆ.

ನೈಟ್ರೋಜನ್ ಆ್ಯಸಿಡ್ ಪಾನ್ ತಿಂದು ಹೊಟ್ಟೆಯಲ್ಲಿ ರಂಧ್ರ ಪ್ರಕರಣ ಹಿನ್ನೆಲೆಯಲ್ಲಿ, ನೈಟ್ರೋಜನ್ ಪಾನ್ ಸಂಪೂರ್ಣವಾಗಿ ಬ್ಯಾನ್ ಮಾಡಲು ಹೋಟೆಲ್ ಅಸೋಸಿಯೇಷನ್ ನಿರ್ಧಾರ ಮಾಡಿದೆ. ಜೊತೆಗೆ ಎಪ್​ಕೆಸಿಸಿಐ ಗೆ ಮನವಿ‌‌ ಮಾಡಿದ್ದು, ಸರ್ಕಾರದ ಮಟ್ಟದಲ್ಲಿ ಕ್ರಮ ತೆಗೆದುಕೊಳ್ಳುವಂತೆ ಹೋಟೆಲ್ ಅಸೋಸಿಯೇಷನ್ ಮನವಿ ಮಾಡಿದೆ. ಜೊತೆಗೆ ಎಲ್ಲ ಹೋಟೆಲ್ ಹಾಗೂ ಪಾನ್ ಬೀಡಾ ಅಂಗಡಿಗಳಿಗೂ ಹೋಟೆಲ್ ಅಸೋಸಿಯೇಷನ್ ಆದೇಶ ನೀಡಿದೆ. ಈ ಆದೇಶ ಮೀರಿಯೂ ಒಂದು ವೇಳೆ ನೈಟ್ರೋಜನ್ ಆ್ಯಸಿಡ್​ ಪಾನ್ ಮಾರಿದರೇ ಅಂತಹ ಹೋಟೆಲ್​ ಅಥವಾ ಪಾನ್ ಬೀಡಾ ದಂಡ ಆಥವಾ ಪರವಾನಿಗೆ ರದ್ದು ಮಾಡಲು ನಿರ್ಧಾರಿಸಲಾಗಿದೆ.

ಸದ್ಯ ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಪಾರ್ಟಿಗಳ ಸಂದರ್ಭದಲ್ಲಿ ಹೆಚ್ಚಾಗಿ ನೈಟ್ರೋಜನ್ ಪಾನ್ ಬಳಸಲಾಗುತ್ತಿದೆ.‌ ಇದನ್ನ ಕಡ್ಡಾಯವಾಗಿ ಬ್ಯಾನ್ ಮಾಡಲಾಗುತ್ತಿದೆ ಅಂತ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್ ಹೇಳಿದರು. ನೈಟ್ರೋಜನ್ ಪಾನ್​ಗಳಿಂದ ಮಕ್ಕಳ ಆರೋಗ್ಯದ‌ ಮೇಲೆ‌ ಭಾರಿ ಪರಿಣಾಮ ಬೀರುತ್ತಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಂಪೂರ್ಣವಾಗಿ ಬ್ಯಾನ್ ಮಾಡಬೇಕು ಅಂತ ಪೋಷಕರು ಆಗ್ರಹಿಸಿದರು. ಒಟ್ಟಿನಲ್ಲಿ, ಈ ನೈಟ್ರೋಜನ್ ಆ್ಯಸಿಡ್ ಪಾನ್ ಮಕ್ಕಳನ್ನು ಸುಲುಭವಾಗಿ ಆಕರ್ಷಿಸುತ್ತಿದ್ದು,‌ ಇದನ್ನೇ ಕೆಲ ವ್ಯಾಪಾರಸ್ಥರು ಬಂಡವಾಳ ಮಾಡಿಕೊಂಡಿದ್ದಾರೆ. ಹೀಗಾಗಿ ಇದಕ್ಕೆ ಆದಷ್ಟು ಬೇಗ ಸರ್ಕಾರ ಕಡಿವಾಣ ಹಾಕಬೇಕಾಗಿದೆ.

Source : https://tv9kannada.com/karnataka/bengaluru/bengaluru-news-in-kannada-bangalore-hotels-banned-nitrogen-acid-pan-vkb-838873.html

 

Leave a Reply

Your email address will not be published. Required fields are marked *