ಬೆಂಗಳೂರಿನಲ್ಲೊಬ್ಬ ಲಕ್ಕಿ ಭಾಸ್ಕರ್​​: ಒಂದಲ್ಲ, ಎರಡಲ್ಲ 7 ಕೋಟಿ ರೂ ವಂಚನೆ.

ಸಿನಿಮಾ ಸ್ಟೈಲ್​​ನಲ್ಲಿ ಹಣ ಮಾಡಲು ಹೋಗಿ ಓರ್ವ ವ್ಯಕ್ತಿ ಪೊಲೀಸರ ಅತಿಥಿಯಾಗಿರುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಖಾಸಗಿ ಕಂಪನಿಯೊಂದರ ಬರೋಬ್ಬರಿ 7 ಕೋಟಿ ರೂ. ಹಣವನ್ನು ಬೆಟ್ಟಿಂಗ್​ಗೆ ಹಾಕಿದ್ದಾರೆ. ಎಲೆಕ್ಟ್ರಿಸಿಟಿ ಬಿಲ್ ಪಾವತಿ‌ಸದೇ ಬೆಟ್ಟಿಂಗ್​ನಲ್ಲಿ ಹೂಡಿಕೆ ಮಾಡಿದ್ದಾರೆ. ಆಡಿಟಿಂಗ್ ವೇಳೆ ವಿಚಾರ ಬಯಲಾಗಿದ್ದು, ಸದ್ಯ ಆರೋಪಿಯನ್ನು ಬಂಧಿಸಲಾಗಿದೆ.

ಬೆಂಗಳೂರು, ಜನವರಿ 29: ಇತ್ತೀಚೆಗೆ ತೆಲುಗಿನ ‘ಲಕ್ಕಿ ಭಾಸ್ಕರ್’ (Lucky Bhaskar) ಸಿನಿಮಾ ತೆರೆಕಂಡು ಭರ್ಜರಿ ಯಶಸ್ವಿ ಕಂಡಿತ್ತು. ಆ ಚಿತ್ರದಲ್ಲಿ ನಟ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್​​ನಲ್ಲೇ ಹಣವನ್ನು ಕದ್ದು ಬೇರೆಡೆ ಹೂಡಿಕೆ ಮಾಡುವ ಮೂಲಕ ಸಾಕಷ್ಟು ಹಣ ಸಂಪಾದನೆ ಮಾಡುತ್ತಾನೆ. ಒಂದು ಚಿಕ್ಕ ಸುಳಿವು ಕೂಡ ನೀಡದೇ ನಟ ಅದರಿಂದ ಪಾರಾಗುತ್ತಾನೆ. ಇದು ಒಂದು ಚಿತ್ರ. ಆದರೆ ಇಂತಹದೇ ಒಂದು ಘಟನೆ ನಗರದಲ್ಲಿ ನಡೆದಿದ್ದು, ಖಾಸಗಿ ಕಂಪನಿ ಸಿಬ್ಬಂದಿ ಓರ್ವ, ಒಂದಲ್ಲ ಎರಡಲ್ಲ ಬರೋಬ್ಬರಿ  7 ಕೋಟಿ ರೂ. ಹಣ ಬೆಟ್ಟಿಂಗ್​​ಗೆ ಹಾಕಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಖಾಸಗಿ ಕಂಪನಿಯಲ್ಲಿ ಕೆಲಸ‌ ಮಾಡುತ್ತಿದ್ದ ಶ್ರೀಕಾಂತ್​ ಎಂಬಾತನನ್ನು ಅಶೋಕನಗರ ಪೊಲೀಸರು ಸದ್ಯ ಬಂಧಿಸಿದ್ದಾರೆ. ವಿವಿಧ ಕಂಪನಿಗಳಿಗೆ ಅಕೌಂಟಿಂಗ್ ಸರ್ವಿಸ್ ನೀಡುತ್ತಿದ್ದ ಖಾಸಗಿ ಕಂಪನಿಯಲ್ಲಿ ಬಂಧಿತ ಆರೋಪಿ ಶ್ರೀಕಾಂತ್, ಅಸೋಸಿಯೇಟ್ ಅಕೌಂಟೆಂಟ್ ಆಗಿದ್ದರು.

ಸ್ವಿಗ್ಗಿ ಇಂಡಿಯಾದ ಎಲೆಕ್ಟ್ರಿಸಿಟಿ ಬಿಲ್​ ಪಾವತಿಗೆ ಶ್ರೀಕಾಂತ್​ನನ್ನು ನೇಮಿಸಲಾಗಿತ್ತು. ಆದರೆ ಕಳೆದ ವರ್ಷ ಜೂನ್​ನಿಂದ ಡಿಸೆಂಬರ್​ವರೆಗೂ ಕಂಪನಿ ಕ್ರೆಡಿಟ್ ಕಾರ್ಡ್ ಮೂಲಕ ಹಣ ಬಳಕೆ ಮಾಡಿದ್ದು, ಬರೋಬ್ಬರಿ 7 ಕೋಟಿ ರೂ. ಹಣವನ್ನ ಬಿಟಿಎನ್‌ ಎಕ್ಸ್‌ಚೆಂಜ್247.ಕಾಂ (BetinExchange247.com) ಬೆಟ್ಟಿಂಗ್ ಆ್ಯಪ್​ನಲ್ಲಿ ಹೂಡಿಕೆ ಮಾಡಿದ್ದಾರೆ.

ಇದೇ ಜನವರಿಯಲ್ಲಿ ನಡೆದ ಸ್ವಿಗ್ಗಿ ಆಡಿಟಿಂಗ್ ವೇಳೆ ಈ ವಿಚಾರ ಬಯಲಾಗಿದೆ. ವಿಚಾರ ತಿಳಿದು ಪ್ರಶ್ನಿಸಿದಾಗ ಬೆಟ್ಟಿಂಗ್​ನಲ್ಲಿ ಹೂಡಿಕೆ ಮಾಡಿದ್ದು ಬಯಲಾಗಿದೆ. ಬಳಿಕ ಕಂಪನಿಯಿಂದ ಅಶೋಕನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದೂರು ಆಧರಿಸಿ ಅಶೋಕನಗರ ಪೊಲೀಸರು ಶ್ರೀಕಾಂತ್​ನನ್ನು ಬಂಧಿಸಿದ್ದಾರೆ. ಸಿನಿಮಾ ಸ್ಟೈಲ್​ನಲ್ಲಿ ಹಣ ಮಾಡಲು ಹೋಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

Source : https://tv9kannada.com/karnataka/bengaluru/bengaluru-7-crore-employee-betting-scam-lucky-bhaskar-style-fraud-karnataka-news-in-kannada-ggs-970995.html

Leave a Reply

Your email address will not be published. Required fields are marked *