ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಇಂದು ಮುಂಜಾನೆ ಸಂಭವಿಸಿದ ಕಾಲ್ತುಳಿತದಲ್ಲಿ 30 ಜನರು ಸಾವನ್ನಪ್ಪಿದ್ದಾರೆ. ಮೃತರದಲ್ಲಿ ಎಂದು 25 ಜನರನ್ನು ಗುರುತಿಸಲಾಗಿದ್ದು, ಉಳಿದ 5 ಮಂದಿಯನ್ನು ಗುರುತಿಸಲಾಗುತ್ತಿದೆ ಡಿಐಜಿ ವೈಭವ್ ಕೃಷ್ಣ ಮಾಹಿತಿ ನೀಡಿದ್ದಾರೆ. ಕರ್ನಾಟಕದ ನಾಲ್ವರು, ಅಸ್ಸಾಂ ಹಾಗೂ ಗುಜರಾತ್‌ನ ಒಬ್ಬರು ಸೇರಿ ವಿವಿಧ ರಾಜ್ಯಗಳಿಂದ ಪುಣ್ಯಸ್ನಾನಕ್ಕಾಗಿ ಆಗಮಿಸಿದ್ದ ಭಕ್ತರು ಸಾವನ್ನಪ್ಪಿದ್ದಾರೆ. ಕೆಲ ಗಾಯಾಳುಗಳನ್ನು ಅವರ ಸಂಬಂಧಿಕರು ಕರೆದೊಯ್ದಿದ್ದಾರೆ. 36 ಗಾಯಾಳುಗಳು ಸ್ಥಳೀಯ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಕ್ತರ ಅನುಕೂಲಕ್ಕಾಗಿ 1920 ಸಹಾಯವಾಣಿ ಆರಂಭಿಸಲಾಗಿದೆ ಎಂದರು.
ಹೈಲೈಟ್ಸ್:
ಕರ್ನಾಟಕದ ನಾಲ್ವರು, ಅಸ್ಸಾಂ ಹಾಗೂ ಗುಜರಾತ್‌ನ ಒಬ್ಬರು ಸೇರಿ ವಿವಿಧ ರಾಜ್ಯಗಳಿಂದ ಪುಣ್ಯಸ್ನಾನಕ್ಕಾಗಿ ಆಗಮಿಸಿದ್ದ ಭಕ್ತರು ಸಾವು
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತ
ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 30 ಜನರು ಸಾವು, 60 ಮಂದಿಗೆ ಗಾಯ
ಉತ್ತರಪ್ರದೇಶ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಇಂದು ಮುಂಜಾನೆ ಸಂಭವಿಸಿದ ಕಾಲ್ತುಳಿತದಲ್ಲಿ 30 ಜನರು ಸಾವನ್ನಪ್ಪಿದ್ದಾರೆ. ಮೃತರದಲ್ಲಿ ಎಂದು 25 ಜನರನ್ನು ಗುರುತಿಸಲಾಗಿದ್ದು, ಉಳಿದ 5 ಮಂದಿಯನ್ನು ಗುರುತಿಸಲಾಗುತ್ತಿದೆ ಡಿಐಜಿ ವೈಭವ್ ಕೃಷ್ಣ ಮಾಹಿತಿ ನೀಡಿದ್ದಾರೆ.
ಕರ್ನಾಟಕದ ನಾಲ್ವರು, ಅಸ್ಸಾಂ ಹಾಗೂ ಗುಜರಾತ್‌ನ ಒಬ್ಬರು ಸೇರಿ ವಿವಿಧ ರಾಜ್ಯಗಳಿಂದ ಪುಣ್ಯಸ್ನಾನಕ್ಕಾಗಿ ಆಗಮಿಸಿದ್ದ ಭಕ್ತರು ಸಾವನ್ನಪ್ಪಿದ್ದಾರೆ. ಕೆಲ ಗಾಯಾಳುಗಳನ್ನು ಅವರ ಸಂಬಂಧಿಕರು ಕರೆದೊಯ್ದಿದ್ದಾರೆ. 36 ಗಾಯಾಳುಗಳು ಸ್ಥಳೀಯ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಕ್ತರ ಅನುಕೂಲಕ್ಕಾಗಿ 1920 ಸಹಾಯವಾಣಿ ಆರಂಭಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದರು.
‘ಮೌನಿ ಅಮಾವಾಸ್ಯೆಯ ಹಿನ್ನೆಲೆ ಪವಿತ್ರ ಸ್ನಾನ ಮಾಡಲು ಲಕ್ಷಾಂತರ ಯಾತ್ರಾರ್ಥಿಗಳು ಆಗಮಿಸಿದ್ದರು. ಈ ವೇಳೆ ಮಹಾ ಕುಂಭದ ಸಂಗಮ್ ಪ್ರದೇಶದಲ್ಲಿ ಮುಂಜಾನೆ ನೂಕುನುಗ್ಗಲು ಉಂಟಾಯಿತು. ಕಾಲ್ತುಳಿತ ಸಂಭವಿಸುವ ಮೊದಲು ಅನೇಕರು ಬ್ಯಾರಿಕೇಡ್‌ಗಳನ್ನು ಮುರಿಯಲು ಪ್ರಾರಂಭಿಸಿದರು’ ಎಂದು ಡಿಐಜಿ ವೈಭವ್ ಕೃಷ್ಣ ತಿಳಿಸಿದರು.
‘ನಾವು ಎರಡು ಬಸ್‌ಗಳಲ್ಲಿ 60 ಜನರು ಎರಡು ಬ್ಯಾಚ್ ಆಗಿ ಮಹಾ ಕುಂಭಮೇಳಕ್ಕೆ ಬಂದಿದ್ದೇವೆ. ನಮ್ಮ ಗುಂಪಿನಲ್ಲಿ ಒಂಬತ್ತು ಜನರಿದ್ದರು. ಇದ್ದಕ್ಕಿದ್ದಂತೆ ಗುಂಪಿನಲ್ಲಿ ತಳ್ಳಾಟ ಆರಂಭವಾಗಿದ್ದು, ಜನಸಮೂಹವನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ’ ಎಂದು ಕರ್ನಾಟಕದ ಸರೋಜಿನಿ ಎಂಬುವವರು ಪ್ರತಿಕ್ರಿಯಿಸಿದ್ದಾರೆ.
ಬಿದ್ದವರಿಗೆ ಏಳಲು ಆಗಲೇ ಇಲ್ಲ
‘ಜನಸ್ತೋಮದ ನಡುವೆ ಕಳೆದುಹೋಗುವ ಆತಂಕದಿಂದ ಎಲ್ಲರೂ ಕೈಗೆ ಪರಸ್ಪರ ಹಗ್ಗ ಕಟ್ಟಿಕೊಂಡು ತಂಡೋಪ ತಂಡವಾಗಿ ಪುಣ್ಯಸ್ನಾನಕ್ಕೆ ಮುಂದಾಗಿದ್ದರು. ಈ ವೇಳೆ ನೂಕಾಟ ತಳ್ಳಾಟದಿಂದ ಕೆಳ ಬಿದ್ದವರಿಗೆ ಮೇಲೆ ಏಳಲು ಆಗಲೇ ಇಲ್ಲ. ಕೆಲ ಹೊತ್ತಿನ ಬಳಿಕ ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ,’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಾಲ್ತುಳಿತದಲ್ಲಿ ಬೆಳಗಾವಿಯ ನಾಲ್ವರ ಸಾವು
ಬೆಳಗಾವಿ ಜಿಲ್ಲೆಯಿಂದ ಮಹಾಕುಂಭ ಮೇಳಕ್ಕೆ ತೆರಳಿದ್ದ ತಾಯಿ – ಮಗಳು ಸೇರಿ ನಾಲ್ವರು ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ. ಬೆಳಗಾವಿ ನಗರದ ವಡಗಾವಿಯ ಜ್ಯೋತಿ ಹತ್ತರವಾಠ(50) ಹಾಗೂ ಅವರ ಪುತ್ರಿ ಮೇಘಾ ಹತ್ತರವಾಠ(25), ಶೆಟ್ಟಿಗಲ್ಲಿ ನಿವಾಸಿ ಅರುಣ ಕೋರ್ಪಡೆ ಹಾಗೂ ಶಿವಾಜಿ ನಗರದ ಮಹಾದೇವಿ ಭವನೂರು ಮೃತರು. ಇನ್ನುಳಿದವರಿಗೆ ಪ್ರಯಾಗರಾಜ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಗಾವಿಯಿಂದ 30ಕ್ಕೂ ಅಧಿಕ ಜನ ಪ್ರಯಾಗರಾಜ್‌ಗೆ ತೆರಳಿದ್ದಾರೆ. ಮಹಾಕುಂಭ ಮೇಳಕ್ಕೆ ತೆರಳಿದವರ ಸದ್ಯದ ಮಾಹಿತಿ ಪಡೆಯಲಾಗುತ್ತಿದೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಬೆಳಗಾವಿಯ ಸರೋಜಿನಿ ನಡುವಿನಹಳ್ಳಿ, ಕಾಂಚನ್ ಕೋರ್ಪಡೆ ಎಂಬುವವರು ಗಾಯಗೊಂಡಿದ್ದು, ಇನ್ನು ಕೆಲವರು ನಾಪತ್ತೆಯಾಗಿದ್ದಾರೆ.
ಹಠ ಹಿಡಿದು ಹೊರಟಿದ್ದರು
‘144 ವರ್ಷಕ್ಕೊಮ್ಮೆ ಮಹಾಕುಂಭ ಬರುತ್ತದೆ. ನಾನು ಹೋಗಿ ಬರುತ್ತೇನೆ ಎಂದು ಹಠ ಹಿಡಿದು ಹೋಗಿದ್ದರು. ಆದರೆ, ಅವರು ಬರದೇ ಸಾವಿನ ಸುದ್ದಿ ಬಂದಿದೆ,’ ಎಂದು ಮೇಘಾ ತಂದೆ ದೀಪಕ್ ಹತ್ತರವಾಟ ಕಣ್ಣೀರಾದರು. ಕಾಲ್ತುಳಿದಲ್ಲಿ ಪತ್ನಿ ಹಾಗೂ ಪುತ್ರಿ ಮೃತಪಟ್ಟಿರುವ ಸುದ್ದಿ ಕೇಳಿ ಆಘಾತಕ್ಕೊಳಗಾದ ಅವರು, ‘ಜ.26ರಂದು ಮಧ್ಯಾಹ್ನ ಬೆಳಗಾವಿಯಿಂದ ತೆರಳಿದ್ದರು. ನಿನ್ನೆ ರಾತ್ರಿ ಇಬ್ಬರೂ ವಿಡಿಯೊ ಕಾಲ್‌ನಲ್ಲಿ ಮಾತನಾಡಿದ್ದರು. ಬುಧವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಮೃತಪಟ್ಟಿರುವ ಮಾಹಿತಿ ಗೊತ್ತಾಗಿದೆ. ಮೇಘಾ ಪದವಿ ಪೂರೈಸಿ ಸ್ಟೇಷನರಿ ಅಂಗಡಿ ನಡೆಸುತ್ತಿದ್ದರು. ಈ ಬಾರಿ ಮದುವೆ ಮಾಡುವ ವಿಚಾರ ಇತ್ತು,’ ಎಂದರು.