ಮಹಾ ಶಿವರಾತ್ರಿ 2025ರ ಮುಹೂರ್ತ, ಪೂಜೆ ವಿಧಾನ, ಇತಿಹಾಸ, ಮಹತ್ವ, 4 ಪ್ರಹಾರಗಳ ಪೂಜೆ.!

ಹಿಂದೂಗಳ ಪ್ರಮುಖ ಹಬ್ಬವಾದ ಮಹಾ ಶಿವರಾತ್ರಿಯನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಈ ಹಬ್ಬವು ಹಿಂದೂ ಧರ್ಮದ ಪ್ರಮುಖ ದೇವರುಗಳಲ್ಲಿ ಒಬ್ಬನಾದ ಶಿವನ ಭಕ್ತಿಗಾಗಿ ಆಚರಿಸಲ್ಪಡುತ್ತದೆ. “ಶಿವನ ಮಹಾ ರಾತ್ರಿ” ಎಂದೂ ಕರೆಯಲ್ಪಡುವ ಮಹಾ ಶಿವರಾತ್ರಿಯು ಶಿವನ ಆಶೀರ್ವಾದವನ್ನು ಪಡೆಯಲು ಒಂದು ಶುಭ ಆಚರಣೆಯಾಗಿದೆ. ಶಿವನ ಶಕ್ತಿಗಳು ಹೆಚ್ಚು ಸಕ್ರೀಯವಾಗಿರುವ ರಾತ್ರಿ ಇದಾಗಿದೆ. ಈ ದಿನದಂದು ಭಕ್ತರು ಶುದ್ಧ ಮನಸ್ಸಿನಿಂದ ಶಿವನನ್ನು ಪೂಜಿಸುತ್ತಾರೆ. 2025ರ ಮಹಾ ಶಿವರಾತ್ರಿ ಹಬ್ಬವನ್ನು ಫೆಬ್ರವರಿ 26ರಂದು ಬುಧವಾರ ಆಚರಿಸಲಾಗುವುದು. 2025ರ ಮಹಾ ಶಿವರಾತ್ರಿ ಹಬ್ಬದ ಕುರಿತು ನೀವು ತಿಳಿದುಕೊಳ್ಳಬೇಕಾದ ಪ್ರಮುಖ ವಿಚಾರಗಳು ಹೀಗಿವೆ..

ಮಹಾ ಶಿವರಾತ್ರಿ ಮಹತ್ವ

ಮಹಾ ಶಿವರಾತ್ರಿ ಮಹತ್ವ

ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಮಹಾ ಶಿವರಾತ್ರಿ ಒಂದು, ಇದನ್ನು ಶಿವ ಮತ್ತು ಪಾರ್ವತಿಯ ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಈ ದಿನವು ಹಿಂದೂಗಳಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಪೌರಾಣಿಕ ಕಥೆಗಳ ಪ್ರಕಾರ, ಈ ದಿನದಂದು ಶಿವ ಮತ್ತು ಪಾರ್ವತಿಯ ಸಮ್ಮಿಲನವಾಯಿತೆಂದು ಹೇಳಲಾಗಿದೆ. ಪುರುಷ ಮತ್ತು ಸ್ತ್ರೀ ಶಕ್ತಿಗಳ ನಡುವಿನ ಸಾಮರಸ್ಯವನ್ನು ಸಂಕೇತಿಸುವ ಮೂಲಕ ಅವರ ಒಕ್ಕೂಟವು ಸಾಮರಸ್ಯ ಮತ್ತು ವಿಶ್ವ ಕ್ರಮವನ್ನು ಪ್ರತಿನಿಧಿಸುತ್ತದೆ. ಈ ಹಬ್ಬವು ಸ್ವಯಂ ನಿಯಂತ್ರಣ, ಆತ್ಮಾವಲೋಕನ ಮತ್ತು ಆಧ್ಯಾತ್ಮಿಕ ಜಾಗೃತಿಯಂತಹ ವಿವಿಧ ವಿಷಯಗಳನ್ನು ಕಲಿಸುತ್ತದೆ. ಪುನರ್ಜನ್ಮವನ್ನು ಸ್ವೀಕರಿಸಲು ಮತ್ತು ನಕಾರಾತ್ಮಕತೆಯನ್ನು ಬಿಡಲು ಮಹಾ ಶಿವರಾತ್ರು ಹಬ್ಬವು ಜನರನ್ನು ಪ್ರೋತ್ಸಾಹಿಸುತ್ತದೆ.

ಮಹಾ ಶಿವರಾತ್ರಿ 2025ರ ಶುಭ ಮುಹೂರ್ತ

ಮಹಾ ಶಿವರಾತ್ರಿ 2025ರ ಶುಭ ಮುಹೂರ್ತ

ದೃಕ್‌ ಪಂಚಾಂಗದ ಪ್ರಕಾರ, 2025ರ ಮಹಾ ಶಿವರಾತ್ರಿ ಹಬ್ಬದ ಶುಭ ಮುಹೂರ್ತಗಳು ಹೀಗಿವೆ:
– ಚತುರ್ದಶಿ ತಿಥಿ ಆರಂಭ – ಫೆಬ್ರವರಿ 26 ರಂದು ಬೆಳಗ್ಗೆ 11:08 ಕ್ಕೆ
– ಚತುರ್ದಶಿ ತಿಥಿ ಮುಕ್ತಾಯ – ಫೆಬ್ರವರಿ 27 ರಂದು ಬೆಳಗ್ಗೆ 8:54 ಕ್ಕೆ
– ನಿಶಿತಾ ಕಾಲ ಪೂಜೆ ಸಮಯ – ಫೆಬ್ರವರಿ 27 ರಂದು ಮಧ್ಯರಾತ್ರಿ 12:09 ರಿಂದ 12:59
– ಶಿವರಾತ್ರಿ ಪಾರಣ ಸಮಯ – ಫೆಬ್ರವರಿ 27 ರಂದು ಬೆಳಗ್ಗೆ 6:48 ರಿಂದ 8:54 ರವರೆಗೆ
– ರಾತ್ರಿ ಮೊದಲ ಪ್ರಹಾರ ಪೂಜೆ ಸಮಯ – ಫೆಬ್ರವರಿ 26 ರಂದು ಸಂಜೆ 6:19 ರಿಂದ 9:26 ರವರೆಗೆ
– ರಾತ್ರಿ ಎರಡನೇ ಪ್ರಹಾರ ಪೂಜೆ ಸಮಯ – ಫೆಬ್ರವರಿ 27 ರಂದು ಸಂಜೆ 9:26 ರಿಂದ ಮಧ್ಯರಾತ್ರಿ 12:34
– ರಾತ್ರಿ ಮೂರನೇ ಪ್ರಹಾರ ಪೂಜೆ ಸಮಯ – ಫೆಬ್ರವರಿ 27 ರಂದು ಮಧ್ಯರಾತ್ರಿ 12:34 ರಿಂದ ಮುಂಜಾನೆ 3:41
– ರಾತ್ರಿ ನಾಲ್ಕನೇ ಪ್ರಹಾರ ಪೂಜೆ ಸಮಯ – ಫೆಬ್ರವರಿ 27 ರಂದು ಮುಂಜಾನೆ 3:41 ರಿಂದ ಬೆಳಗ್ಗೆ 6:48 ರವರೆಗೆ

ಮಹಾ ಶಿವರಾತ್ರಿ ಪೂಜೆ ವಿಧಾನ

– ಈ ದಿನ ಮುಂಜಾನೆ ಭಕ್ತರು ಬೇಗ ಎದ್ದು ಸ್ನಾನ ಇತ್ಯಾದಿಗಳನ್ನು ಮಾಡಿ ಶುದ್ಧರಾಗಿ, ಸ್ವಚ್ಛವಾದ ಬಟ್ಟೆಯನ್ನು ಧರಿಸಬೇಕು.
– ಮನೆಯಲ್ಲಿ ಶಿವನ ವಿಗ್ರಹ, ಶಿವಲಿಂಗ, ಫೋಟೋವನ್ನು ದೇವರ ಕೋಣೆಯಲ್ಲಿ ಪ್ರತಿಷ್ಠಾಪನೆ ಮಾಡಿ. ಜೇನುತುಪ್ಪ, ಹಾಲು, ನೀರು ಮತ್ತು ಬಿಲ್ವಪತ್ರೆಯನ್ನು ಅರ್ಪಿಸಿ.
– ಮನೆಯಲ್ಲಿ ಶಿವನನ್ನು ಪೂಜಿಸಲು ಸಾಧ್ಯವಾಗದೇ ಇದ್ದರೆ ಹತ್ತಿರದ ಶಿವ ದೇವಸ್ಥಾನಗಳಿಗೆ ಭೇಟಿ ನೀಡಿ ಶಿವ ಪೂಜೆ ಮಾಡಬೇಕು.
– ಈ ದಿನ ಪೂರ್ತಿ ಶಿವ ನಾಮ, ಶಿವ ಸ್ತೋತ್ರ, ಓಂ ನಮಃ ಶಿವಾಯ ಮಂತ್ರಗಳನ್ನು ಸೇರಿದಂತೆ ಇನ್ನಿತರ ಶಿವ ಮಂತ್ರಗಳನ್ನು ಪಠಿಸಬೇಕು.
– ಸಂಜೆ, ಭಕ್ತರು ಶಿವ ಪೂಜೆ ಮಾಡುವ ಮೊದಲು ಅಥವಾ ದೇವಸ್ಥಾನಕ್ಕೆ ಭೇಟಿ ನೀಡುವ ಮೊದಲು ಎರಡನೇ ಸ್ನಾನ ಮಾಡುತ್ತಾರೆ. ಪೂಜೆಯನ್ನು ಸಾಮಾನ್ಯವಾಗಿ ರಾತ್ರಿಯಲ್ಲಿ ಮಾಡಲಾಗುತ್ತದೆ.
– ಈ ದಿನ ಉಪವಾಸ ವ್ರತ ಮಾಡಿದವರು ಮರುದಿನ ಬೆಳಗ್ಗೆ ಸ್ನಾನ ಮಾಡಿದ ನಂತರ ಉಪವಾಸವನ್ನು ಕೊನೆಗೊಳಿಸುತ್ತಾರೆ.
– ವ್ರತದ ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಭಕ್ತರು ಸೂರ್ಯೋದಯದ ನಡುವೆ ಮತ್ತು ಚತುರ್ದಶಿ ತಿಥಿಯ ಅಂತ್ಯದ ಮೊದಲು ತಮ್ಮ ಉಪವಾಸವನ್ನು ಕೊನೆಗೊಳಿಸಬೇಕು.
– ಭಕ್ತರು ರಾತ್ರಿಯಲ್ಲಿ ಒಂದು ಅಥವಾ ನಾಲ್ಕು ಬಾರಿ ಶಿವರಾತ್ರಿ ಪೂಜೆಯನ್ನು ಮಾಡಬಹುದು, ರಾತ್ರಿಯನ್ನು ನಾಲ್ಕು ಪ್ರಹಾರಗಳಾಗಿ ವಿಂಗಡಿಸಿ ನಾಲ್ಕು ಬಾರಿ ಪೂಜೆಯನ್ನು ಮಾಡಬಹುದು.

ಮಹಾ ಶಿವರಾತ್ರಿ ದಿನ ಉಪವಾಸ ವ್ರತ ಮಾಡುವುದು ಹೇಗೆ.?

ಮಹಾ ಶಿವರಾತ್ರಿ ದಿನ ಉಪವಾಸ ವ್ರತ ಮಾಡುವುದು ಹೇಗೆ.?

– ಈ ದಿನ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಶುದ್ಧವಾದ ಬಟ್ಟೆಯನ್ನು ಧರಿಸಿ.
– ದಿನವಿಡೀ ನಿರ್ಜಲ ಉಪವಾಸ ಅಥವಾ ಫಲಹಾರ ಉಪವಾಸ ಅಥವಾ ಸಾತ್ವಿಕ ಆಹಾರ ಸೇವನೆಯ ಮೂಲಕ ಉಪವಾಸವನ್ನು ಮಾಡಬಹುದು. ಆದರೆ, ನಿರ್ಜಲ ಉಪವಾಸಕ್ಕೆ ಹೆಚ್ಚಿನ ಮಹತ್ವವಿದೆ.
– ಶಿವ ದೇವಾಲಯಗಳಿಗೆ ಭೇಟಿ ನೀಡಿ ಮತ್ತು ರುದ್ರಾಭಿಷೇಕ ಮಾಡಿ
– ಶಿವ ಮಂತ್ರಗಳನ್ನು ಪಠಿಸಿ ಮತ್ತು “ಓಂ ನಮಃ ಶಿವಾಯ” ಎಂದು ಜಪಿಸಿ
– ರಾತ್ರಿ ಜಾಗರಣೆಯನ್ನು ಮಾಡಿ 4 ಬಾರಿ ಶಿವ ಪೂಜೆಯನ್ನು ಮಾಡಬೇಕು.
– ಮರುದಿನ ಬೆಳಗ್ಗೆ ಪ್ರಾರ್ಥನೆ ಸಲ್ಲಿಸಿದ ನಂತರ ಉಪವಾಸವನ್ನು ಮುಕ್ತಾಯಗೊಳಿಸಿ

ಮಹಾ ಶಿವರಾತ್ರಿ ಇತಿಹಾಸ

ಮಹಾ ಶಿವರಾತ್ರಿ ಇತಿಹಾಸ

ಮಹಾ ಶಿವರಾತ್ರಿ ಹಬ್ಬಕ್ಕೆ ಸಂಬಂಧಿಸಿದಂತೆ ಅನೇಕ ದಂತಕಥೆಗಳು, ಪುರಾಣಗಳು ಮತ್ತು ಕಥೆಗಳು ಇವೆ. ಒಂದು ಅತ್ಯಂತ ಜನಪ್ರಿಯ ನಂಬಿಕೆಯ ಪ್ರಕಾರ, ಮಹಾ ಶಿವರಾತ್ರಿ ಹಬ್ಬವು ಶಿವ ಮತ್ತು ಪಾರ್ವತಿ ದೇವಿಯ ವಿವಾಹದ ಪವಿತ್ರ ರಾತ್ರಿಯನ್ನು ಸೂಚಿಸುತ್ತದೆ. ಅನೇಕ ವರ್ಷಗಳ ಧ್ಯಾನ ಮತ್ತು ತಪಸ್ಸಿನ ನಂತರ ಒಂದು ಮಹಾ ಶಿವರಾತ್ರಿಯ ದಿನದಂದು ಶಿವನು ಪಾರ್ವತಿಯನ್ನು ತನ್ನ ದೈವಿಕ ಸಂಗಾತಿಯನ್ನಾಗಿ ಪಡೆದನು. ಇನ್ನೊಂದು ಕಥೆಯ ಪ್ರಕಾರ, ಶಿವನು ತಾಂಡವ ನೃತ್ಯವನ್ನು ಮಾಡಿದ ರಾತ್ರಿಯಿದು. ಶಿವನು ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶದ ವಿಶ್ವ ನೃತ್ಯವಾದ ತಾಂಡವ ನೃತ್ಯವನ್ನು ಈ ರಾತ್ರಿಯಂದು ಮಾಡಿದನೆಂದು ನಂಬಲಾಗಿದೆ. ಆದ್ದರಿಂದ ಭಕ್ತರು ರಾತ್ರಿಯಿಡೀ ಪ್ರಾರ್ಥನೆ, ಪೂಜೆ ಮತ್ತು ಮಂತ್ರಗಳನ್ನು ಪಠಿಸುವ ಮೂಲಕ ಶಿವನನ್ನು ಪೂಜಿಸುತ್ತಾರೆ. ಮಹಾ ಶಿವರಾತ್ರಿಗೆ ಸಂಬಂಧಿಸಿದ ಮತ್ತೊಂದು ಕಥೆಯ ಪ್ರಕಾರ, ಈ ದಿನ ಶಿವನು ಸಮುದ್ರ ಮಂಥನದಿಂದ ಹೊರಬಂದ ಹಾಲಾಹಲ ವಿಷವನ್ನು ಸೇವಿಸಿದನು. ಈ ವಿಷವು ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ ಇಡೀ ವಿಶ್ವವನ್ನೇ ನಾಶ ಮಾಡುವ ಸಾಮರ್ಥ್ಯವನ್ನು ಹೊಂದಿತ್ತು. ಹಾಗಾಗಿ ಶಿವನು ಆ ವಿಷವನ್ನು ತಾನೇ ಸೇವಿಸುವ ಮೂಲಕ ಬ್ರಹ್ಮಾಂಡವನ್ನು ಕಾಪಾಡಿ ‘ನೀಲಕಂಠ’ ನೆನಿಸಿಕೊಂಡನು.

Source : https://vijaykarnataka.com/religion/festivals/maha-shivratri-2025-date-and-time-4-prahar-puja-pooja-procedure-history-and-importance/articleshow/118538367.cms?story=5

Leave a Reply

Your email address will not be published. Required fields are marked *