ಮಹಾಘಟಬಂಧನ್: ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಇಂದು-ನಾಳೆ ಮಹಾಮೈತ್ರಿ ಸಭೆ

Mahaghatabandhan: ಮೋದಿ ಮಣಿಸಲು ಕಾಂಗ್ರೆಸ್ ಮಹಾಘಟಬಂಧನ ಪ್ಲ್ಯಾನ್ ರೂಪಿಸಿದ್ದು ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಮಹಾಘಟಬಂದನ್‌ ಸಭೆ  ನಡೆಯಲಿದೆ. ಈ ಸಭೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.  ಬಿಹಾರ ಸಿಎಂ ನಿತೀಶ್ ಕುಮಾರ್ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ.  

Mahaghatabandhan: ಮೋದಿ ವಿರುದ್ಧ ವಿಪಕ್ಷಗಳು ಸಮರ ಸಾರಿವೆ… ಶತಾಯ ಗತಾಯ ಮೋದಿಯನ್ನು ಮುಂದಿನ ಚುನಾವಣೆಯಲ್ಲಿ ಅಧಿಕಾರದಿಂದ ದೂರ ಇಡಲು ರಣತಂತ್ರ ಹೆಣೆದಿರುವ ಪ್ರತಿಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸಿವೆ. ಈ ನಿಟ್ಟಿನಲ್ಲಿ ಇಂದಿನಿಂದ 2 ದಿನಗಳ ಕಾಲ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಲೋಕ ಗೆಲ್ಲಲು  ವಿಪಕ್ಷಗಳು ಮಹಾತಂತ್ರ ನಡೆಸಿವೆ.. ಈ ಬಗ್ಗೆ ಒಂದು ವರದಿ ಇಲ್ಲಿದೆ…

ಬೆಂಗಳೂರಿನತ್ತ ಆಗಮಿಸುತ್ತಿರುವ ಮಿತ್ರ ಪಕ್ಷಗಳ ದಂಡು: 
ಹೌದು, 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ದಿಟ್ಟ ಹೋರಾಟ ನಡೆಸಲು ವಿರೋಧಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸುತ್ತಿವೆ. ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆದ ಮೊದಲ ರಾಜಕೀಯ ಸಭೆಯ ಬಳಿಕ ಇದೀಗ ಕರ್ನಾಟಕದ ರಾಜಧಾನಿ ಬೆಂಗಳೂರಿನತ್ತ ಆಗಮಿಸುತ್ತಿರುವ ಯುಪಿಎ ಮಿತ್ರಪಕ್ಷಗಳ ದಂಡು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ರಣತಂತ್ರ ರೂಪಿಸಲಿದೆ. 

ಪಾಟ್ನಾದಲ್ಲಿ ನಡೆದ ಮೊದಲ ಮಹಾಘಟಬಂಧನ್ ಸಭೆಗೆ ಆಹ್ವಾನ ನೀಡತ್ತಲಾಗಿದ್ದರೂ ಜೆಡಿಎಸ್ ನಾಯಕರು ಆ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಹಾಗಾಗಿ, ಇಂದು ಮತ್ತು ನಾಳೆ ಬೆಂಗಳೂರಲ್ಲೇ ಮೈತ್ರಿ ಕೂಟದ ಸಭೆ ನಡೆಯುತ್ತಿದ್ದರೂ ಸಹ ಜೆಡಿಎಸ್ ಪಕ್ಷ ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಳ್ಳುವ ವದಂತಿಯ ಹಿನ್ನೆಲೆಯಲ್ಲಿ ಇದುವರೆಗೂ ಜೆಡಿಎಸ್ ಪಕ್ಷಕ್ಕೆ ಅಧಿಕೃತ ಆಹ್ವಾನ ನೀಡಿಲ್ಲ ಎಂದು ಹೇಳಲಾಗುತ್ತಿದೆ. 

ಜುಲೈ 17 ಮತ್ತು ಜುಲೈ 18ರಂದು  ಬೆಂಗಳೂರಿನ  ಪ್ರಸಿದ್ಧ ಖಾಸಗಿ ಹೋಟೆಲ್‌ಗಳಲ್ಲಿ ಒಂದಾದ ತಾಜ್ ವೆಸ್ಟೆಂಡ್‌ನಲ್ಲಿ ಮಹಾಘಟಾಬಂಧನ್ ಮಹಾಮಿಲನ ನಡೆಯಲಿದೆ. ಈ ಹಿನ್ನಲೆಯಲ್ಲಿ ರೇಸ್‌ಕೋರ್ಸ್‌ ರಸ್ತೆಯಲ್ಲಿ ಯುಪಿಎ ಮಿತ್ರಪಕ್ಷಗಳ ಪ್ರಮುಖ ನಾಯಕರ ಬಾವುಟಗಳು ರಾರಾಜಿಸುತ್ತಿವೆ.  ಈಗಾಗಲೇ ಕೆಲ ರಾಷ್ಟ್ರ ನಾಯಕರು ಬೆಂಗಳೂರಿಗೆ ಆಗಮಿಸಿದ್ದಾರೆ. ಕೋಲ್ಕತ್ತಾ ಹಾಗೂ ಉತ್ತರ ಪ್ರದೇಶದಿಂದ ವಿವಿಧ ಪಕ್ಷದ ನಾಯಕರು ಬೆಂಗಳೂರಿಗೆ ಆಗಮಿಸಿದ್ದಾರೆ. ಕಾಂಗ್ರೆಸ್‌ನ ಮಾಜಿ ಸಚಿವ ಹಾಲಿ ರಾಜ್ಯಸಭಾ ಸದಸ್ಯ ಡೆರೆಕ್ ಒರ್ಬಿನ್, ಸಮಾಜವಾದಿ ಪಾರ್ಟಿಯ ಲಾಲ್ ಜಿ ವರ್ಮಾ, ರಾಮಚಂದ್ರ ರಾಜ್ಯಾಭಾರ್ ಆಗಮಿಸಿದ್ದು, ರಾಜ್ಯ ಕಾಂಗ್ರೆಸ್ ನಾಯಕರಾದ ಶರತ್ ಬಚ್ಚೇಗೌಡ ಮತ್ತು ಎಸಿ ಶ್ರೀನಿವಾಸ್ ಅವರು ಗಣ್ಯರಿಗೆ ಸ್ವಾಗತ ಕೋರಿದ್ದಾರೆ.

ಇನ್ನೂ ರಾಜ್ಯಕ್ಕೆ ಆಗಮಿಸುತ್ತಿರುವ ರಾಷ್ಟ್ರೀಯ ನಾಯಕರನ್ನು ಬರಮಾಡಿಕೊಳ್ಳಲು ರಾಜ್ಯ ಕಾಂಗ್ರೆಸ್ ಘಟಕ ಪ್ರತ್ಯೇಕವಾಗಿ ಒಬ್ಬೊಬ್ಬ ನಾಯಕರನ್ನ ಬರಮಾಡಿಕೊಳ್ಳಲು ಒಬ್ಬೊಬ್ವ ಶಾಸಕರನ್ನು ನೇಮಕ ಮಾಡಿದೆ. ರಾಷ್ಟ್ರೀಯ ನಾಯಕರನ್ನು ಬೆಂಗಳೂರು ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಿಂದ ನೇರವಾಗಿ ಹೋಟೆಲ್‌ಗಳಿಗೆ ಕರೆದುಕೊಂಡು ಹೋಗಲಾಗ್ತಿದೆ. ಇನ್ನೆರಡು ದಿನ ಬೆಂಗಳೂರಿನಲ್ಲೇ ಬೀಡು ಬಿಡಲಿರುವ ಮಿತ್ರ ಪಕ್ಷಗಳ ನಾಯಕರು ಮಹಾಸಭೆಯಲ್ಲಿ ಪ್ರಮುಖ ವಿಚಾರಗಳ ಕುರಿತು ಮಹತ್ವದ ಚರ್ಚೆ ನಡೆಸಲಿದ್ದಾರೆ.

ಯಾವ್ಯಾವ ಪಕ್ಷಗಳು ಸಭೆಯಲ್ಲಿ ಭಾಗವಹಿಸಲಿವೆ?

  1. ಕಾಂಗ್ರೆಸ್
  2. ತೃಣಮೂಲ ಕಾಂಗ್ರೆಸ್
  3. ಎನ್ ಸಿಪಿ
  4. ಸಿಪಿಐಎಂ
  5. ಸಿಪಿಐ
  6. ಆರ್ ಜೆಡಿ
  7. ಜೆಡಿಯು
  8. ಡಿಎಂಕೆ
  9. ಸಮಾಜವಾದಿ ಪಾರ್ಟಿ
  10. ಶಿವಸೇನೆ( ಉದ್ಧವ್ ಬಣ)
  11. ಎಎಪಿ
  12. ಜೆಎಂಎಂ
  13. ನ್ಯಾಷನಲ್ ಕಾನ್ಫರೆನ್ಸ್ ಪಾರ್ಟಿ
  14. ಪೀಪಲ್ ಡೆಮಾಕ್ರಟಿಕ್ ಪಾರ್ಟಿ
  15. ಸಿಪಿಐಎಂಎಲ್
  16. ಎಂಡಿಕೆ
  17. ಆರ್ ಎಸ್ ಪಿ
  18. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್
  19. ಕೇರಳ ಕಾಂಗ್ರೆಸ್( ಜೆ)
  20. ಕೇರಳ ಕಾಂಗ್ರೆಸ್( ಎಂ)
  21. ತಮಿಳು ಮಕ್ಕಳ್ ಕಚ್ಚಿ

ಸಭೆಯಲ್ಲಿ ಭಾಗವಹಿಸುವ ಪ್ರಮುಖ ನಾಯಕರು: 
ಇಂದು ನಾಳೆ ಬೆಂಗಳೂರಿನಲ್ಲಿ ನಡೆಯಲಿರುವ ಮಹಾಘಟಾಬಂಧನ್ ನಲ್ಲಿ ಘಟಾನುಘಟಿ ನಾಯಕರುಗಳು ಭಾಗಿಯಲ್ಲಿದ್ದು, ಇವರಲ್ಲಿ 6 ಮಂದಿ ಹಾಲಿ ಸಿಎಂಗಳು ಹಾಗೂ 6 ಮಾಜಿ ಸಿಎಂಗಳು ಕೂಡ ಭಾಗಿಯಾಗಲಿದ್ದಾರೆ. 

  • ಮಮತಾ ಬ್ಯಾನರ್ಜಿ( ಪ.ಬಂ.ಸಿಎಂ)
  • ಉದ್ದವ ಠಾಕ್ರೆ( ಮಾಜಿಸಿಎಂ ಶಿವಸೇನೆ)
  • ಆದಿತ್ಯ ಠಾಕ್ರೆ( ಶಿವಸೇನೆ)
  • ಹೇಮಂತ್ ಸೊರೇನ್( ಜೆಎಂಎಂ)
  • ಎಂಕೆ ಸ್ಟ್ಯಾಲಿನ್( ತಮಿಳುನಾಡು ಸಿಎಂ)
  • ನಿತೀಶ್ ಕುಮಾರ್( ಬಿಹಾರ ಸಿಎಂ)
  • ಶರದ್ ಪವಾರ್( ಎನ್ ಸಿಪಿ ಮುಖ್ಯಸ್ಥ)
  • ಸುಪ್ರಿಯಾ ಸುಳೆ( ಎನ್ ಸಿಪಿ ಸಂಸದೆ)
  • ಅಖಿಲೇಶ್ ಯಾದವ್( ಮಾಜಿ ಸಿಎಂ)
  • ಅರವಿಂದ್ ಕೇಜ್ರಿವಾಲ್( ದೆಹಲಿ ಸಿಎಂ)
  • ಭಗವಂತ್ ಮಾನ್( ಪಂಜಾಬ್ ಸಿಎಂ)
  • ಸೋನಿಯಾ ಗಾಂಧಿ( ಎಐಸಿಸಿ)
  • ರಾಹುಲ್ ಗಾಂಧಿ( ಎಐಸಿಸಿ)
  • ಮೆಹಬೂಬಾ ಮುಫ್ತಿ( ಮಾಜಿ ಸಿಎಂ)
  • ಲಾಲು ಪ್ರಸಾದ್ ಯಾದವ್( ಆರ್ ಜೆಡಿ)
  • ಡಿ ರಾಜಾ( ಸಿಪಿಐ)
  • ಸೀತಾರಾಂ ಯೆಚೂರಿ( ಸಿಪಿಐಎಂ)
  • ಓಮರ್ ಅಬ್ದುಲ್ಲಾ( ಮಾಜಿ ಸಿಎಂ)
  • ತೇಜಸ್ವಿ ಯಾದವ್( ಬಿಹಾರ ಡಿಸಿಎಂ)

ಬೆಂಗಳೂರಿನ ಹಲವೆಡೆ ರಸ್ತೆ ಮಾರ್ಗ ಬದಲಾವಣೆ: 
ಇನ್ನು ಬೆಂಗಳೂರಿನ ತಾಜ್‌ ವೆಸ್ಟೆಂಡ್‌ ಹೋಟೆಲ್‌ನಲ್ಲಿ ಮಹಾಘಟಬಂದನ್‌ ಸಭೆ ನಡೆಯಲಿದ್ದು, ಬೆಂಗಳೂರಿನ ಹಲವೆಡೆ ರಸ್ತೆ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಎರಡೂ ದಿನ ಸಿಲಿಕಾನ್ ಸಿಟಿಯ ಅಂಬೇಡ್ಕರ್‌ ರಸ್ತೆ, ಪ್ಯಾಲೇಸ್‌, ರೇಸ್‌ ಕೋರ್ಸ್‌ ರಸ್ತೆಗಳಲ್ಲಿ ಸವಾರರು ಸಂಚರಿಸದಂತೆ ಪೊಲೀಸರು ಮನವಿ ಮಾಡಿದ್ದಾರೆ. ಇನ್ನು ಸುರಕ್ಷತೆಯ ದೃಷ್ಟಿಯಿಂದ ರಾಜಭವನ ರಸ್ತೆ, ಡಾ. ಬಿ. ಆರ್‌ ಅಂಬೇಡ್ಕರ್‌ ರಸ್ತೆ, ರೇಸ್‌ ಕೋರ್ಸ್‌ ರಸ್ತೆಗಳಲ್ಲಿ ಪಾರ್ಕಿಂಗ್‌ ನಿಷೇಧಿಸಲಾಗಿದೆ. 

Source : https://zeenews.india.com/kannada/india/mahaghatabandhan-mahamaitri-meeting-on-july-17-and-18-at-a-private-hotel-in-bangalore-146168

Leave a Reply

Your email address will not be published. Required fields are marked *