ಮನು ಭಾಕರ್ ಗೆ 3ನೇ ಪದಕ ‘ಜಸ್ಟ್ ಮಿಸ್’, ಐತಿಹಾಸಿಕ 2 ಪದಕಗಳೊಂದಿಗೆ ಭಾರತದ ಸ್ಟಾರ್ ಶೂಟರ್ ಒಲಿಂಪಿಕ್ಸ್ ಅಭಿಯಾನ ಮುಕ್ತಾಯ!

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತದ ಯಂಗ್ ಶೂಟರ್ ಮನು ಭಾಕರ್ ಅವರ ಅಭಿಯಾನ ಅಂತ್ಯವಾಗಿದ್ದು, ಕೂದಲೆಳೆ ಅಂತರದಲ್ಲಿ ಭಾರತಕ್ಕೆ ಮತ್ತೊಂದು ಪದಕ ಮಿಸ್ ಆಗಿದೆ.

ಹೌದು.. ಈ ಹಿಂದೆ ಏರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದ ಮನು, ಈ ಬಾರಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಮೂರನೇ ಪದಕ ಕೂದಲೆಳೆ ಅಂತರದಲ್ಲಿ ಮಿಸ್ ಆಗಿದೆ. ಆ ಮೂಲಕ ಮನು ಭಾಕರ್ ಹ್ಯಾಟ್ರಿಕ್ ಪದಕದ ಕನಸು ನುಚ್ಚುನೂರಾಗಿದೆ.

ಫ್ರಾನ್ಸ್‌ನ ಚಟೌರೌಕ್ಸ್‌ನಲ್ಲಿ ನಡೆದ ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಆರಂಭದಲ್ಲಿ 4ನೇ ಸ್ಥಾನ ಪಡೆಯುವ ಮೂಲಕ ಮೂರನೇ ಪದಕಕ್ಕೆ ಕೊರೊಳೊಡ್ಡುವ ಅವಕಾಶವನ್ನು ತಪ್ಪಿಸಿಕೊಂಡರು. ಫೈನಲ್ ಸುತ್ತಿನ ಆರಂಭದಲ್ಲಿ ಮುನ್ನಡೆ ಪಡೆದಿದ್ದ ಮನು, ಎಲಿಮಿನೇಷನ್ ಸುತ್ತಿನಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಇದರೊಂದಿಗೆ ಮೂರನೇ ಪದಕ ಗೆಲ್ಲುವ ಅವರ ಕನಸು ಕಮರಿದೆ.

ಫೈನಲ್​ನಲ್ಲಿ ಮನು ಭಾಕರ್ 28 ಅಂಕಗಳೊಂದಿಗೆ 4ನೇ ಸ್ಥಾನ ಪಡೆದರೆ, ಕಂಚಿನ ಪದಕ ಗೆದ್ದ ಹಂಗೇರಿಯಾದ ಮೇಜರ್ ವೆರೋನಿಕಾ 31 ಪಾಯಿಂಟ್ಸ್ ಕಲೆಹಾಕಿದ್ದರು. ಅಂದರೆ ಕೇವಲ ಮೂರು ಅಂಕಗಳ ಅಂತರದಿಂದ ಮೂರನೇ ಪದಕ ಗೆಲ್ಲುವ ಅವಕಾಶವನ್ನು ಮನು ಭಾಕರ್ ಕೈಚೆಲ್ಲಿದರು.

ದಕ್ಷಿಣ ಕೊರಿಯಾದ ಜಿ ಯಾಂಗ್ 37 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ, 37 ಅಂಕಗಳೊಂದಿಗೆ ಫ್ರಾನ್ ನ ಕ್ಯಾಮಿಲ್ಲೆ ಜೆಡ್ರೆಜೆವ್ಸ್ಕಿ ಬೆಳ್ಳಿ ಪದಕಕ್ಕೆ ಭಾಜನರಾದರು. 31 ಅಂಕಗಳೊಂದಿಗೆ ಹಂಗೇರಿ ಮೂಲದ ಶೂಟರ್ ಮೇಜರ್ ವೆರೋನಿಕಾ 3ನೇ ಸ್ಥಾನ ಪಡೆದು ಕಂಚಿನ ಪದಕ ತಮ್ಮದಾಗಿಸಿಕೊಂಡರು. 28 ಅಂಕಗಳನ್ನು ಪಡೆದ ಭಾರತದ ಮನುಭಾಕರ್ 4ನೇ ಸ್ಥಾನ ಪಡೆಯುವ ಮೂಲಕ ತಮ್ಮ ಒಲಿಂಪಿಕ್ಸ್ ಅಭಿಯಾನ ಮುಗಿಸಿದ್ದಾರೆ.

ಈ ಹಿಂದೆ ಮನುಭಾಕರ್ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಫರ್ಧೆದಲ್ಲಿ ಸರಬ್ಜೋತ್ ಸಿಂಗ್ ಜೊತೆಗೂಡಿ ಕಂಚಿನ ಪದಕ ಪಡೆದಿದ್ದರು.

 

Source : https://www.kannadaprabha.com/sports/2024/Aug/03/indias-manu-bhaker-narrowly-misses-out-on-3rd-bronze-ends-olympics-campaign-with-two-medals

Leave a Reply

Your email address will not be published. Required fields are marked *