ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಯಿಂದ ಆಯೋಜನೆ.

ಚಿತ್ರದುರ್ಗ: ಡಿ.21.
ಧ್ಯಾನವು ಕೇವಲ ಒಂದು ವೈಯಕ್ತಿಕ ಅನುಭವವಲ್ಲ, ಅದು ಸಮಾಜ ಮತ್ತು ಜಗತ್ತಿನ ಮೇಲೆ ಆಳವಾದ ಪ್ರಭಾವ ಬೀರಬಲ್ಲ ಸಾಮರ್ಥ್ಯ ಹೊಂದಿದೆ. ವಿಶೇಷವಾಗಿ ಇಂದಿನ ಒತ್ತಡದ ಜಗತ್ತಿನಲ್ಲಿ, ಜಾಗತಿಕ ಶಾಂತಿ ಸಾಧಿಸಲು ಧ್ಯಾನವು ಒಂದು ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ. ಧ್ಯಾನ ದಿನಾಚರಣೆಗೆ ವಿಶ್ವಸಂಸ್ಥೆಯ ಮನ್ನಣೆ ದೊರೆತಿರುವುದು ನಿಜಕ್ಕೂ ಸ್ವಾಗತಾರ್ಹ ವಿಷಯವಾಗಿದೆ ಎಂದು ಬ್ರಹ್ಮಕುಮಾರಿ ರಶ್ಮಿ ಅಭಿಪ್ರಾಯ ಪಟ್ಟರು.

ಅಂತರಾಷ್ಟ್ರೀಯ ಧ್ಯಾನ ದಿನಾಚರಣೆ ಅಂಗವಾಗಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಚಿತ್ರದುರ್ಗ ಇವರು ಜಿಲ್ಲಾ ಆಯುಷ್ ಇಲಾಖೆ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ, ಹಾಗೂ ಹಾರ್ಟ್ ಫುಲ್ ನೆಸ್ ಧ್ಯಾನ ಕೇಂದ್ರ ಚಿತ್ರದುರ್ಗ ಇವರುಗಳ ಸಹಯೋಗದೊಂದಿಗೆ ನಗರದ ತುರುನೂರು ರಸ್ತೆಯ ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಡಿ.21ರ ಶನಿವಾರ ಆಯೋಜಿಸಿದ್ದ ಸಾಮೂಹಿಕ ಧ್ಯಾನ ಕಾರ್ಯಕ್ರಮವನ್ನು ಧ್ಯಾನ ಜ್ಯೋತಿಯನ್ನು ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಾ ಧ್ಯಾನವು ನಮ್ಮ ಮನಸ್ಸನ್ನು ಶಾಂತಗೊಳಿಸಿ, ಆಂತರಿಕ ಶಾಂತಿಯನ್ನು ಬೆಳೆಸುತ್ತದೆ. ಒಬ್ಬ ವ್ಯಕ್ತಿಯು ಆಂತರಿಕವಾಗಿ ಶಾಂತವಾಗಿದ್ದಾಗ, ಅವರು ಬಾಹ್ಯ ಜಗತ್ತಿನೊಂದಿಗೆ ಸಮನ್ವಯವಾಗಿ ಸಹಬಾಳ್ವೆಯಿಂದ ಬದುಕಲು ಬಯಸುತ್ತಾನೆ ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಾವಣಗೆರೆಯ ಶ್ರೀರಾಮಚಂದ್ರ ಮಿಸನ್ ಸಂಚಾಲಕ ಹಾಗೂ ಹಾರ್ಟ್ ಫುಲ್ ನೆಸ್ ಧ್ಯಾನ ಕೇಂದ್ರದ ಧ್ಯಾನ ಪ್ರವರ್ತಕ ಸಿದ್ಧೇಶ್ ಮಾತನಾಡಿ ಧ್ಯಾನವು ನಮ್ಮ ಆಂತರಿಕ ಸತ್ವವನ್ನು ಪೋಷಿಸಿ ನಮ್ಮಲ್ಲಿ ಜೀವನದ ಪುನರುತ್ಸಾಹ ಪಡೆಯುವಂತೆ ಮಾಡುವ ಸರಳ ವಿಧಾನವಾಗಿದೆ ನಮ್ಮೊಳಗೆ ಸುಪ್ತವಾಗಿ ಅಡಗಿರುವ ಆತ್ಮವೆಂಬ ನಿಜವಾದ ಆಂತರಿಕ ಚೈತನ್ಯವನ್ನು ಜಾಗೃತಗೊಳಿಸುವುದೇ ಧ್ಯಾನದ ಮೂಲ ಉದ್ಧಶವಾಗಿದೆ ಎಂದು ಹೇಳಿದರು.
ಇದಕ್ಕೂ ಮೊದಲು ಮಾತನಾಡಿದ ಕಾರ್ಯಕ್ರಮದ ಆಯೋಜಕ ಹಾಗೂ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಯೋಗ ಪ್ರಚಾರಕ ರವಿ ಕೆ ಅಂಬೇಕರ್ ಮಾತನಾಡಿ ಡಿಸೆಂಬರ್ 21 ರಂದು ಉತ್ತರಾಯಣ ಸಂಕ್ರಾಂತಿ ಆಚರಿಸಲಾಗುತ್ತದೆ. ಈ ದಿನದಿಂದ ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ತಿರುಗುತ್ತಾನೆ. ಇದು ಹೊಸ ಆರಂಭದ ಸಂಕೇತವಾಗಿದೆ. ಈ ದಿನ ಧ್ಯಾನ ಮಾಡುವುದರಿಂದ ಹೊಸ ವರ್ಷವನ್ನು ಒಳ್ಳೆಯ ಚಿತ್ತದಿಂದ ಆರಂಭಿಸಬಹುದು ಶಾಂತಿ ಮತ್ತು ಐಕ್ಯತೆಯ ಸಂಕೇತವಾಗಿರುವ ಧ್ಯಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದರ ಆಚರಣೆಗೆ ವಿಶ್ವ ಸಂಸ್ಥೆಯು ಡಿಸೆಂಬರ್ 21ನ್ನು ಒಂದು ನಿರ್ದಿಷ್ಟ ಪಡಿಸಿರುವುದು ಸಂತೋಷದ ವಿಷಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೆ ಎನ್ ಕೋಟೆ ಸರ್ಕಾರಿ ಆಯುಷ್ ಚಿಕಿತ್ಸಾಲಯದ ಹಿರಿಯ ಆಡಳಿತ ವೈದ್ಯಾಧಿಕಾರಿ ಡಾ|| ಪಿ.ವಿಜಯಲಕ್ಷ್ಮಿ, ಶ್ರೀ ಪತಂಜಲಿ ಯೋಗ ಶಿಕ್ಷಕ ರಾಮಲಿಂಗಪ್ಪ, ಹಾರ್ಟ್ ಫುಲ್ ನೆಸ್ ಧ್ಯಾನ ಕೇಂದ್ರದ ಸದಸ್ಯರಾದ ಲಕ್ಷ್ಮಿಬಾಯಿ, ಬಸವರಾಜ್, ರಮೇಶ್ ನಿವೃತ್ತ ಪೋಲಿಸ್ ಅಧಿಕಾರಿ ಮಲ್ಲಿಕಾರ್ಜುನಚಾರ್ ವಸಂತಲಕ್ಷ್ಮಿ, ರೇಣುಕಾ, ಮಂಜುಳಾ, ವಿವಿಧ ಯೋಗ ಧ್ಯಾನ ಕೇಂದ್ರಗಳ ಧ್ಯಾನಾಸಕ್ತರು ಧ್ಯಾನದಲ್ಲಿ ಪಾಲ್ಗೊಂಡಿದ್ದರು.