McDonald: ಮೆಕ್‌ಡೊನಾಲ್ಡ್ಸ್ ಬರ್ಗರ್ ಗೂ ತಟ್ಟಿದ ಟೊಮೇಟೊ ಬೆಲೆ ಏರಿಕೆಯ ಬಿಸಿ!

Tomato Price Hike: ನಾವು ನಮ್ಮ ಗ್ರಾಹಕರಿಗೆ ಎಂದಿನಂತೆ ಉತ್ತಮ ಗುಣಮಟ್ಟದ ಬರ್ಗರ್​​ಗಳನ್ನು ನೀಡಲಿದ್ದು, ಟೊಮೇಟೊ ಬಳಕೆಯನ್ನು ಮಾತ್ರ ಕಡಿತಗೊಳಿಸುತ್ತಿದ್ದೇವೆ ಎಂದು ಮೆಕ್‌ಡೊನಾಲ್ಡ್ ಹೇಳಿದೆ.

ನವದೆಹಲಿ: ಮೆಕ್‌ಡೊನಾಲ್ಡ್ಸ್ ಬರ್ಗರ್‍ಗೂ ಟೊಮೇಟೊ ಬೆಲೆ ಏರಿಕೆ ಬಿಸಿ ತಟ್ಟಿದೆ. ಪೂರೈಕೆ ಕೊರತೆ ಮತ್ತು ತರಕಾರಿಯ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮೆಕ್‌ಡೊನಾಲ್ಡ್ಸ್ ಫಾಸ್ಟ್​​ಫುಡ್​ ಸಂಸ್ಥೆಯು ತಮ್ಮ ಬರ್ಗರ್‌ಗಳಲ್ಲಿ ಟೊಮೇಟೊಗಳನ್ನು ಬಳಸುವುದಿಲ್ಲವೆಂದು ತಿಳಿಸಿವೆ.   ಭಾರತದ ಕೆಲವು ಪ್ರದೇಶಗಳಲ್ಲಿ ಟೊಮೆಟೊ ಬೆಲೆಗಳು ಗಗನಕ್ಕೇರಿವೆ. ಸಗಟು ಬೆಲೆಗಳು 1 ತಿಂಗಳಲ್ಲಿ ಶೇ.288ರಷ್ಟು ಏರಿಕೆಯಾಗಿದ್ದು, ಪ್ರತಿ ಕೆಜಿ ಟೊಮೇಟೊ ದರ ದಾಖಲೆಯ 140 ರೂ. ($1.7) ತಲುಪಿದೆ. ಹೀಗಾಗಿ ನವದೆಹಲಿಯ 2 ಮೆಕ್‌ಡೊನಾಲ್ಡ್ ಮಳಿಗೆಗಳು ಹಂಚಿಕೊಂಡಿರುವ ನೋಟೀಸ್‌ನಲ್ಲಿ ತಮ್ಮ ಉತ್ಪನ್ನಗಳಲ್ಲಿ ಟೊಮೇಟೊಗಳನ್ನು ಏಕೆ ಬಳಸುತ್ತಿಲ್ಲ ಅನ್ನೋದರ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.

‘ನಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ನಮ್ಮ ಕಟ್ಟುನಿಟ್ಟಾದ ಗುಣಮಟ್ಟದ ತಪಾಸಣೆಯಲ್ಲಿ ಸಾಕಷ್ಟು ಪ್ರಮಾಣದ ಟೊಮೇಟೊಗಳನ್ನು ಪಡೆಯಲು ನಮಗೆ ಸಾಧ್ಯವಾಗುತ್ತಿಲ್ಲ. ಟೊಮೇಟೊ ಇಲ್ಲದೆಯೇ ನಿಮಗೆ ಉತ್ಪನ್ನಗಳನ್ನು ನೀಡಲು ನಾವು ನಿರ್ಧರಿಸಿದ್ದೇವೆ’ ಎಂದು ಮೆಕ್‌ಡೊನಾಲ್ಡ್ಸ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಮೆಕ್‌ಡೊನಾಲ್ಡ್ಸ್ ಉತ್ತರ ಮತ್ತು ಪೂರ್ವ ಭಾರತದಲ್ಲಿ ಸರಿಸುಮಾರು 150 ಔಟ್‌ಲೆಟ್‌ಗಳನ್ನು ನಿರ್ವಹಿಸುತ್ತಿದೆ.  

ನಾವು ನಮ್ಮ ಗ್ರಾಹಕರಿಗೆ ಎಂದಿನಂತೆ ಉತ್ತಮ ಗುಣಮಟ್ಟದ ಬರ್ಗರ್​​ಗಳನ್ನು ನೀಡಲಿದ್ದು, ಟೊಮೇಟೊ ಬಳಕೆಯನ್ನು ಮಾತ್ರ ಕಡಿತಗೊಳಿಸುತ್ತಿದ್ದೇವೆ ಎಂದು ಮೆಕ್‌ಡೊನಾಲ್ಡ್ ಹೇಳಿದೆ. ದೇಶದಾದ್ಯಂತ ಹಲವೆಡೆ ಟೊಮೇಟೊ ಪೂರೈಕೆಯಲ್ಲಿ ಕೊರತೆ ಅನುಭವಿಸುತ್ತಿರುವ ಹಿನ್ನೆಲೆ ಮತ್ತು ಬೆಲೆಯಲ್ಲಿ ದಿಢೀರ್​​ ಏರಿಕೆ ಕಂಡುಬಂದಿರುವುದೇ ಬರ್ಗರ್ ಸೇರಿದಂತೆ ತಮ್ಮ ಉತ್ಪನ್ನಗಳಲ್ಲಿ ಟೊಮೇಟೊ ಕೈಬಿಡಲು ಪ್ರಮುಖ ಕಾರಣವೆಂದು ಸಂಸ್ಥೆಯು ಹೇಳಿಕೊಂಡಿದೆ.

ಕೆಲವು ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಕಳೆದ ತಿಂಗಳು ಸರಾಸರಿಗಿಂತ ಹೆಚ್ಚಿನ ತಾಪಮಾನ ಸೇರಿದಂತೆ ಪ್ರತಿಕೂಲವಾದ ಹವಾಮಾನ ಪರಿಸ್ಥಿತಿಯು ಟೊಮೇಟೊ ಉತ್ಪಾದನೆಯ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. ಇದು ಈ ವರ್ಷ 5 ಪಟ್ಟು ಬೆಲೆ ಏರಿಕೆಗೆ ಕಾರಣವಾಗಿದೆ. ಜೂನ್ ಮತ್ತು ಜುಲೈ ತಿಂಗಳ ನೇರ ಉತ್ಪಾದನೆಯ ತಿಂಗಳುಗಳಲ್ಲಿ ಟೊಮೇಟೊಗಳು ಸಾಮಾನ್ಯವಾಗಿ ದುಬಾರಿಯಾಗುತ್ತವೆ. 

Source :https://zeenews.india.com/kannada/business/mcdonalds-drops-tomatoes-from-burgers-and-wraps-in-india-due-to-prices-surge-144224

Leave a Reply

Your email address will not be published. Required fields are marked *