Mickey Arthur: ಪಾಕಿಸ್ತಾನ್ ತಂಡಕ್ಕೆ ಆನ್​ಲೈನ್ ಕೋಚ್..!

Mickey Arthur Likely To Be Pakistan's 'Online' Cricket Coach

ಪಾಕಿಸ್ತಾನ ಕ್ರಿಕೆಟ್ ತಂಡದ ಹೊಸ ಕೋಚ್ ಹುಡುಕಾಟ ಮುಗಿದಿದ್ದು, ತಂಡ ತರಬೇತುದಾರನ ಜವಾಬ್ದಾರಿಯನ್ನು ಹೊರಲು ಸೌತ್ ಆಫ್ರಿಕಾದ ಮಿಕ್ಕಿ ಆರ್ಥರ್‌ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಷರತ್ತುಗಳ ಅನ್ವಯ ಎಂಬುದೇ ವಿಶೇಷ. ಇಲ್ಲಿ ಮುಖ್ಯ ಷರತ್ತೇನೆಂದರೆ ಆನ್​ಲೈನ್ ಕೋಚಿಂಗ್. ಅಂದರೆ ಪಾಕ್ ತಂಡಕ್ಕೆ ಆನ್​ಲೈನ್​ನಲ್ಲೇ ಕೋಚಿಂಗ್ ನೀಡಲು ಮಿಕ್ಕಿ ಅರ್ಥರ್ (Mickey Arthur) ಮುಂದಾಗಿದ್ದಾರೆ. ಪಿಸಿಬಿ ಹಾಗೂ ಮಿಕ್ಕಿ ಅರ್ಥರ್ ಒಪ್ಪಂದದ ಪ್ರಕಾರ ಏಕದಿನ ವಿಶ್ವಕಪ್​ಗೂ ಮುನ್ನ ಮಿಕ್ಕಿ ಪಾಕಿಸ್ತಾನಕ್ಕೆ ತೆರಳುವುದಿಲ್ಲ. ಬದಲಾಗಿ ಅವರು ಇಂಗ್ಲೆಂಡ್​ನಿಂದಲೇ ಆನ್​ಲೈನ್ ಮೂಲಕ ಕೋಚಿಂಗ್ ನೀಡಲಿದ್ದಾರೆ. ಇನ್ನು ಈ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ ವೇಳೆ ಮಿಕ್ಕಿ ಅರ್ಥರ್ ಪಾಕ್ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಪ್ರಸ್ತುತ ಪಾಕಿಸ್ತಾನ ತಂಡದ ಮುಖ್ಯ ಕೋಚ್ ಸಕ್ಲೇನ್ ಮುಷ್ತಾಕ್ ಅವರ ಕಾರ್ಯಾವಧಿ ಫೆಬ್ರವರಿಯಲ್ಲಿ ಕೊನೆಗೊಳ್ಳಲಿದೆ. ಪಾಕಿಸ್ತಾನ ಪ್ರೀಮಿಯರ್ ಲೀಗ್ (ಪಿಎಸ್ಎಲ್) ನಂತರ ಬಾಬರ್ ತಂಡವು ಯುಎಇಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಟಿ20 ಸರಣಿಯನ್ನು ಆಡಬೇಕಿದೆ. ಹಾಗೆಯೇ ನ್ಯೂಜಿಲೆಂಡ್ ತಂಡ ಏಪ್ರಿಲ್‌ನಲ್ಲಿ ಪಾಕಿಸ್ತಾನಕ್ಕೆ ಆಗಮಿಸಲಿದೆ.

Also Read: ICC Rankings 2023: ಐಸಿಸಿ ರ‍್ಯಾಂಕಿಂಗ್​ನಲ್ಲಿ ಟೀಮ್ ಇಂಡಿಯಾದ ಮೂವರು ನಂಬರ್ 1

ಇದಲ್ಲದೆ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯಾಕಪ್‌ಗೂ ಮುನ್ನ ಪಾಕಿಸ್ತಾನ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಬೇಕಿದೆ. ಈ ಎಲ್ಲಾ ಸರಣಿಗಳಲ್ಲಿ ಮಿಕ್ಕಿ ಅರ್ಥರ್ ತಂಡದ ಜೊತೆ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಆನ್​ಲೈನ್ ಮೂಲಕವೇ ತಂತ್ರಗಾರಿಕೆಯನ್ನು ರೂಪಿಸಲಿದ್ದಾರೆ.

ಡರ್ಬಿಶೈರ್ ತಂಡದ ಕೋಚ್ ಮಿಕ್ಕಿ:

ಮಿಕ್ಕಿ ಅರ್ಥರ್ ಈಗಾಗಲೇ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳೊಂದಿಗೆ ಕೆಲಸ ಮಾಡಿದ್ದಾರೆ. ಅಲ್ಲದೆ 2022 ರಲ್ಲಿ ಇಂಗ್ಲಿಷ್ ಕೌಂಟಿ ತಂಡ ಡರ್ಬಿಶೈರ್ ಜೊತೆ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದಾರೆ. ಇತ್ತ ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಅವರು ಮಿಕ್ಕಿ ಅರ್ಥರ್ ಅವರನ್ನು ಪಾಕಿಸ್ತಾನ ತಂಡದ ಮುಖ್ಯ ಕೋಚ್ ಮಾಡಲು ಬಯಸಿದ್ದಾರೆ. ಆದರೆ ಅತ್ತ ಡರ್ಬಿಶೈರ್ ತಂಡವನ್ನು ಏಕಾಏಕಿ ಬಿಡಲು ಕೂಡ ಸಾಧ್ಯವಿಲ್ಲ. ಹೀಗಾಗಿ ಆನ್​ಲೈನ್ ಕೋಚ್ ತಂತ್ರಗಾರಿಕೆಗೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಏಕದಿನ ವಿಶ್ವಕಪ್​ಗೂ ಮುನ್ನ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಆನ್​ಲೈನ್ ಕೋಚ್ ಅನ್ನು ನೇಮಿಸುವ ಮೂಲಕ ಚರ್ಚೆಗೆ ಗ್ರಾಸವಾಗಿದೆ.

 

 

source https://tv9kannada.com/sports/cricket-news/mickey-arthur-likely-to-be-pakistans-online-cricket-coach-kannada-news-zp-au50-511815.html

Views: 0

Leave a Reply

Your email address will not be published. Required fields are marked *