Modi 3.0- ಮೋದಿ ಸಂಪುಟದಲ್ಲಿ ಸಪ್ತ ಸಚಿವೆಯರು; ಈ ಬಾರಿ ಯಾರಿಗೆಲ್ಲಾ ಸ್ಥಾನ? ಯಾರಿಗೆ ಇಲ್ಲ?

ಹೈಲೈಟ್ಸ್‌:

  • ಈ ಬಾರಿಯ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ 7 ಮಂದಿ ಮಹಿಳೆಯರಿಗೆ ಸಂದಸರಿಗೆ ಸಚಿವ ಸ್ಥಾನ
  • ಕಳೆದ ಬಾರಿಯೂ ಸಚಿವೆಯರಾಗಿದ್ದ ನಿರ್ಮಲಾ ಸೀತಾರಾಮನ್, ಅನ್ನಪೂರ್ಣ ದೇವಿಗೆ ಸಂಪುಟ ದರ್ಜೆ
  • ಕರಂದ್ಲಾಜೆ, ರಕ್ಷಾ ಖಾಡ್ಸೆ, ಸಾವಿತ್ರಿ ಠಾಕೂರ್, ನಿಮುಬೇನ್ , ಅನುಪ್ರಿಯಾ ಪಟೇಲ್ ಗೆ ರಾಜ್ಯ ಖಾತೆ

ಹೊಸದಿಲ್ಲಿ: ನೂತನವಾಗಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಕೇಂದ್ರ ಸರ್ಕಾರದಲ್ಲಿ 7 ಮಹಿಳಾ ಸಚಿವರು ಕಾಣಿಸಿಕೊಂಡಿದ್ದಾರೆ. ಜೂನ್ 5ರಂದು ವಿಸರ್ಜಿಸಲ್ಪಟ್ಟ ಈ ಹಿಂದಿನ ಅವಧಿಯ ಮೋದಿ ಸರ್ಕಾರದಲ್ಲಿ 10 ಸಚಿವೆಯರಿದ್ದರು.

ಈ ಹಿಂದಿನ ಸರ್ಕಾರಗಳಲ್ಲಿ ರಕ್ಷಣಾ ಖಾತೆ ಮತ್ತು ವಿತ್ತ ಖಾತೆಗಳನ್ನು ನಿಭಾಯಿಸಿದ್ದ ನಿರ್ಮಲಾ ಸೀತಾರಾಮನ್ ಅವರು ಮತ್ತೆ ಮೋದಿ ಸಂಪುಟವನ್ನು ಸೇರಿಕೊಂಡಿದ್ದಾರೆ. ಜೊತೆಗೆ ಕಳೆದ ಸರ್ಕಾರದಲ್ಲಿ ಶಿಕ್ಷಣ ಖಾತೆಯ ರಾಜ್ಯ ದರ್ಜೆಯ ಸಚಿವೆಯಾಗಿದ್ದ ಅನ್ನಪೂರ್ಣ ದೇವಿ ಅವರು ಮತ್ತೆ ಸಂಪುಟ ದರ್ಜೆಯ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರೊಂದಿಗೆ ಬಿಜೆಪಿಯ ಶೋಭಾ ಕರಂದ್ಲಾಜೆ, ರಕ್ಷಾ ಖಾಡ್ಸೆ, ಸಾವಿತ್ರಿ ಠಾಕೂರ್, ನಿಮುಬೇನ್ ಬಂಭಾನಿಯಾ ಮತ್ತು ಅಪ್ನಾ ದಳದ ಸಂಸದೆ ಅನುಪ್ರಿಯಾ ಪಟೇಲ್ ಅವರು ಸಚಿವೆಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಸ್ಕೃತಿ, ಪವಾರ್ ಗೆ ಸ್ಥಾನವಿಲ್ಲ

ಕಳೆದ ಬಾರಿ ಕ್ಯಾಬಿನೆಟ್ ದರ್ಜೆಯ ಸಚಿವೆಯಗಿದ್ದ ಸ್ಮೃತಿ ಇರಾನಿ, ರಾಜ್ಯ ಖಾತೆ ಸಚಿವೆಯರಾಗಿದ್ದ ಭಾರತಿ ಪವಾರ್, ಸಾಧ್ವಿ ನಿರಂಜನ್, ದರ್ಶನಾ ಜಾರ್ದೋಶ್, ಮೀನಾಕ್ಷಿ ಲೇಖಿ ಮತ್ತು ಪ್ರತಿಮಾ ಭೌಮಿಕ್ ಅವರಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ದೊರೆತಿಲ್ಲ. ಇವರಲ್ಲಿ ಸ್ಮೃತಿ ಇರಾನಿ ಅವರು ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಮತ್ತು ಭಾರತಿ ಪವಾರ್ ಅವರು ದಾಂಡೋರಿ ಲೋಕ ಸಭಾ ಕ್ಷೇತ್ರದಲ್ಲಿ ಪರಾಭವಗೊಂಡಿರುವ ಹಿನ್ನೆಲೆಯಲ್ಲಿ ಈ ಬಾರಿ ಸಹಜವಾಗಿಯೇ ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಒಟ್ಟು 74 ಮಹಿಳೆಯರು ಜಯಗಳಿಸಿದ್ದಾರೆ. ಅವರಲ್ಲಿ ಬಿಜೆಪಿಯ 31, ಕಾಂಗ್ರೆಸ್ ನ 13, ತೃಣಮೂಲ ಕಾಂಗ್ರೆಸ್ (TMC) ನ 11, ಸಮಾಜವಾದಿ ಪಕ್ಷದ ( SP) 5, ದ್ರಾವಿಡ ಮುನ್ನೇತ್ರ ಕಳಗಂ ( DMK) ಯ 3, ಲೋಕಜನಶಕ್ತಿ ಪಕ್ಷ, ಸಂಯುಕ್ತ ಜನತಾ ದಳದ ತಲಾ 2 ಸಂಸದೆಯರಿದ್ದಾರೆ.

ಇನ್ನು ಪಕ್ಷಗಳಲ್ಲಿ ಶೇಕಡಾವಾರು ಲೆಕ್ಕಾಚಾರ ಹಾಕಿದರೆ ತೃಣಮೂಲ ಕಾಂಗ್ರೆಸ್ ನ 29 ಸಂಸದರಲ್ಲಿ ಒಟ್ಟು 11 ಮಂದಿ ಮಹಿಳಾ ಸಂಸದರು. ಅಂದರೆ ಪಕ್ಷದ ಒಟ್ಟು ಸಂಸದರಲ್ಲಿ ಶೇಕಡಾ 38ರಷ್ಟು ಮಹಿಳೆಯರು . ಪಶ್ಚಿಮ ಬಂಗಾಳದಿಂದ ತೃಣಮೂಲ ಕಾಂಗ್ರೆಸ್ 12 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು ಅವರಲ್ಲಿ 11 ಮಂದಿ ಆರಿಸಿ ಬಂದಿದ್ದಾರೆ.

ಕಳೆದ ಬಾರಿ 78 ಮಹಿಳಾ ಸಂಸದರ

2019ರಲ್ಲಿ ಲೋಕಸಭೆಯಲ್ಲಿ 78 ಮಹಿಳಾ ಸಂಸದರಿದ್ದರು. ಅವರಲ್ಲಿ 11 ಮಂದಿ ಮಹಿಳಾ ಸಚಿವರಿದ್ದರು ಅಂದರೆ ಕಳೆದ ಬಾರಿಗಿಂತ ನಾಲ್ವರು ಸಚಿವೆಯರು ಮತ್ತು ನಾಲ್ಕು ಮಂದಿ ಸಂಸದೆಯರು ಕಡಿಮೆಯಾಗಿದ್ದಾರೆ.

ಭಾನುವಾರ ಸಂಜೆ 7.30ಕ್ಕೆ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅವರ ಸಂಪುಟದ 71 ಸಚಿವರ ತಂಡ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಹಿಂದಿನ ಸರ್ಕಾರಗಳಲ್ಲಿ ಬಿಜೆಪಿ ಏಕಾಂಗಿಯಾಗಿ ಬಹುಮತಕ್ಕೆ ಬೇಕಾದ ಸಂಖ್ಯಾಬಲವನ್ನು ಹೊಂದಿತ್ತು. ಆದರೆ ಈ ಬಾರಿ ಬಿಜೆಪಿ 242 ಸ್ಥಾನಗಳನ್ನು ಮಾತ್ರ ಪಡೆಯಲು ಶಕ್ತವಾಗಿದ್ದು ಮಿತ್ರ ಪಕ್ಷಗಳೊಂದಿಗೆ ಅಧಿಕಾರದ ಗದ್ದುಗೆಗೆ ಏರಿದೆ. ಹೀಗಾಗಿ ಕಳೆದ ಬಾರಿ ಬಿಜೆಪಿಯಿಂದಲೇ ಹೆಚ್ಚಿನ ಸಂಖ್ಯೆಯ ಸಚಿವರಿದ್ದರು. ಈ ಬಾರಿ ಮಾತ್ರ ತೂಗಿ ಅಳೆದು ಸಮತೋಲಿತ ಸಚಿವ ಸಂಪುಟವನ್ನು ರಚಿಸಲಾಗಿದೆ.

Source : https://vijaykarnataka.com/news/india/7-women-ministers-in-pm-narendra-modi-new-cabinet/articleshow/110861308.cms

Leave a Reply

Your email address will not be published. Required fields are marked *