Modi 3.0; ಮೋದಿ ಸಂಪುಟದಲ್ಲಿ ಕರ್ನಾಟಕದ ಐವರಿಗೆ ಸ್ಥಾನ: ಸೋಮಣ್ಣಗೆ ಒಲಿದ ಲಕ್.

ಹೊಸದಿಲ್ಲಿ: ಸತತ ಮೂರನೇ ಬಾರಿಗೆ ಪ್ರಧಾನಿ ಮಂತ್ರಿಯಾಗಿ ನರೇಂದ್ರ ಮೋದಿ ಅವರು ಇಂದು ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಂಜೆ 7.15ಕ್ಕೆ ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಿಎಂ ಮೋದಿ ಜೊತೆಗೆ ಹಲವು ಸಂಸದರು ಸಚಿವರಾಗಿ ಸಂಪುಟ ಸೇರಲಿದ್ದಾರೆ.

ಕರ್ನಾಟಕದಿಂದ ಯಾರೆಲ್ಲಾ ಸಚಿವರಾಗಬಹುದು ಎಂಬ ಕುತೂಹಲವಿತ್ತು. ಇದಕ್ಕೆ ಇದೀಗ ತೆರೆ ಬಿದ್ದಿದೆ. ಕರ್ನಾಟಕದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್ ನ ಎಚ್ ಡಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗುವುದು ಮೊದಲೇ ಬಹುತೇಕ ಖಚಿತವಾಗಿತ್ತು. ಇದಕ್ಕೆ ಇದೀಗ ಅಧಿಕೃತ ಮುದ್ರೆ ಬಿದ್ದಿದೆ.

ಕರ್ನಾಟಕದಿಂದ ಐವರು ಸಚಿವರಾಗಿ ಮೋದಿ ಸಂಪುಟ ಸೇರುತ್ತಿದ್ದಾರೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ನಿರ್ಮಲಾ ಸೀತಾರಾಮನ್, ಹುಬ್ಬಳ್ಳಿ-ಧಾರವಾಡ ಸಂಸದ ಪ್ರಹ್ಲಾದ ಜೋಶಿ, ಬೆಂಗಳೂರು ಉತ್ತರ ಸಂಸದೆ ಶೋಭಾ ಕರಾಂದ್ಲಾಜೆ, ತುಮಕೂರು ಸಂಸದ ವಿ.ಸೋಮಣ್ಣ ಮತ್ತು ಮಂಡ್ಯ ಜೆಡಿಎಸ್ ಸಂಸದ ಎಚ್ ಡಿ ಕುಮಾರಸ್ವಾಮಿ ಅವರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಇವರಲ್ಲಿ ಮೂವರು ಈ ಹಿಂದೆಯೂ ಸಚಿವರಾಗಿದ್ದವರು. ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವರಾಗಿದ್ದರೆ, ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ರಾಜ್ಯ ಸಚಿವರಾಗಿದ್ದ ಶೋಭಾ ಕರಾಂದ್ಲಾಜೆ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ ಜೋಶಿ ಅವರನ್ನು ಮತ್ತೆ ಕ್ಯಾಬಿನೆಟ್ ನಲ್ಲಿ ಮುಂದುವರಿಸಲಾಗಿದೆ.

ಉಳಿದಂತೆ ಲಿಂಗಾಯತ ನಾಯಕ ವಿ.ಸೋಮಣ್ಣ ಅವರು ಅಚ್ಚರಿಯ ರೀತಿಯಲ್ಲಿ ಮೋದಿ ಕ್ಯಾಬಿನೆಟ್ ಸೇರಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಗೆದ್ದ ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ ಅಥವಾ ಜಗದೀಶ್ ಶೆಟ್ಟರ್ ಅವರಿಗೆ ಮೋದಿ ಸಂಪುಟದಲ್ಲಿ ಅವಕಾಶ ಸಿಗಬಹುದು ಎನ್ನಲಾಗಿತ್ತು. ಆದರೆ ಅವರನ್ನು ಮೀರಿ ಸೋಮಣ್ಣ ಮಂತ್ರಿಗಿರಿ ಗಿಟ್ಟಿಸಿಕೊಂಡಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಸೋಮಣ್ಣ, “ನನಗೆ ಕೇಂದ್ರ ಸಚಿವನಾಗುವ ಅವಕಾಶ ಸಿಕ್ಕಿದೆ. ನಾನು ಪ್ರಧಾನಿ, ಅಮಿತ್ ಶಾ, ಜೆಪಿ ನಡ್ಡಾ ಮತ್ತು ಪಕ್ಷದ ನಾಯಕರಿಗೆ ಧನ್ಯವಾದ ಹೇಳುತ್ತೇನೆ… ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಎಚ್‌ಡಿ ಕುಮಾರಸ್ವಾಮಿ ಮತ್ತು ನಾನು, ಹೀಗೆ ಇಂದು ಕರ್ನಾಟಕದ 5 ಜನರು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ” ಎಂದು ಹೇಳಿದರು.

Source : https://m.dailyhunt.in/news/india/kannada/udayavani-epaper-udayavani/modi+3+0+modi+samputadalli+karnaatakadha+aivarige+sthaana+somannage+olidha+lak-newsid-n615931728?listname=topicsList&index=3&topicIndex=0&mode=pwa&action=click

Leave a Reply

Your email address will not be published. Required fields are marked *