‘ಎಕ್ಸ್’ನಲ್ಲಿ ಮೋದಿ ಮೈಲಿಗಲ್ಲು, ಪ್ರಧಾನಿಗೆ ಈಗ 100 ಮಿಲಿಯನ್ ಫಾಲೋವರ್ಸ್!

ದೆಹಲಿ: ದಿನೇ ದಿನೇ ತಮ್ಮ ವರ್ಚಸ್ಸನ್ನ ಹೆಚ್ಚಿಸಿಕೊಳ್ಳುತ್ತಿರುವ ಪ್ರಧಾನಮಂತ್ರಿ (Prime Minister) ನರೇಂದ್ರ ಮೋದಿ (Narendra Modi) ವಿಶ್ವದ ಜನಪ್ರಿಯ ನಾಯಕರುಗಳಲ್ಲಿ ಒಬ್ಬರಾಗಿದ್ದಾರೆ. ಪ್ರಧಾನಿ ಆದಾಗಿನಿಂದಲೂ ಪ್ರಭಾವಿ ನಾಯಕನಾಗಿ ಬೆಳೆಯುತ್ತಿರುವ ಮೋದಿ ಇದೀಗ ಸಾಮಾಜಿಕ ಜಾಲತಾಣ (Social Media) ಎಕ್ಸ್ (X) ಹ್ಯಾಂಡಲ್​ನಲ್ಲಿ ಹೊಸದೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ. ಎಕ್ಸ್ ಅಥವಾ ಟ್ವಿಟರ್‌ನಲ್ಲಿ 100 ಮಿಲಿಯನ್ (Million) ಫಾಲೋವರ್ಸ್ ಗಡಿ ದಾಟಿ ಎಕ್ಸ್ ನಲ್ಲಿ ಅತಿ ಹೆಚ್ಚು ಫಾಲೋವರ್ಸ್ (Followers) ಹೊಂದಿರುವ ವಿಶ್ವ ನಾಯಕನಾಗಿ ಪ್ರಧಾನಿ ನರೇಂದ್ರ ಮೋದಿ ಹೊರಹೊಮ್ಮಿದ್ದಾರೆ.

ಯಾರಿಗೆ ಎಷ್ಟು ಫಾಲೋವರ್ಸ್?

ಸಾಮಾಜಿಕ ಜಾಲತಾಣ ಎಕ್ಸ್ ಹ್ಯಾಂಡಲ್​ನಲ್ಲಿ ಭಾರತೀಯ ರಾಜಕಾರಣಿಗಳಿಗೆ ಹೋಲಿಸಿದರೆ ಮೋದಿ ಅವರ ಫಾಲೋವರ್ಸ್ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ರಾಹುಲ್ ಗಾಂಧಿ ಅವರಿಗೆ 26.4 ಮಿಲಿಯನ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ 27.5 ಮಿಲಿಯನ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರಿಗೆ 19.9 ಮಿಲಿಯನ್ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ 7.4 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇನ್ನು ಆರ್‌ಜೆಡಿಯ ಲಾಲು ಪ್ರಸಾದ್ ಯಾದವ್ 6.3 ಮಿಲಿಯನ್, ತೇಜಸ್ವಿ ಯಾದವ್​ಗೆ 5.2 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ಯುಎಸ್ ಅಧ್ಯಕ್ಷರಿಗಿಂತ ಮೋದಿ ಮುಂದೆ

ಎಕ್ಸ್ ಹ್ಯಾಂಡಲ್​ನಲ್ಲಿ ಪ್ರಧಾನಿ ಮೋದಿಯವರ ಅಧಿಕೃತ ಖಾತೆಗೆ ಕಳೆದ ಮೂರು ವರ್ಷಗಳಲ್ಲಿ ಸುಮಾರು 30 ಮಿಲಿಯನ್ ಫಾಲೋವರ್ಸ್ ಹೆಚ್ಚಾಗಿದ್ದಾರೆ. ಸದ್ಯ 38.1 ಫಾಲೋವರ್ಸ್ ಹೊಂದಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ದುಬೈನ  ಶೇಖ್ ಮೊಹಮ್ಮದ್ (11.2 ಮಿಲಿಯನ್) ಮತ್ತು ಪೋಪ್ ಫ್ರಾನ್ಸಿಸ್ (18.5 ಮಿಲಿಯನ್) ಅವರಂತಹ ಇತರ ವಿಶ್ವ ನಾಯಕರಿಗಿಂತ ಪಿಎಂ ಮೋದಿ ಬಹಳ ಮುಂದಿದ್ದಾರೆ.

ಕ್ರೀಡಾ ಸ್ಟಾರ್​ಗಳನ್ನೂ ಹಿಂದಿಕ್ಕಿದ ಮೊದಿ

ಬರಿ ರಾಜಕೀಯ ನಾಯಕರು ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ಜನಪ್ರಿಯ ಅಥ್ಲಿಟ್​ಗಳನ್ನೂ ಹಿಂದಿಕ್ಕಿದ ಪ್ರಧಾನಿ ಮೋದಿ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.  ವಿರಾಟ್ ಕೊಹ್ಲಿ 64.1 ಮಿಲಿಯನ್, ಬ್ರೆಜಿಲ್​ನ ಫುಟ್ಬಾಲ್ ಆಟಗಾರ ನೇಮರ್ ಜೂನಿಯರ್ 63.6 ಮಿಲಿಯನ್ ಮತ್ತು ಅಮೆರಿಕದ ಬಾಸ್ಕೆಟ್‌ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್ 52.9 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇನ್ನು ಟೇಲರ್ ಸ್ವಿಫ್ಟ್  (95.3 ಮಿಲಿಯನ್), ಲೇಡಿ ಗಾಗಾ (83.1 ಮಿಲಿಯನ್), ಮತ್ತು ಕಿಮ್ ಕಾರ್ಡಶಿಯಾನ್ (75.2 ಮಿಲಿಯನ್) ಅವರಂತಹ ಸೆಲೆಬ್ರಿಟಿಗಳಿಗಿಂತಲೂ ಮೋದಿ ಮುಂದಿದ್ದಾರೆ.

ಯೂಟ್ಯೂಬ್, ಇನ್‌ಸ್ಟಾಗ್ರಾಮ್​ನಲ್ಲೂ ಮೋದಿ ಹವಾ

ಬರಿ ಎಕ್ಸ್ ಮಾತ್ರವಲ್ಲ ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್​ನಲ್ಲೂ ಮೋದಿ ಹವಾ ಜೋರಾಗೇ ಇದೆ. ಮೋದಿ ಅವರ ಯೂಟ್ಯೂಬ್ ಚಾನಲ್​ಗೆ ಸುಮಾರು 25 ಮಿಲಿಯನ್ ಚಂದಾದಾರರಿದ್ದಾರೆ. ಅಲ್ಲದೆ  ಇನ್‌ಸ್ಟಾಗ್ರಾಮ್‌ನಲ್ಲಿ  91 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.

2009ರಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯ

2009ರಲ್ಲಿ ಖಾತೆ ಆರಂಭಿಸಿದಾದ ಮೋದಿ ಅಂದಿನಿಂದ ಸಕ್ರಿಯವಾಗಿದ್ದಾರೆ. ಪ್ರತಿಯೊಂದು ಬೆಳವಣಿಗೆಯನ್ನು ಪೋಸ್ಟ್ ಮಾಡುವ ಮೂಲಕ ಜನರೊಂದಿಗೆ ಸಂಪರ್ಕದಲ್ಲಿರುತ್ತಾರೆ. ಪೈಯ್ಡ್ ಪ್ರಮೋಷನ್, ಮತ್ತು ಬೋಟ್ ಗಳನ್ನು ಬಳಸದೆ ತಮ್ಮ ಎಕ್ಸ್ ಖಾತೆಯನ್ನು ನಿರ್ವಹಿಸುತ್ತಿರುವ ಮೋದಿ ಇದೀಗ 100 ಮಿಲಿಯನ್ ಫಾಲೋವರ್ಸ್​ಗಳನ್ನು ಗಳಿಸಿದ ವಿಶ್ವದ ನಾಯಕನಾಗಿದ್ದಾರೆ.

ಜನ ಸಾಮಾನ್ಯರೊಂದಿಗೆ ಸಂಪರ್ಕ

ಇನ್ನು ಪ್ರಭಾವಿ ನಾಯಕರು, ರಾಜಕೀಯ ವ್ಯಕ್ತಿಗಳನ್ನು ಮಾತ್ರವಲ್ಲದೆ ಹಲವು ಸಾಮಾನ್ಯ ಜನರನ್ನು ಕೂಡ ಮೋದಿ ಫಾಲೋ ಮಾಡುತ್ತಿದ್ದಾರೆ. ತಮ್ಮನ್ನು ಟ್ಯಾಗ್ ಮಾಡಿದ ಹಲವರಿಗೆ ಪ್ರತಿಕ್ರಿಯೆ ಕೊಡುವ ಮೂಲಕ ನಿರಂತರವಾಗಿ ಆ್ಯಕ್ಟಿವ್ ಇರುತ್ತಾರೆ ಮತ್ತು ಪ್ರತಿಯೊಂದನ್ನು ಗಮನಿಸುತ್ತಿದ್ದೇನೆ ಎಂಬ ಸಂದೇಶ ರವಾನಿಸುತ್ತಾರೆ. ಮೋದಿ ಹೆಚ್ಚು ಫಾಲೋವರ್ಸ್​ನ ಗಳಿಸಲು ಇಂದು ಕೂಡ ಒಂದು ಕಾರಣವಾಗಿದೆ. ಮೋದಿ ಇಲ್ಲಿವರೆಗೂ ಯಾರನ್ನೂ ನಿರ್ಬಂಧಿಸಿಲ್ಲ ಎನ್ನುವುದು ವಿಶೇಷ.

Source : https://kannada.news18.com/news/national-international/pm-narendra-modi-crosses-the-milestone-of-100-million-followers-on-x-ach-1775104.html

Leave a Reply

Your email address will not be published. Required fields are marked *