ದೇಶಾದ್ಯಂತ ಮುಂಗಾರು ಚುರುಕು.. ಜೂ.30ರವರೆಗೆ ಕರ್ನಾಟಕದಲ್ಲಿ ಮಳೆ ಮುನ್ಸೂಚನೆ: ಹಿಮಾಚಲದಲ್ಲಿ 9 ಬಲಿ

ದೇಶಾದ್ಯಂತ ಮಾನ್ಸೂನ್​ ಚುರುಕುಗೊಂಡಿದೆ. ಭಾರಿ ಮಳೆಗೆ ರಾಜಸ್ಥಾನದಲ್ಲಿ ನಾಲ್ವರು ಜೀವ ಕಳೆದುಕೊಂಡಿದ್ದಾರೆ. ನೈಋತ್ಯ ಮಾನ್ಸೂನ್ ಮಳೆಯು ಉತ್ತರ ಮತ್ತು ಪಶ್ಚಿಮ ಭಾರತದ ಹೆಚ್ಚಿನ ಭಾಗವನ್ನು ಆವರಿಸಿಕೊಂಡಿದೆ. ಕೆಲವು ಸ್ಥಳಗಳಲ್ಲಿ ಹಠಾತ್ ಪ್ರವಾಹ, ಭೂಕುಸಿತ ಮತ್ತು ರಸ್ತೆ ಹಾಳಾದ ವರದಿಗಳಾಗಿವೆ.

ನವದೆಹಲಿ: ದೇಶದ ಬಹುತೇಕ ಕಡೆ ಮುಂಗಾರು ತನ್ನ ಅಬ್ಬರವನ್ನು ತೋರಿಸುತ್ತಿದೆ. ಪಂಜಾಬ್​​​​​, ಹರಿಯಾಣ, ದೆಹಲಿ, ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿದೆ ಹಠಾತ್ ಪ್ರವಾಹ ಮತ್ತು ಭೂಕುಸಿತದ ವರದಿಗಳ ಬೆನ್ನಲ್ಲೇ, ಚಂಡೀಗಢ-ಮನಾಲಿ ಹೆದ್ದಾರಿಯಲ್ಲಿ ನೀರು ನಿಂತಿದ್ದರಿಂದ ಪ್ರಯಾಣಿಕರು ಪರದಾಡಬೇಕಾಯಿತು. ಇನ್ನು ಹಿಮಾಚಲ ಪ್ರದೇಶದಲ್ಲಿ ಭಾರಿ ಪ್ರವಾಹ, ಮೇಘಸ್ಫೋಟದಿಂದಾಗಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಇನ್ನು ರಾಜಸ್ಥಾನದಲ್ಲಿ ಸಿಡಿಲು ಬಡಿದು ನಾಲ್ವರು ಸಾವನ್ನಪ್ಪಿದ್ದಾರೆ.

ಭಾರೀ ಮಳೆಯಿಂದಾಗಿ ಹಿಮಾಚಲ ಪ್ರದೇಶದಲ್ಲಿ ಒಟ್ಟು 301 ರಸ್ತೆಗಳನ್ನು ಮುಚ್ಚಲಾಗಿದೆ. ಪಾಂಡೋ-ಕುಲ್ಲು ಮಾರ್ಗದಲ್ಲಿ ಮಂಡಿ ಪಟ್ಟಣದಿಂದ ಸುಮಾರು 40 ಕಿಮೀ ದೂರದಲ್ಲಿರುವ ಆಟ್ ಬಳಿಯ ಖೋಟಿನಲ್ಲಾಹ್ ಎಂಬಲ್ಲಿ ಭಾರಿ ಪ್ರಮಾಣದಲ್ಲಿ ಪ್ರವಾಹ ಉಂಟಾಗಿದೆ. ಮಂಡಿ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಾಚರಣೆ ಕೈಗೊಂಡಿದೆ. ಜೂನ್ 24 ರಿಂದ ಮಳೆ ಆರಂಭವಾಗಿದ್ದು, ಇದುವರೆಗೂ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಹಿಮಾಚಲ ಪ್ರದೇಶದ ಅಧಿಕಾರಿಗಳು ತಿಳಿಸಿದ್ದಾರೆ.

ಸಿಡಿಲು ಬಡಿದು ನಾಲ್ವರು ಸಾವು: ರಾಜಸ್ಥಾನದಲ್ಲಿ ಮೂರು ಪ್ರತ್ಯೇಕ ಘಟನೆಗಳಲ್ಲಿ ಸಿಡಿಲು ಬಡಿದು ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಭಾನುವಾರ ಸಂಜೆ ಪಾಲಿ ಜಿಲ್ಲೆಯಲ್ಲಿ ಸಿಡಿಲು ಬಡಿದು ದಿನೇಶ್ (21) ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋದರ ಸಂಬಂಧಿಗಳಾದ ಹರಿರಾಮ್ (46) ಮತ್ತು ಕಮಲ್ (32) ಸಿಡಿಲು ಬಡಿದು ಬರಾನ್‌ನ ಪಟ್ಪಾಡಿಯಲ್ಲಿ ಮೃತಪಟ್ಟರೆ, ಚಿತ್ತೋರ್‌ಗಢದಲ್ಲಿ 10 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಸ್ಸೋಂನಲ್ಲಿ ನಿಲ್ಲದ ಪ್ರವಾಹ ಪರಿಸ್ಥಿತಿ: ಏತನ್ಮಧ್ಯೆ, ಅಸ್ಸೋಂನಲ್ಲಿ ಭಾರೀ ಮಳೆಯು ದೊಡ್ಡ ಪ್ರಮಾಣದಲ್ಲಿ ಹಾನಿಯನ್ನುಂಟು ಮಾಡುತ್ತಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ವಿಕೋಪವನ್ನೇ ಸೃಷ್ಟಿಸಿದೆ. ಬಾರ್ಪೇಟಾ ಜಿಲ್ಲೆಯಲ್ಲಿ ಇನ್ನೂ 1.5 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ಗುವಾಹಟಿಯಲ್ಲಿ ಬ್ರಹ್ಮಪುತ್ರ ನದಿಯ ನೀರಿನ ಮಟ್ಟ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಇದು ಇಲ್ಲಿನ ಜನರನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ.

ಭಾರತೀಯ ಹವಾಮಾನ ಇಲಾಖೆ ಪ್ರಾದೇಶಿಕ ಬುಲೆಟಿನ್ ಪ್ರಕಾರ, ಜೂನ್ 27 ಮತ್ತು ಜೂನ್ 28 ಮತ್ತು 29 ರಂದು ಅಸ್ಸೋಂ ಮತ್ತು ಮೇಘಾಲಯದ 10 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮತ್ತು ಜೂನ್ 29 ರಂದು ಅರುಣಾಚಲ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ. ಜೂನ್ 27 ರಂದು ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ವಿದರ್ಭ ಪ್ರದೇಶದಲ್ಲಿ ಗುಡುಗು ಮತ್ತು ಮಿಂಚಿನ ಜೊತೆಗೆ ಭಾರಿ ಮಳೆ ಆಗುತ್ತದೆ ಎಂದೂ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕದಲ್ಲೂ ಭಾರಿ ಮಳೆ ಮುನ್ಸೂಚನೆ: ಕೇರಳದಲ್ಲಿ ಮಂಗಳವಾರ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಕರ್ನಾಟಕ, ಗುಜರಾತ್, ಮತ್ತು ಮಧ್ಯ ಮಹಾರಾಷ್ಟ್ರದಲ್ಲಿ ಜೂನ್ 30 ರವರೆಗೆ ಮಳೆ ಮುಂದುವರಿಯಲಿದೆ ಎಂದು ಐಎಂಡಿ ಹೇಳಿದೆ. ಸೋಮವಾರ ದೆಹಲಿಯ ಕೆಲವು ಭಾಗಗಳಲ್ಲಿ ಮಳೆಯಾಗಿದೆ. ಮುಂಬೈ, ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ ಸೇರಿದಂತೆ ಮಹಾರಾಷ್ಟ್ರದ ಉಳಿದ ಭಾಗಗಳು, ಗುಜರಾತ್‌ನ ಕೆಲವು ಭಾಗಗಳು, ರಾಜಸ್ಥಾನ, ಹರಿಯಾಣ, ಉತ್ತರಾಖಂಡದ ಉಳಿದ ಭಾಗಗಳು ಮತ್ತು ಹಿಮಾಚಲ ಪ್ರದೇಶದ ಹೆಚ್ಚಿನ ಭಾಗಗಳಲ್ಲಿ ನೈಋತ್ಯ ಮುಂಗಾರು ಮತ್ತಷ್ಟು ವ್ಯಾಪಿಸಿಕೊಳ್ಳಲಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ.

Source : https://m.dailyhunt.in/news/india/kannada/etvbhar9348944527258-epaper-etvbhkn/deshaadyanta+mungaaru+churuku+ju+30ravarege+karnaatakadalli+male+munsuchane+himaachaladalli+9+bali-newsid-n513133840?listname=newspaperLanding&topic=bharat&index=3&topicIndex=1&mode=pwa&action=click

Leave a Reply

Your email address will not be published. Required fields are marked *