ಬಂಜಾರ ಸಂಸ್ಕೃತಿ ಶ್ರೀಮಂತ ಸಂಸ್ಕೃತಿ, ಸಂತರ ತತ್ವ ಸಮುದಾಯಕ್ಕೆ ಸ್ಫೂರ್ತಿ: ಸಂಸದ ಗೋವಿಂದ ಕಾರಜೋಳ

​ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಫೆ. 26: “ಸಂತ ಶ್ರೀ ಸೇವಾಲಾಲರ ತತ್ವ ಮತ್ತು ಆದರ್ಶಗಳನ್ನು ನಮ್ಮ ಜೀವನದಲ್ಲಿ ರೂಢಿಸಿಕೊಂಡಾಗ ಮಾತ್ರ ಅವರ ಜಯಂತಿಗೆ ನಿಜವಾದ ಬೆಲೆ ಸಿಗುತ್ತದೆ. ಸತ್ಯ, ಅಹಿಂಸೆ, ದಯೆ ಮತ್ತು ಶಿಕ್ಷಣದ ಮಹತ್ವವನ್ನು ಸಾರಿದ ಅವರು ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ,” ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಎಂ. ಕಾರಜೋಳ ತಿಳಿಸಿದರು.

​ನಗರದ ಬಂಜಾರ ಭವನದಲ್ಲಿ ಬಂಜಾರ (ಲಂಬಾಣಿ) ಸಮಾಜದ ವತಿಯಿಂದ ಆಯೋಜಿಸಿದ್ದ ಸಂತ ಶ್ರೀ ಸೇವಾಲಾಲ್ ಮಹಾರಾಜ್‍ರವರ 287ನೇ ಜಯಂತೋತ್ಸವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

​ಬಂಜಾರ ಸಂಸ್ಕೃತಿಯು ಅತ್ಯಂತ ಶ್ರೀಮಂತವಾಗಿದ್ದು, ಇಲ್ಲಿನ ನಂಗಾರಿ ವಾದ್ಯ ಕಲೆ ಇತರ ಸಮುದಾಯಗಳಿಗೆ ಪ್ರೇರಣೆಯಾಗಿದೆ. ನಶಿಸುತ್ತಿರುವ ಈ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಹಿರಿಯ ಕಲಾವಿದರ ಮೇಲಿದೆ. ಸಮುದಾಯದ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಒತ್ತು ನೀಡಿ ಮುಖ್ಯವಾಹಿನಿಗೆ ಬರಬೇಕು ಎಂದು ಅವರು ಕರೆ ನೀಡಿದರು.

​ಖನಿಜ ನಿಗಮದ ಮಾಜಿ ಅಧ್ಯಕ್ಷ ಲಿಂಗಮೂರ್ತಿ ಮಾತನಾಡಿ, ಸೇವಾಲಾಲರ ವಿಚಾರಧಾರೆಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. 19ನೇ ಶತಮಾನದಲ್ಲೇ ಮೂಢನಂಬಿಕೆ ಮುಕ್ತ ಮತ್ತು ವ್ಯಸನಮುಕ್ತ ಸಮಾಜದ ನಿರ್ಮಾಣಕ್ಕೆ ಅವರು ಶ್ರಮಿಸಿದ್ದರು ಎಂದು ಸ್ಮರಿಸಿದರು.

​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಎಮ್. ಸತೀಶ್ ಕುಮಾರ್ ಮಾತನಾಡಿ, “ಬಂಜಾರ ಸಮುದಾಯವು ನಿಸ್ವಾರ್ಥವಾದುದು. ನಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಲು ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು. ಸಮುದಾಯದಲ್ಲಿ ಒಗ್ಗಟ್ಟು ಮೂಡಬೇಕು ಮತ್ತು ಯಾವುದೇ ಕಾರಣಕ್ಕೂ ಮತಾಂತರಕ್ಕೆ ಅವಕಾಶ ನೀಡದೆ ನಮ್ಮ ಆಚಾರ-ವಿಚಾರಗಳನ್ನು ಎತ್ತಿ ಹಿಡಿಯಬೇಕು,” ಎಂದರು.

​ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ. 85 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

​ಜಯಂತಿಯ ಅಂಗವಾಗಿ ನಗರದಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು. ಪ್ರವಾಸಿ ಮಂದಿರದಿಂದ ಬಂಜಾರ ಭವನದವರೆಗೆ ನಡೆದ ಈ ಮೆರವಣಿಗೆಯನ್ನು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ರಘು ಪಿ. ಉದ್ಘಾಟಿಸಿದರು. ವಿವಿಧ ತಾಂಡಾಗಳಿಂದ ಆಗಮಿಸಿದ್ದ ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

​ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಹರೀಶ್ ನಾಯ್ಕ, ಬಿ.ಕೆ. ರಹಮತ್‌ವುಲ್ಲಾ, ಗಿರೀಶ್ ಚಂದನಾಯ್ಕ್, ಅಂಬಿಕಾ ಪಿ. ತುಳಸಿ ರಮೇಶ್ ಸೇರಿದಂತೆ ಸಮುದಾಯದ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *