ಯುಸಿಸಿಗೆ ಮುಸ್ಲಿಂ ಬೋರ್ಡ್ ವಿರೋಧ : ಧಾರ್ಮಿಕ ಮೂಲಭೂತ ಹಕ್ಕು ಪ್ರಜಾಪ್ರಭುತ್ವದ ಭಾಗ – AIMPLB

ಏಕರೂಪ ನಾಗರಿಕ ಸಂಹಿತೆಯನ್ನು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ  ಬೋರ್ಡ್ ವಿರೋಧಿಸಿದೆ. ಪ್ರಸ್ತಾವಿತ ಕಾನೂನಿಗೆ  ಮುಸ್ಲಿಂ ಮಂಡಳಿಯು ಆಕ್ಷೇಪಣೆ  ವ್ಯಕ್ತಪಡಿಸಿದೆ. 

ನವದೆಹಲಿ : ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ  ಬೋರ್ಡ್  (ಎಐಎಂಪಿಎಲ್‌ಬಿ) ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸಿದೆ. ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ, ಸಾರ್ವಜನಿಕರ ಅಭಿಪ್ರಾಯ ಪಡೆದು ಪ್ರತಿಕ್ರಿಯೆ ನೀಡುವಂತೆ  ಕಾನೂನು ಆಯೋಗದ ಕಾರ್ಯದರ್ಶಿ  AIMPLBಗೆ ಸೂಚಿಸಿತ್ತು. ಇದಾದ ನಂತರ  ಏಕರೂಪ ನಾಗರಿಕ ಸಂಹಿತೆಯ  ಡ್ರಾಫ್ಟ್ ಅನ್ನು  AIMPLB ಸಿದ್ದಪಡಿಸಿ,  ಆ ಕರಡನ್ನು ಕಾನೂನು ಆಯೋಗಕ್ಕೆ  ಹಸ್ತಾಂತರಿಸಿದೆ. 

ಈ ಕರಡಿನಲ್ಲಿ ಪ್ರಸ್ತಾವಿತ ಕಾನೂನಿಗೆ  ಮುಸ್ಲಿಂ ಮಂಡಳಿಯು ಆಕ್ಷೇಪಣೆ  ವ್ಯಕ್ತಪಡಿಸಿದೆ. ಇದು ಅವರ ಧಾರ್ಮಿಕ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದು ಮುಸ್ಲಿಂ ಸಮುದಾಯ ಅಭಿಪ್ರಾಯಪಟ್ಟಿರುವುದಾಗಿ ಹೇಳಿದೆ. ಈ ಕರಡನ್ನು ಬುಧವಾರ ಅಂದರೆ ಜುಲೈ 5 ರಂದು ಮಂಡಳಿಯ ವರ್ಚುವಲ್ ಸಭೆಯಲ್ಲಿ ಚರ್ಚೆಗಾಗಿ ಪ್ರಸ್ತುತಪಡಿಸಲಾಗಿತ್ತು. 

ಯುಸಿಸಿಯಿಂದ ಧಾರ್ಮಿಕ ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ  : 
ಇದು ದೇಶದ ವಿವಿಧ ಧಾರ್ಮಿಕ ಸಂಸ್ಕೃತಿಗಳಿಗೆ ವಿರುದ್ಧವಾಗಿದೆ ಎಂದು ಎಐಎಂಪಿಎಲ್‌ಬಿ ಸಭೆಯಲ್ಲಿ ಹೇಳಿದೆ.  ಲಿಂಗ ನ್ಯಾಯ, ಜಾತ್ಯತೀತತೆ, ರಾಷ್ಟ್ರೀಯ ಏಕೀಕರಣ ಹೀಗೆ ಎಲ್ಲಾ ಪದ್ಧತಿಗಳ ಮೇಲೆ ಏಕರೂಪ ನಾಗರಿಕ ಸಂಹಿತೆ ಬೀರುವ ಪರಿಣಾಮಗಳ ಬಗ್ಗೆ ಮಂಡಳಿಯು ಆಕ್ಷೇಪ ವ್ಯಕ್ತಪಡಿಸಿದೆ.   ಸಂವಿಧಾನದ 25, 26 ಮತ್ತು 29 ನೇ ವಿಧಿಯ ಬಗ್ಗೆಯೂ ಮಂಡಳಿಯು ಆಕ್ಷೇಪ ವ್ಯಕ್ತಪಡಿಸಿದೆ. ಧಾರ್ಮಿಕ ಮೂಲಭೂತ ಹಕ್ಕುಗಳು ನಮ್ಮ ದೇಶದ ಪ್ರಜಾಸತ್ತಾತ್ಮಕ ರಚನೆಯಾಗಿದೆ ಎಂದು ಮಂಡಳಿ ಹೇಳಿದೆ. 

ಇದೆ ವೇಳೆ, ಯುಸಿಸಿಗೆ ಸಂಬಂಧಿಸಿದಂತೆ ನೀಡಲಾದ ನೋಟಿಸ್‌ನಲ್ಲಿ ಹಲವು ವಿಷಯಗಳು ಸ್ಪಷ್ಟವಾಗಿಲ್ಲ ಎಂದು ಮಂಡಳಿ ಹೇಳಿದೆ. ಯುಸಿಸಿಯಲ್ಲಿ ತಮ್ಮ ಆಕ್ಷೇಪಣೆಗಳನ್ನು ನೋಂದಾಯಿಸಲು ಕಾನೂನು ಆಯೋಗವು ಜುಲೈ 14 ರ ವರೆಗೆ ಸಮಯವನ್ನು ನೀಡಿದೆ. 

ಮತ್ತೊಂದೆಡೆ, ಯುಸಿಸಿಯನ್ನು ರಾಜಕೀಯ ಮತ್ತು ಪ್ರಚಾರದ ಸಾಧನ ಎಂದು ಮುಸ್ಲಿಂ ಬೋರ್ಡ್ ಆಪಾದಿಸಿದೆ. ಅಲ್ಲದೆ, ಯುಸಿಸಿ ಅಗತ್ಯ ಅಥವ  ಅಪೇಕ್ಷೆ ಇಲ್ಲ ಎನ್ನುವುದನ್ನು ಕಾನೂನು ಆಯೋಗ ಈಗಾಗಲೇ ಹೇಳಿದೆ ಎಂದು ಒತ್ತಿ ಹೇಳಿದೆ. ಆದರೂ ಇಷ್ಟು ಕಡಿಮೆ ಸಮಯದಲ್ಲಿ ಒಂದರ ಹಿಂದೆ ಒಂದರಂತೆ  ಆಯೋಗಗಳು ಸಾರ್ವಜನಿಕ ಅಭಿಪ್ರಾಯವನ್ನು ಪಡೆಯುತ್ತಿರುವುದು ಆಶ್ಚರ್ಯಕರವಾಗಿದೆ. 

ನಮ್ಮ ದೇಶದ ಪ್ರಮುಖ ದಾಖಲೆಯೇ ಭಾರತದ ಸಂವಿಧಾನವಾಗಿದೆ ಎಂದು ಮುಸ್ಲಿಂ ಬೋರ್ಡ್ ಹೇಳಿದೆ. ಸಂವಿಧಾನದಲ್ಲಿ ವಿವಿಧ ಸಮುದಾಯಗಳಿಗೆ ವಿವಿಧ ಹಕ್ಕುಗಳನ್ನು ನೀಡಲಾಗಿದೆ. ವಿವಿಧ ಧರ್ಮಗಳಿಗೆ ಬೇರೆ ಬೇರೆ ರೀತಿಯ ಸ್ಥಾನಗಳನ್ನು ನೀಡಲಾಗಿದೆ ಎಂದು ಬೋರ್ಡ್ ಹೇಳಿದೆ. 

21ನೇ ಕಾನೂನು ಆಯೋಗ ಸಿದ್ಧಪಡಿಸಿರುವ ಸಮಾಲೋಚನಾ ವರದಿಯನ್ನು ಪ್ರಕಟಿಸಿದ ಬಳಿಕ ಸರಕಾರ ಸಂಪೂರ್ಣ ಮೌನವಾಗಿದೆ ಎಂದು ಎಐಎಂಪಿಎಲ್‌ಬಿ  ಹೇಳಿದೆ. ಸರ್ಕಾರ ಅದನ್ನು ಒಪ್ಪಿಕೊಂಡಿದೆಯೇ? ಅಥವಾ 21 ನೇ ಕಾನೂನು ಆಯೋಗದ ಸಂಶೋಧನೆಗಳನ್ನು ವಿವರಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದನ್ನು ಕೂಡಾ ಸರ್ಕಾರ  ಸ್ಪಷ್ಟಪಡಿಸಿಲ್ಲ ಎಂದು ಹೇಳಿದೆ. ಇನ್ನು ಸರ್ಕಾರವು 21 ನೇ ಕಾನೂನು ಆಯೋಗವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದರೆ, ಅದಕ್ಕೆ ಕಾರಣವನ್ನು ಕೂಡಾ ಬಹಿರಂಗಪಡಿಸಿಲ್ಲ ಎಂದು ಮಂಡಳಿ ಹೇಳಿದೆ.

Source : https://zeenews.india.com/kannada/india/aimplb-respnded-to-law-commission-over-ucc-143806

Leave a Reply

Your email address will not be published. Required fields are marked *