ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳಲು ಶಾಲಾ ಸಂಸತ್ತು ಸಹಕಾರಿ; ಎನ್.ಇಂದಿರಮ್ಮ.

ವಿನೂತನವಾಗಿ ನಡೆದ ಶಾಲಾ ಸಂಸತ್ತು ಚುನಾವಣೆ. ಮೊಬೈಲ್ ಆ್ಯಪ್ ಇವಿಎಂ ಅಪ್ಲಿಕೇಶನ್ ಬಳಕೆ.

ನಾಯಕನಹಟ್ಟಿ: ಜೂನ್.28 : ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024- 25ನೇ ಸಾಲಿನ ವಿದ್ಯಾರ್ಥಿಗಳಲ್ಲಿ ಚುನಾವಣೆ ಬಗ್ಗೆ ಅರಿವು ಮೂಡಿಸಲು ಮೊಬೈಲ್ ಆ್ಯಪ್ ಇವಿಎಂ ಅಪ್ಲಿಕೇಶನ್ ಬಳಸಿ ಶುಕ್ರವಾರ ಶಾಲಾ ವಿದ್ಯಾರ್ಥಿ ಸಂಸತ್ ಚುನಾವಣೆ ವಿನೂತವಾಗಿ ನಡೆಸಲಾಯಿತು. ನಾಮಪತ್ರ ಸಲ್ಲಿಸುವಿಕೆ, ಪರಿಶೀಲನೆ, ಹಿಂತೆಗೆದುಕೊಳ್ಳುವಿಕೆ, ಚುನಾವಣಾ ಪ್ರಚಾರ, ಚುನಾವಣೆ, ಮತ ಎಣಿಕೆ ಸೇರಿದಂತೆ ಪ್ರತಿಯೊಂದಕ್ಕೂ ಚುನಾವಣಾ ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ನಾಮಪತ್ರ ತುಂಬಿ ರೂ.20 ಠೇವಣಿ ಭರಿಸಿ ಮುಖ್ಯ ಚುನಾವಣಾಧಿಕಾರಿ ಎನ್.ಇಂದಿರಮ್ಮ ಅವರಿಗೆ ಸಲ್ಲಿಸಿದ್ದರು.

ಮೊದಲು ಮತದಾನದ ಅಧಿಕಾರಿ ಮತದಾರರ ಗುರುತು ದಾಖಲಿಸಿದರೆ, ಎರಡನೇ ಅಧಿಕಾರಿ ಮತದಾರರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಿದರು. ಮತ್ತೊಬ್ಬ ಅಧಿಕಾರಿ ಮತದಾರರ ನೊಂದಣಿ ಪುಸ್ತಕದಲ್ಲಿ ಸಹಿ ಪಡೆದು ಮತ ಚಲಾಯಿಸಲು ಅನುವು ಮಾಡಿಕೊಟ್ಟರು. ಸಂಸದೀಯ ಮಾದರಿಯಲ್ಲಿ ಮೊಬೈಲ್ ಆ್ಯಪ್ ಇವಿಎಂ ತಂತ್ರಜ್ಞಾನ ಬಳಸಿ ಪ್ರತ್ಯೇಕ ವಿಭಾಗದಲ್ಲಿ ಇರಿಸಲಾಗಿದ್ದ ಬ್ಯಾಲೆಟ್ ಯೂನಿಟ್‍ನಲ್ಲಿ ಮಕ್ಕಳು ತಮ್ಮ ಆಯ್ಕೆಯ ಅಭ್ಯರ್ಥಿಯ ಎದುರಿನ ನೀಲಿ ಗುಂಡಿ ಒತ್ತಿ ಮತ ಚಲಾಯಿಸಿದರು.  ನಂತರ ಅಭ್ಯರ್ಥಿಗಳ ಸಮ್ಮುಖದಲ್ಲಿ ಮತ ಎಣಿಸಲಾಯಿತು. ಐದನೇ ತರಗತಿಯ ಐವರು ವಿದ್ಯಾರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇವರಲ್ಲಿ ಇಬ್ಬರು ವಿಜೇತರಾದರು. ಆರನೇ ತರಗತಿಯಲ್ಲಿ ಎಂಟು ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಇವರಲ್ಲಿ ನಾಲ್ವರು ವಿಜೇತರಾದರು. ಏಳನೇ ತರಗತಿಯಲ್ಲಿ 8 ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು, ಇವರಲ್ಲಿ ನಾಲ್ವರು ವಿದಾರ್ಥಿಗಳು ವಿಜೇತರಾದರು. ಚುನಾವಣೆಯಲ್ಲಿ ಶಾಲಾ ವಿದ್ಯಾರ್ಥಿ ನಾಯಕನಾಗಿ ಋತ್ವಿಕ್, ಉಪನಾಯಕಿಯಾಗಿ ಗೀತಾ ಆಯ್ಕೆಯಾದರು. ಶಾಲಾ ಶಿಕ್ಷಕರು ಚುನಾವಣಾ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು.

ಶಾಲೆಯ ಹಿರಿಯ ಮುಖ್ಯಶಿಕ್ಷಕಿ ಎನ್.ಇಂದಿರಮ್ಮ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಪ್ರಜಾಪ್ರಭುತ್ವದ ಪ್ರಮುಖ ಭಾಗವಾಗಿರುವ ಚುನಾವಣೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಮೂಲಕ ನಾಯಕತ್ವ ಗುಣ ಬೆಳೆಸುವ ದಿಸೆಯಲ್ಲಿ ಶಾಲಾ ಸಂಸತ್ತು ಸಹಕಾರಿಯಾಗಿದೆ. ಪಠ್ಯದಲ್ಲಿ ಚುನಾವಣೆ ಪ್ರಕ್ರಿಯೆ ಕುರಿತು ಓದುವುದಕ್ಕಿಂತ ಇಂದು ಪ್ರಾತ್ಯಕ್ಷಿಕವಾಗಿ ವಿದ್ಯಾರ್ಥಿಗಳು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಭವಿಷ್ಯತ್ತಿನಲ್ಲಿ ಎದುರಿಸುವ ಚುನಾವಣೆಗಳ ಬಗ್ಗೆ ಅರಿವು ಮೂಡಿಸಿದಂತಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್.ಡಿಎಂಸಿ ಅಧ್ಯಕ್ಷರಾದ ಸುಮಲತಾ, ಸದಸ್ಯರಾದ ವಾಣಿಶ್ರೀ, ಎನ್.ಮಾರುತಿ, ಶಿಕ್ಷಕರಾದ ಎಂ.ವಿ.ಯತೀಶ್, ಎಚ್.ಟಿ.ಮಂಜುಳಮ್ಮ, ಎನ್.ಸುಮಿತ್ರ, ಡಿ.ಕೃಷ್ಣಾರೆಡ್ಡಿ, ಜಿ.ಗಾಯಿತ್ರಿದೇವಿ, ಕೆ.ಎಲ್ ಉಷಾ, ಬಿ.ಎಂ.ಶಿಲ್ಪಾ, ಬಿ.ಕೆ.ಸುಮಾ, ಎಚ್.ಮಂಜುನಾಥ, ಜಿ.ಪಿ.ಚಂದನ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *