Nagastra 1: ಭಾರತೀಯ ಸೇನೆ ಸೇರಿದ ‘ದೇಶೀಯ’ ನಾಗಾಸ್ತ್ರ ಡ್ರೋನ್‌ಗಳು; ಉಗ್ರರಿಗೆ ನಡುಕ, ಏನಿದರ ವಿಶೇಷ?

ನವದೆಹಲಿ: ದೇಶೀಯವಾಗಿ ನಿರ್ಮಿಸಿದ ನಾಗಾಸ್ತ್ರ 1 (Nagastra 1 Drones) ಡ್ರೋನ್‌ಗಳನ್ನು ಮೊದಲ ಹಂತದಲ್ಲಿ ಭಾರತೀಯ ಸೇನೆಗೆ ಹಸ್ತಾಂತರಿಸಲಾಗಿದೆ. ಅತ್ಯಾಧುನಿಕ ಡ್ರೋನ್‌ಗಳ ಅಳವಡಿಕೆಯಿಂದ ಭಾರತೀಯ ಸೇನೆಗೆ (Indian Army) ಆನೆ ಬಲ ಬಂದಂತಾಗಿದ್ದು, ಶತ್ರುಗಳಲ್ಲಿ ನಡುಕ ಶುರುವಾಗಿದೆ. ನಾಗ್ಪುರ ಮೂಲದ ಎಕನಾಮಿಕ್ಸ್‌ ಎಕ್ಸ್‌ಪ್ಲೋಸಿವ್ಸ್‌ ಲಿಮಿಟೆಡ್‌ (Economics Explosives Limited) ಕಂಪನಿಯು ಡ್ರೋನ್‌ಗಳನ್ನು ತಯಾರಿಸಿದ್ದು, ಮೊದಲ ಹಂತದಲ್ಲಿ 120 ಡ್ರೋನ್‌ಗಳನ್ನು ಸೇನೆಗೆ ನೀಡಲಾಗಿದೆ. ಸೇನೆಯು ಡ್ರೋನ್‌ಗಳನ್ನು ಪುಲಗಾಂವ್‌ನಲ್ಲಿ ಡ್ರೋನ್‌ಗಳನ್ನು ಸ್ವೀಕರಿಸಿದೆ ಎಂದು ತಿಳಿದುಬಂದಿದೆ.

ಸುಮಾರು ಶೇ.75ರಷ್ಟು ದೇಶೀಯ ಉಪಕರಣಗಳನ್ನು ಬಳಸಿಕೊಂಡು ನಾಗಾಸ್ತ್ರ 1 ಡ್ರೋನ್‌ಗಳನ್ನು ತಯಾರಿಸಲಾಗಿದೆ. ಇದು ರಕ್ಷಣಾ ಕ್ಷೇತ್ರದಲ್ಲೂ ಮೇಕ್‌ ಇನ್‌ ಇಂಡಿಯಾ ಹಾಗೂ ಆತ್ಮನಿರ್ಭರ ಭಾರತ ಯೋಜನೆಗಳಿಗೆ ಪುಷ್ಟಿ ನೀಡಿದಂತಾಗಿದೆ ಎಂದೇ ರಕ್ಷಣಾ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. ಇದೇ ಮಾದರಿಯ ಅತ್ಯಾಧುನಿಕ ಡ್ರೋನ್‌ಗಳು ರಷ್ಯಾ, ಉಕ್ರೇನ್‌, ಸೌದಿ ಅರೇಬಿಯಾ, ರಷ್ಯಾ, ಸಿರಿಯಾ, ಅಜರ್‌ಬೈಜಾನ್‌ ಹಾಗೂ ಅರ್ಮೇನಿಯಾ ದೇಶಗಳ ಸೇನೆಗಳಲ್ಲಿ ಇವೆ.

ಏನಿವುಗಳ ವಿಶೇಷ?

ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ನಾಗಾಸ್ತ್ರ ಡ್ರೋನ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವುಗಳನ್ನು ಸೈನಿಕರು ಹೊತ್ತುಕೊಂಡು ಹೋಗಬಹುದಾಗಿದೆ. ಸುಮಾರು 60 ನಿಮಿಷ 4,500 ಮೀಟರ್‌ ಎತ್ತರದಲ್ಲಿ ಹಾರಾಟ ನಡೆಸಬಲ್ಲ ಸಾಮರ್ಥ್ಯ ಹೊಂದಿರುವ ಇವುಗಳು ರಿಮೋಟ್‌ ಕಂಟ್ರೋಲ್‌ ಮೋಡ್‌ನಲ್ಲಿ 15 ಕಿಲೋಮೀಟರ್‌ ಹಾಗೂ ಆಟೋನಾಮಸ್‌ ಮೋಡ್‌ (ಸ್ವಯಂಚಾಲಿತವಾಗಿ ಹಾರಾಟ)ನಲ್ಲಿ ಸುಮಾರು 30 ಕಿಲೋಮೀಟರ್‌ವರೆಗೆ ಹಾರಾಟ ನಡೆಸಲಿವೆ.

ಸುಮಾರು 30 ಕೆ.ಜಿ ತೂಕ ಹೊಂದಿರುವ ಇವುಗಳು ಒಂದು ಕೆ.ಜಿ ಸ್ಫೋಟಕಗಳನ್ನು ಕೊಂಡೊಯ್ಯಬಲ್ಲ ಸಾಮರ್ಥ್ಯ ಹೊಂದಿವೆ. ರಾತ್ರಿ ಕೂಡ ಶತ್ರುಗಳ ಮೇಲೆ ನಿಗಾ ಇರಿಸುವ ಇವುಗಳನ್ನು ಶತ್ರುಪಡೆಗಳ ಸೇನಾ ನೆಲೆಗಳು, ಉಗ್ರರ ಲಾಂಚ್‌ಪ್ಯಾಡ್‌ಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿವೆ. ಜಿಪಿಎಸ್‌ ಆಧಾರಿತ ಡ್ರೋನ್‌ಗಳಾಗಿರುವ ಇವು ಕ್ಯಾಮೆರಾಗಳ ಸಹಾಯದಿಂದ ಸುಮಾರು 2 ಮೀಟರ್‌ ದೂರದಿಂದ ವೈರಿಗಳ ನೆಲೆಗಳನ್ನು ಹೊಡೆದುರುಳಿಸುತ್ತವೆ. ಗಡಿಯಲ್ಲಿ ಚೀನಾ ಹಾಗೂ ಪಾಕಿಸ್ತಾನದ ಉಪಟಳವನ್ನು ನಿಗ್ರಹಿಸಲು, ತುರ್ತು ಸಂದರ್ಭಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲು, ಉಗ್ರರ ನೆಲೆಗಳನ್ನು ಹೊಡೆದುರುಳಿಸಲು ಇವು ನೆರವಾಗಲಿವೆ.

Source : https://vistaranews.com/national/first-batch-of-made-in-india-nagastra-1-delivered-to-army-key-features-of-this-suicide-drone/673951.html

Leave a Reply

Your email address will not be published. Required fields are marked *