ನರಕ ಚತುರ್ದಶಿ 2025: ಅಭ್ಯಂಗ ಸ್ನಾನ ಏಕೆ ಮಾಡಬೇಕು? ಈ ಆಚರಣೆಯ ಹಿಂದಿನ ಪೌರಾಣಿಕ ಮತ್ತು ವೈಜ್ಞಾನಿಕ.

ಬೆಳಕಿನ ಹಬ್ಬ ದೀಪಾವಳಿ ಹಿಂದೂಗಳ ಅತಿ ದೊಡ್ಡ ಹಾಗೂ ವಿಶೇಷ ಹಬ್ಬವಾಗಿದೆ. ಕತ್ತಲೆಯ ಮೇಲೆ ಬೆಳಕಿನ ವಿಜಯ, ಕೆಟ್ಟದರ ಮೇಲೆ ಒಳ್ಳೆಯದರ ಜಯ ಹಾಗೂ ಹೊಸ ಬೆಳಕು, ಭರವಸೆ, ಸಂತೋಷ ಮತ್ತು ಸಮೃದ್ಧಿಯ ಸಂಕೇತವಾಗಿರುವ ಬೆಳಕಿನ ಹಬ್ಬವನ್ನು ಐದು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಈ ಐದು ದಿನಗಳ ಹಬ್ಬಗಳಲ್ಲಿ ನರಕ ಚತುರ್ದಶಿ (Narak Chaturdashi) ಸಹ ಒಂದು. ಪ್ರತಿವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನದಂದು ನರಕ ಚತುರ್ದಶಿ ಹಬ್ಬವನ್ನು ಆಚರಿಸಲಾಗುತ್ತದೆ. ನಮ್ಮ ಕರ್ನಾಟಕ ಸೇರಿದಂತೆ ದೇಶದ ಹಲವಾರು ಭಾಗಗಳಲ್ಲಿ ಈ ಹಬ್ಬದ ದಿನ ಮುಂಜಾನೆ ಬೇಗ ಎದ್ದು ಅಭ್ಯಂಗ ಸ್ನಾನ ಮಾಡುವ ಸಂಪ್ರದಾಯವಿದೆ. ಈ ಸಂಪ್ರದಾಯದ ಹಿನ್ನೆಲೆ, ಮಹತ್ವ ಹಾಗೂ ಅಭ್ಯಂಗ ಸ್ನಾನ ಅಂದರೆ ಎಣ್ಣೆ ಸ್ನಾನದ ವೈಜ್ಞಾನಿಕ ಕಾರಣಗಳ ಬಗ್ಗೆ ತಿಳಿಯೋಣ.

ಅಭ್ಯಂಗ ಸ್ನಾನದ ಶುಭ ಮುಹೂರ್ತ (Narak Chaturdashi 2025 Muhurat)

ಚತುರ್ದಶಿ ತಿಥಿ ಆರಂಭ: ಅಕ್ಟೋಬರ್‌ 19, ಮಧ್ಯಾಹ್ನ 1:51

ಚತುರ್ದಶಿ ತಿಥಿ ಮುಕ್ತಾಯ: ಅಕ್ಟೋಬರ್‌ 20, ಮಧ್ಯಾಹ್ನ 3:44

ಅಭ್ಯಂಗ ಸ್ನಾನದ ಶುಭ ಸಮಯ: ಅಕ್ಟೋಬರ್‌ 20, ಮುಂಜಾನೆ 5:19 ರಿಂದ ಬೆಳಗ್ಗೆ 7:12 ರವರೆಗೆ
(ಅಭ್ಯಂಗ ಸ್ನಾನವನ್ನು ಸೂರ್ಯೋದಯಕ್ಕೂ ಮುನ್ನವೇ ಮಾಡಿದರೆ ಶ್ರೇಷ್ಠ ಎಂದು ನಂಬಿಕೆ)

ಅಭ್ಯಂಗ ಸ್ನಾನದ ಹಿನ್ನೆಲೆ ಮತ್ತು ಪೌರಾಣಿಕ ಮಹತ್ವ

ನರಕ ಚತುರ್ದಶಿ ಹಬ್ಬವು ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯದ ಸಂಕೇತವಾಗಿದೆ. ಈ ದಿನ ಮುಂಜಾನೇ ಬೇಗ ಎದ್ದು ಎಣ್ಣೆ ಸ್ನಾನ ಮಾಡಿದರೆ ಪವಿತ್ರ ಗಂಗಾ ಸ್ನಾನ ಮಾಡಿದಷ್ಟೇ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯಿದೆ.

ಅಭ್ಯಂಗ ಸ್ನಾನ ಮನುಷ್ಯನ ಅಹಂಕಾರ, ಕೋಪ, ನಕಾರಾತ್ಮಕ ಆಲೋಚನೆಗಳನ್ನು ಶುದ್ಧೀಕರಿಸಿ ದೇಹ ಮತ್ತು ಮನಸ್ಸಿನ ಪಾವಿತ್ರ್ಯವನ್ನು ಸೂಚಿಸುತ್ತದೆ. ಈ ದಿನ ಜನರು ದೇಹ ಮತ್ತು ಮನಸ್ಸನ್ನು ಶುದ್ಧಗೊಳಿಸಲು ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಸಂಪೂರ್ಣ ದೇಹಕ್ಕೆ ಹಚ್ಚಿ ಬಿಸಿ ನೀರಿನಿಂದ ಸ್ನಾನ ಮಾಡುತ್ತಾರೆ.

ಪೌರಾಣಿಕ ಕಥೆಯ ಪ್ರಕಾರ — ಬ್ರಹ್ಮನಿಂದ ವರ ಪಡೆದ ನರಕಾಸುರನ ಅಹಂಕಾರ ಅತಿಯಾಗಿ, ದೇವತೆಗಳಿಗೂ ತೊಂದರೆ ಕೊಡುತ್ತಿದ್ದನು. 16,100 ಗೋಪಿಕಾ ಸ್ತ್ರೀಯರನ್ನು ಬಂಧನದಲ್ಲಿಟ್ಟು ಕಿರುಕುಳ ನೀಡುತ್ತಿದ್ದನು. ಗೋಪಿಕಾ ಸ್ತ್ರೀಯರು ಮತ್ತು ದೇವತೆಗಳು ಶ್ರೀಕೃಷ್ಣನನ್ನು ಮೊರೆಯಿಡಿದಾಗ, ಸತ್ಯಭಾಮೆಯ ಮುಖಾಂತರ ಶ್ರೀಕೃಷ್ಣನು ನರಕಾಸುರನ ಸಂಹಾರ ಮಾಡಿದರು.

ನರಕಾಸುರನ ರಕ್ತದಿಂದ ದೇಹ ಕಲ್ಮಶವಾದ ನಂತರ, ಶ್ರೀಕೃಷ್ಣನು ಎಣ್ಣೆ ಸ್ನಾನ ಮಾಡಿದ್ದನು. ಇದೇ ಎಣ್ಣೆ ಸ್ನಾನದ (ಅಭ್ಯಂಗ ಸ್ನಾನ) ಸಂಪ್ರದಾಯದ ಆರಂಭ. ಹೀಗಾಗಿ ಕೆಟ್ಟದರ ವಿರುದ್ಧ ಒಳ್ಳೆಯದರ ಜಯದ ಸಂಕೇತವಾಗಿ ನರಕ ಚತುರ್ದಶಿಯ ದಿನ ಎಣ್ಣೆ ಸ್ನಾನ ಮಾಡಲಾಗುತ್ತದೆ.

ಅಭ್ಯಂಗ ಸ್ನಾನದ ವೈಜ್ಞಾನಿಕ ಮಹತ್ವ (Scientific Benefits of Abhyanga Snan)

ನರಕ ಚತುರ್ದಶಿಯ ದಿನದಂದು ಮಾಡುವ ಸಾಂಪ್ರದಾಯಿಕ ಎಣ್ಣೆ ಸ್ನಾನವನ್ನು ವಿಜ್ಞಾನಿಗಳೂ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಉಪಯುಕ್ತವೆಂದು ಪರಿಗಣಿಸಿದ್ದಾರೆ.

ದೇಹಕ್ಕೆ ಉಷ್ಣತೆ ಮತ್ತು ರಕ್ಷಣೆ: ಎಳ್ಳೆಣ್ಣೆಯಿಂದ ಮಸಾಜ್ ಮಾಡುವುದರಿಂದ ದೇಹಕ್ಕೆ ಉಷ್ಣತೆ ಸಿಗುತ್ತದೆ ಮತ್ತು ಶೀತಸಂಬಂಧಿ ಕಾಯಿಲೆಗಳನ್ನು ತಡೆಗಟ್ಟುತ್ತದೆ.

ಚರ್ಮದ ತೇವಾಂಶ ಮತ್ತು ಹೊಳಪು: ಎಣ್ಣೆ ಹಚ್ಚುವುದರಿಂದ ಚರ್ಮ ಮೃದುವಾಗುತ್ತದೆ ಮತ್ತು ನೈಸರ್ಗಿಕ ಹೊಳಪು ಹೆಚ್ಚುತ್ತದೆ.

ಮೂಳೆ ಮತ್ತು ಕೀಲು ಆರೋಗ್ಯ: ಎಳ್ಳೆಣ್ಣೆ ಉರಿಯೂತ ನಿವಾರಕವಾಗಿರುವುದರಿಂದ ಕೀಲು ನೋವು ಮತ್ತು ಉರಿಯೂತ ನಿವಾರಿಸುತ್ತದೆ.

ತಲೆ ಮತ್ತು ಕೂದಲಿನ ಆರೋಗ್ಯ: ತಲೆಮೇಲಿನ ಎಣ್ಣೆ ಮಸಾಜ್ ನಿಂದ ತಲೆಹೊಟ್ಟು, ಕೂದಲು ಉದುರುವಿಕೆ ಕಡಿಮೆಯಾಗುತ್ತದೆ, ಕೂದಲಿಗೆ ಹೊಳಪು ಹೆಚ್ಚುತ್ತದೆ.

ಮನಶಾಂತಿ: ಎಣ್ಣೆ ಮಸಾಜ್ ದೇಹದ ನರಸಂಕುಲವನ್ನು ಶಾಂತಗೊಳಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮನಸ್ಸಿಗೆ ಶಾಂತಿ ನೀಡುತ್ತದೆ.

ಸಾರಾಂಶ

ನರಕ ಚತುರ್ದಶಿಯ ಮುಂಜಾನೆ ಎಣ್ಣೆ ಸ್ನಾನ ಮಾಡುವುದರಿಂದ ದೇಹ ಮತ್ತು ಮನಸ್ಸು ಶುದ್ಧಗೊಳ್ಳುತ್ತದೆ ಎಂಬ ನಂಬಿಕೆ ಇದೆ. ಜೊತೆಗೆ ಆರೋಗ್ಯದ ದೃಷ್ಟಿಯಿಂದಲೂ ಇದು ಅತ್ಯಂತ ಪ್ರಯೋಜನಕಾರಿ. ಆದ್ದರಿಂದ ಈ ದೀಪಾವಳಿಯಲ್ಲಿ ಸಾಂಪ್ರದಾಯಿಕ ಅಭ್ಯಂಗ ಸ್ನಾನ ಮಾಡಿ ಶುದ್ಧತೆ, ಶಾಂತಿ ಮತ್ತು ಹೊಸ ಭರವಸೆಯೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸೋಣ!

Views: 13

Leave a Reply

Your email address will not be published. Required fields are marked *