ಚಿತ್ರದುರ್ಗ ಆ. 18
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ನರೇಂದ್ರ ಮೋದಿಯವರು ಮತಗಳ್ಳತನದಿಂದ ದೇಶದ ಪ್ರಧಾನ ಮಂತ್ರಿಗಳಾಗಿದ್ದಾರೆ, ನಿಜವಾಗಿಯೂ ಅವರು ದೇಶದ ಪ್ರಧಾನ ಮಂತ್ರಿಯಾಗಿಲ್ಲ, ಇದರ ಬಗ್ಗೆ ರಾಹುಲ್ ಗಾಂಧಿಯವರು ಧ್ವನಿ ಎತ್ತಿದ್ದಾರೆ ಇದಕ್ಕೆ ಕಾಂಗ್ರೇಸ್ ಪಕ್ಷ ಸಾಥ್ ನೀಡಲಿದೆ ಎಂದು ಚಿತ್ರದುರ್ಗ ಯೂತ್ ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷ ಕಾರೇಹಳ್ಳಿ ಉಲ್ಲಾಸ್ ತಿಳಿಸಿದರು.
ಚಿತ್ರದುರ್ಗ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಸೋಮವಾರ ಚಿತ್ರದುರ್ಗ ಯೂತ್ ಕಾಂಗ್ರೆಸ್‍ನ ನೇತೃತ್ವದಲ್ಲಿ ಮತಗಳ್ಳತನವನ್ನು ನಿಲ್ಲಿಸಿ ಎಂಬ ಭಿತ್ತಿ ಪತ್ರವನ್ನು ಬಸ್‍ಗಳಿಗೆ ಅಂಟಿಸುವುದರ ಮೂಲಕ ಬಿಜೆಪಿ ವಿರುದ್ದ ಪ್ರತಿಭಟನೆಯನ್ನು ನಡೆಸಿದ ಅವರು, ನಂತರ ಮಾತನಾಡಿ, ಚುನಾವಣಾ ಆಯೋಗದಿಂದ ಪ್ರಜಾ ಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಬೆಂಗಳೂರು ಮಹಾದೇವಪುರ ಕ್ಷೇತ್ರದಲ್ಲಿ ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಮತಗಳ್ಳತನವಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಬೆಂಗಳೂರಿಗೆ ಆಗಮಿಸಿ ಸಾಕ್ಷಿ ಸಮೇತ ವಿವರವನ್ನು ತಿಳಿಸಿ ಚುನಾವಣಾ ಆಯೋಗಕ್ಕೂ ಸಹಾ ದೂರನ್ನು ನೀಡಿದ್ದಾರೆ.
ಇದರಲ್ಲಿ ಓರ್ವ ಮಹಿಳೆ ಹತ್ತು ಕಡೆಯಲ್ಲಿ ಒಟ್ಟಾಗಿ ಇರುವೆ ಪುರಾವೆಯನ್ನು ನೀಡಲಾಗಿದೆ. ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಮೂಲ ಕಾರಣ ಈ ಮತಗಳ್ಳತನವಾಗಿದೆ. ಬಿಜೆಪಿ ಚುನಾವಣಾ ಆಯೋಗವನ್ನು ದುರುಪಯೋಗ ಮಾಡಿಕೊಂಡಿದೆ. ನರೇಂದ್ರ ಮೋದಿ ಇಂದು ಪ್ರಧಾನ ಮಂತ್ರಿಯಾಗಿದ್ದಾರೆ. ಕೇವಲ 20 ಸೀಟುಗಳ ವ್ಯತ್ಯಾಸದಿಂದ ಅವರು ದೇಶದ ಪ್ರಧಾನ ಮಂತ್ರಿಯಾಗಿದ್ದಾರೆ. ಈ 20 ಸೀಟುಗಳು ಸಹಾ ಈ ಮತಗಳ್ಳತನದಿಂದ ಬಂದಿವೆ ಎಂದು ದೂರಿದರು.
ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಮತಗಳ್ಳತನದಿಂದ ನಿಜವಾದ ಚುನಾವಣೆಯಿಂದ ಅಲ್ಲ ಇದಕ್ಕೆ ಚುನಾವಣಾ ಆಯೋಗವು ಸಹಾ ಸಾಥ್ ನೀಡಿದೆ ಮುಂದಿನ ಚುನಾವಣೆಯಲ್ಲಿ ಈ ರೀತಿಯಾಗಿ ಆಗಲು ಬಿಡುವುದಿಲ್ಲ, ಜನ ಜಾಗೃತಿಯನ್ನು ಮಾಡಲಾಗುವುದು ಇದಕ್ಕಾಗಿ ಯೂತ್ ಕಾಂಗ್ರೆಸ್ ಇಂದು ಕೆ.ಎಸ್.ಆರ್.ಟಿ.ಸಿ ಬಸ್‍ಗಳ ಮೇಲೆ, ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯಾದ ಪೋಸ್ಟರ್ ಗಳನ್ನು ಅಂಟಿಸುವುದರ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದು ಕಾರೇಹಳ್ಳಿ ಉಲ್ಲಾಸ್ ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ನಿಜಾಮ್, ಚಿತ್ರದುರ್ಗ ಗ್ರಾಮಾಂತರ ಅಧ್ಯಕ್ಷರಾದ ಮಹಾಂತೇಶ್, ಹೊಳಲ್ಕರೆ ಬ್ಲಾಕ್ ಅಧ್ಯಕ್ಷರಾದ ಚೇತನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂಜೂಮಾಮ್, ಮಾರುತಿ, ರಾಜ್ಯ ಪ್ರಧಾನ ಕಾರ್ಯ ದರ್ಶೀ ಕುಮಾರ್, ಕೆ.ಪಿ.ಸಿ.ಸಿ.ಸದ್ಯರಾದ ಮಧುಗೌಡ, ಮಧು ಸೇರಿದಂತೆ ಇತರರು ಭಾಗವಹಿಸಿದ್ದರು.
Views: 13