ಚಿತ್ರದುರ್ಗ ಅ. 03
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಪ್ರಾಮಾಣಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡ ಪ್ರತಿ ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ ಮತ್ತು ಸೇವಾ ಮನೋಭಾವನೆ ಮನೆ ಮಾಡಿರುತ್ತದೆ ಎಂದು ಚಿತ್ರದುರ್ಗ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಣ್ಣ ಪಾಲಯ್ಯ ತಿಳಿಸಿದರು.

ಚಿತ್ರದುರ್ಗ ತಾಲೂಕಿನ ಮದಕರಿಪುರ ಗ್ರಾಮದಲ್ಲಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ಏಳು ದಿನಗಳ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆ ಈ ಮೊದಲು ಪದವಿ ಕಾಲೇಜುಗಳಲ್ಲಿ ಮತ್ತು ಸ್ನಾತಕೋತರ ಕೇಂದ್ರಗಳಲ್ಲಿ ಮಾತ್ರ ಅನುಷ್ಠಾನಗೊಳಿಸಲಾಗಿತ್ತು. ಆದರೆ ಈಗ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ವಿಸ್ತರಿಸುವ ಮೂಲಕ ಲೋಕ ಸೇವಾ ಮತ್ತು ರಾಷ್ಟ್ರ ನಿರ್ಮಾಣದ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನೆ ಸ್ಪೂರ್ತಿಯ ಸೆಲೆಯಾಗಿದೆ ಎಂದರು.
ಸಮಾರೋಪ ಸಮಾರಂಭದಲ್ಲಿ ಭಾಗಿಯಾದ ಚಿತ್ರದುರ್ಗ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಬಿ ಆರ್ ಮಲ್ಲೇಶ್ ಮಾತನಾಡಿ ಎನ್‍ಎಸ್‍ಎಸ್ ಸೇರಿದರೆ ಬರುವ ಲಾಭವಾದರೂ ಏನು ಎಂದು ಪ್ರಶ್ನಿಸುವ ವಿದ್ಯಾರ್ಥಿಗಳಿಗೆ ಶಿಬಿರದಲ್ಲಿ ಪಾಲ್ಗೊಂಡ ನೀವುಗಳೇ ಉತ್ತರವಾಗಬಹುದು ಎಂದು ಭಾವಿಸುವೆ. ಯಾಕೆಂದರೆ ನಿಮ್ಮಲ್ಲಿ ಈಗ ಶಿಸ್ತು, ಸಮಯ ಪಾಲನೆ, ಸಹಬಾಳ್ವೆ, ಸಹಭೋಜನ, ಹೊಂದಾಣಿಕೆ, ಶ್ರಮದ ಮಹತ್ವ, ಭಾಷಣ ಕಲೆ, ಸಭಾ ಕಂಪನ ನಿವಾರಣೆ, ಪ್ರತಿಭಾ ಪ್ರದರ್ಶನ, ವ್ಯಕ್ತಿತ್ವ ವಿಕಸನ, ಆತ್ಮಸ್ಥೈರ್ಯ, ರಾಷ್ಟ್ರಭಕ್ತಿ ಎಲ್ಲಕ್ಕಿಂತಲೂ ಹೆಚ್ಚಾಗಿ ನಿಮ್ಮ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಯಾಗಿರುವುದು ಈ ಏಳು ದಿನಗಳ ವಿಶೇಷ ವಾರ್ಷಿಕ ಶಿಬಿರದಲ್ಲಿ ಸಾಬೀತಾಗಿದೆ. ಇಲ್ಲಿ ರೂಢಿಸಿಕೊಂಡ ಈ ಉತ್ತಮ ಅಭ್ಯಾಸಗಳನ್ನು ಈ ಶಿಬಿರಕ್ಕೆ ಸೀಮಿತಗೊಳಿಸದೆ ಮುಂದೆಯೂ ನಿಮ್ಮ ಬದುಕಿನಲ್ಲಿ ಚಾಚು ತಪ್ಪದೇ ಪರಿಪಾಲಿಸಬೇಕು ಎಂದು ತಿಳಿಸಿದರು.
ಶಿಬಿರಾರ್ಥಿಗಳಿಗೆ ಏಳು ದಿನಗಳ ಕಾಲ ಯೋಗಾಭ್ಯಾಸ ಹೇಳಿಕೊಟ್ಟ ಕನ್ನಡ ಉಪನ್ಯಾಸಕರು ಹಾಗೂ ಸಾಹಿತಿ ಗಳಾದ ಡಾ. ತಿಪ್ಪೇಸ್ವಾಮಿ ಮಾತನಾಡಿ ಯೋಗ ಒಂದು ಹಳೆಯ ಭಾರತೀಯ ಚಿಂತನೆ. ಆರೋಗ್ಯದ ಕುರಿತಾದ ವಿಜ್ಞಾನ ಮತ್ತು ಆಧ್ಯಾತ್ಮಿಕ ಮಾರ್ಗದ ಸಾಧನೆ. ಯೋಗವು ದೇಹ, ಮನಸ್ಸು ಮತ್ತು ಆತ್ಮ ಎಂಬ ಮೂರು ಮಾರ್ಗಗಳಲ್ಲಿ ಪೂರ್ಣತೆಯ ಅನುಭವಕ್ಕೆ ಒಯ್ಯುವುದು ಯೋಗ. ಯೋಗದಿಂದ ಏಕಾಗ್ರತೆ, ಉತ್ತಮ ಆರೋಗ್ಯ, ಮನಸ್ಸಿಗೆ ವಿಶ್ರಾಂತಿ ಪಡೆಯಬಹುದಾಗಿದೆ ಎಂದರು.
ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ಹಾಗೂ ಶಿಬಿರಧಿಕಾರಿ ಟಿ ಪೆನ್ನಯ್ಯ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯು ನಾಲ್ಕು ದಶಕಗಳನ್ನು ಕ್ರಮಿಸಿದೆ.ಈ ಯೋಜನೆಯನ್ನು ನಮ್ಮ ರಾಷ್ಟ್ರ ನಾಯಕರು ಮತ್ತು ಶಿಕ್ಷಣವೇತ್ತೆರು ದೇಶದ ಯುವ ಜನರಿಗಾಗಿಯೇ ರೂಪಿಸಿ ಅನುಷ್ಠಾನಗೊಳಿಸಿದ್ದಾರೆ. ಭಾರತವು ಉಜ್ವಲ ಭವಿಷ್ಯವನ್ನು ಹೊಂದಬೇಕಾದರೆ ಯುವ ಜನಾಂಗ ಯಾವ ಮಾರ್ಗದಲ್ಲಿ ತಮ್ಮ ಬದುಕನ್ನು ಸಾಗಿಸಬೇಕೆಂಬ ಚಿಂತನೆಗಳ ಒಂದು ಶ್ರೇಷ್ಠ ಮಾರ್ಗವೇ ರಾಷ್ಟ್ರೀಯ ಸೇವಾ ಯೋಜನೆ ಈ ಯೋಜನೆ ಮಹಾತ್ಮ ಗಾಂಧೀಜಿಯವರ ಮಾನಸಿಕ ಶಿಶುವಾಗಿದೆ ಎಂದರು.
ಚಿತ್ರದುರ್ಗ ಜಿಲ್ಲಾ ಬಿ ಸಿ ಎಂ ಅಧಿಕಾರಿಗಳಾದ ಶ್ರೀಮತಿ ಪುಷ್ಪಲತ ಬಾವಿಮಠ ಮಾತನಾಡಿ ಶಾಲಾ-ಕಾಲೇಜುಗಳಲ್ಲಿನ ನಾಲ್ಕು ಗೋಡೆಗಳ ತರಗತಿಗಳಲ್ಲಿ ಕಲಿಸುವ ವಿದ್ಯಾಭ್ಯಾಸವು ಉದ್ಯೋಗ, ಅಧಿಕಾರ, ಅಂತಸ್ತು ಮತ್ತು ಹಣ ಗಳಿಸಿ ಕೊಡಬಹುದು ಆದರೆ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುವುದಿಲ್ಲ ಹೀಗಾಗಿ ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯನ್ನರಿತು ಸಮಾಜದೊಡನೆ ನೇರ ಸಂಪರ್ಕ ಸಾಧಿಸಿ ಅಲ್ಲಿನ ಅನುಭವ ಮತ್ತು ಪರಿಶ್ರಮದಿಂದ ತಮ್ಮ ಬಾಳನ್ನು ರೂಪಿಸಿಕೊಂಡು ಶಾಂತಿ, ಅಹಿಂಸೆ ಮತ್ತು ಪರಸ್ಪರ ಪ್ರೀತಿಯಿಂದ ಬದುಕುವುದನ್ನು ಇಂತಹ ಶಿಬಿರಗಳಲ್ಲಿ ಭಾಗಿಯಾಗುವ ಮೂಲಕ ಕಲಿಯಬಹುದಾಗಿದೆ ಎಂದರು.
ಸಮಾರಂಭದಲ್ಲಿ ಉಪನ್ಯಾಸಕರಾದ ಶ್ರೀನಿವಾಸ್ ಎಚ್, ಬುಡೇನ್ ಸಾಬ್, ಚಂದ್ರಶೇಖರಪ್ಪ,ಕಲ್ಲಪ್ಪ ಸಿ, ನಾಗರಾಜು ಎ, ಬಸವರಾಜ ಎಸ್‍ಡಿ, ರಾಜಭಕ್ಷಿ,ರಂಗಸ್ವಾಮಿ, ಶಿವಕುಮಾರ್, ಮಂಜುನಾಥ,ಶಿಬಿರಾರ್ಥಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜ್, ಗ್ರಾಮಸ್ಥರು,ಪಂಚಾಯಿತಿ ಸದಸ್ಯರು ಮತ್ತಿತರರು ಭಾಗಿಯಾಗಿದ್ದರು
Views: 75