ಇಂದಿನಿಂದ ಖೋ ಖೋ ವಿಶ್ವಕಪ್: ಚೊಚ್ಚಲ ಆವೃತ್ತಿಯ ಟೂರ್ನಿಗೆ ನವದೆಹಲಿ ಆತಿಥ್ಯ

ನವದೆಹಲಿಯಲ್ಲಿ ಬಹುನಿರೀಕ್ಷಿತ ಖೋ ಖೋ ವಿಶ್ವಕಪ್‌ ಆರಂಭವಾಗಲಿದೆ. 20 ಪುರುಷರ ಮತ್ತು 19 ಮಹಿಳಾ ತಂಡಗಳು ಭಾಗವಹಿಸಲಿದ್ದು, ಭಾರತ ತಂಡಗಳು ಪದಕದ ನಿರೀಕ್ಷೆಯಲ್ಲಿದೆ. ಜನವರಿ 19 ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ 23 ದೇಶಗಳು ಸ್ಪರ್ಧಿಸಲಿವೆ.

ನವದೆಹಲಿ: ಬಹುನಿರೀಕ್ಷಿತ ಚೊಚ್ಚಲ ಆವೃತ್ತಿಯ ಖೋ ಖೋ ವಿಶ್ವಕಪ್‌ಗೆ ಕ್ಷಣಗಣನೆ ಆರಂಭವಾಗಿದೆ. ಸೋಮವಾರದಿಂದ ನವದೆಹಲಿಯಲ್ಲಿ ಭಾರತ ಸೇರಿ ಜಾಗತಿಕ ಮಟ್ಟದ ಹಲವು ತಂಡಗಳ ನಡುವೆ ವಿಶ್ವಕಪ್ ಗಾಗಿ ಸೆಣಸಾಟ ಶುರುವಾಗಲಿದೆ. ಜ.19ರ ವರೆಗೂ ಟೂರ್ನಿ ನಡೆಯಲಿದ್ದು, ಕ್ರೀಡಾ ಪ್ರೇಮಿಗಳ ಕಣ್ಣು ಈಗ ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣದ ಕ್ರೀಡಾಂಗಣದತ್ತ ನೆಟ್ಟಿದೆ.

ಟೂರ್ನಿಯಲ್ಲಿ 20 ಪುರುಷ, 19 ಮಹಿಳಾ ತಂಡಗಳು ಪಾಲ್ಗೊಳ್ಳಲಿವೆ. ವೀಸಾ ಸಿಗದ ಕಾರಣ ಪಾಕಿಸ್ತಾನದ ತಂಡಗಳು ಆಡುತ್ತಿಲ್ಲ. ಇಂಗ್ಲೆಂಡ್, ಬಾಂಗ್ಲಾದೇಶ, ನೇಪಾಳ, ದಕ್ಷಿಣ ಆಫ್ರಿಕಾ, ಅರ್ಜೆಂಟೀನಾ, ಅಮೆರಿಕ, ಮಲೇಷ್ಯಾ ಸೇರಿದಂತೆ ಒಟ್ಟು 23 ದೇಶಗಳು ಟೂರ್ನಿಯಲ್ಲಿ ಭಾಗವಹಿಸಲಿವೆ.

ಆತಿಥೇಯ ಭಾರತದ ಪುರುಷರ ತಂಡ ‘ಎ’ ಗುಂಪಿನಲ್ಲಿ ನೇಪಾಳ, ಪೆರು, ಬ್ರೆಜಿಲ್, ಭೂತಾನ್ ಜೊತೆ ಸ್ಥಾನ ಗಿಟ್ಟಿಸಿಕೊಂಡಿದ್ದು, ಸೋಮವಾರ ನೇಪಾಳ ವಿರುದ್ಧ ಆಡುವ ಮೂಲಕ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದೆ. ಮಹಿಳಾ ತಂಡ ಇರಾನ್, ಮಲೇಷ್ಯಾ, ದಕ್ಷಿಣ ಕೊರಿಯಾ ಜೊತೆ ‘W’ ಗುಂಪಿನಲ್ಲಿದೆ. ಬುಧವಾರ ದಕ್ಷಿಣ ಕೊರಿಯಾ ವಿರುದ್ಧ ಮೊದಲ ಪಂದ್ಯವಾಡಲಿದೆ. ಟೂರ್ನಿಯ ಕ್ವಾರ್ಟರ್ ಫೈನಲ್ ಜ.17ರಂದು ನಿಗದಿಯಾಗಿದ್ದು, ಜ.18ಕ್ಕೆ ಸೆಮಿಫೈನಲ್ ಹಾಗೂ 19ರಂದು ಫೈನಲ್ ಪಂದ್ಯಗಳು ನಡೆಯಲಿವೆ.

ಟೂರ್ನಿ ಮಾದರಿ ಹೇಗೆ?

ಪುರುಷ, ಮಹಿಳಾ ವಿಭಾಗದ ತಂಡಗಳನ್ನು 4 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಮಹಿಳೆಯರ ‘ಎ’ ಗುಂಪು(4 ತಂಡ) ಹೊರತುಪಡಿಸಿ ಇತರೆಲ್ಲಾ ಗುಂಪುಗಳಲ್ಲಿ ತಲಾ 5 ತಂಡಗಳಿವೆ. ಪ್ರತಿ ತಂಡಗಳು ಗುಂಪಿನಲ್ಲಿ ರೌಂಡ್ ರಾಬಿನ್ ಮಾದರಿಯಲ್ಲಿ ಒಂದು ಬಾರಿ ಪರಸ್ಪರ ಸೆಣಸಾಡಲಿವೆ. ಗುಂಪು ಹಂತದ ಮುಕ್ತಾಯಕ್ಕೆ ಅಗ್ರ -2 ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ.

ಹೇಗೆ ಆಡ್ತಾರೆ ಖೋ ಖೋ?

ಪ್ರತಿ ತಂಡದಲ್ಲಿ 9 ಆಟಗಾರರು ಇರುತ್ತಾರೆ. ತಂಡಕ್ಕೆ ಪಂದ್ಯವೊಂದರಲ್ಲಿ ತಲಾ 9 ನಿಮಿಷಗಳ 2 ಇನ್ನಿಂಗ್ಸ್ ನಿಗದಿಪಡಿಸಲಾಗುತ್ತದೆ. ಒಂದು ತಂಡ ಡಿಫೆಂಡಿಂಗ್, ಮತ್ತೊಂದು ತಂಡ ಚೇಸ್ ಮಾಡುತ್ತದೆ. ಅಂಕಣಕ್ಕೆ ಆಗಮಿಸುವ ಡಿಫೆಂಡಿಂಗ್ ತಂಡದ ಮೂವರು ಆಟಗಾರರನ್ನು ಚೇಸಿಂಗ್ ತಂಡದ ಒಂಬತ್ತು ಮಂದಿ ಬೆನ್ನಟ್ಟಿ ಮುಟ್ಟಬೇಕು. ಇದರಲ್ಲಿ 8 ಮಂದಿ ಕುಳಿತಿದ್ದರೆ ಇನ್ನೊಬ್ಬ ಎದುರಾಳಿ ತಂಡದ ಡಿಫೆಂಡರ್‌ಗಳನ್ನು ಬೆನ್ನಟ್ಟುತ್ತಾನೆ. ಮೊದಲ ಇನ್ನಿಂಗ್ಸ್ ಮುಕ್ತಾಯದ ಬಳಿಕ ಡಿಫೆಂಡಿಂಗ್ ತಂಡ ಚೇಸ್ ಮಾಡಬೇಕು. ಪಂದ್ಯದ ಕೊನೆಗೆ ಗರಿಷ್ಠ ಅಂಕ ಗಳಿಸಿರುವ ತಂಡವನ್ನು ವಿಜೇತ ಎಂದು ಘೋಷಿಸಲಾಗುತ್ತದೆ.

ಖೋ ಖೋ ವಿಶ್ವಕಪ್ ಪಂದ್ಯಗಳ ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಡಿಡಿ ಸ್ಪೋರ್ಟ್ಸ್, ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ 

Source : https://kannada.asianetnews.com/amp/sports/countdown-begins-for-inaugural-kho-kho-world-cup-tournament-kvn-sq0g7g

Leave a Reply

Your email address will not be published. Required fields are marked *