
ವೆಲ್ಲಿಂಗ್ಟನ್: ಈ ಕ್ರಿಕೆಟ್ ಆಟವೇ ಹಾಗೆ, ಪಂದ್ಯದ ಅಂತಿಮ ಎಸೆತ ಬೋಲ್ ಮಾಡುವವರೆಗೆ ಯಾವ ತಂಡ ಗೆಲ್ಲುತ್ತದೆ ಅಂತ ಹೇಳಲಾಗದು. ಹಾಗಾಗೇ ಅದನ್ನು ಅಮೋಘ ಅನಿಶ್ಚತತೆಗಳ ಆಟ (game of glorious uncertainties) ಎಂದು ಕರೆಯುತ್ತಾರೆ. ಇಂದು ಬೆಳಗ್ಗೆ ಇದನ್ನು ಪ್ರೂವ್ ಮಾಡುವ ಟೆಸ್ಟ್ ಪಂದ್ಯವೊಂದು ಸಂಪನ್ನಗೊಂಡಿದೆ. ನ್ಯೂಜಿಲೆಂಡ್ (New Zealand) ಪ್ರವಾಸದಲ್ಲಿರುವ ಬೆನ್ ಸ್ಟೋಕ್ಸ್ ನಾಯಕತ್ವದ ಇಂಗ್ಲೆಂಡ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಅತಿಥೇಯ ತಂಡಕ್ಕೆ ಕೇವಲ ಒಂದು ರನ್ ಅಂತರದಿಂದ ಸೋತಿದೆ! ಕೇನ್ ವಿಲಿಯಮ್ಸನ್ (Kane Williamson) ನಾಯಕನಾಗಿರುವ ಕಿವೀಸ್ ತಂಡಕ್ಕೆ ಈ ಗೆಲುವು ಅವಿಸ್ಮರಣೀಯ ಜೊತೆಗೆ ದಾಖಲೆಯೂ ಹೌದು. ದಾಖಲೆ ಏನೆಂದರೆ, ಫಾಲೋ ಆನ್ ಆಗಿಯೂ ಅದು ಪಂದ್ಯವನ್ನು ಗೆದ್ದಿದೆ. ಒಂದೂವರೆ ಶತಮಾನಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ನಾಲ್ಕು ಬಾರಿ ಫಾಲೋ ಆನ್ ಆದ ತಂಡವೊಂದು ಅಂತಿಮವಾಗಿ ಗೆಲುವಿನ ಕೇಕೆ ಹಾಕಿದೆ. ಕ್ರಿಕೆಟ್ ಜನಕರೆಂದು ಕರೆಸಿಕೊಳ್ಳುವ ಆಂಗ್ಲರು ಎರಡು ಬಾರಿ ಈ ಸಾಧನೆ ಮಾಡಿದರೆ (1894 ಮತ್ತು 1981-ಎರಡೂ ಬಾರಿ ಆಸ್ಟ್ರೇಲಿಯ ವಿರುದ್ಧ) ಭಾರತ ಒಮ್ಮೆ (ಆಸ್ಟ್ರೇಲಿಯ ವಿರುದ್ಧ-2001) ಮಾಡಿದೆ ಮತ್ತು ಇವತ್ತು ನ್ಯೂಜಿಲೆಂಡ್ ಈ ಪಟ್ಟಿಗೆ ಸೇರಿದೆ.
ವ್ಯಾಗ್ನರ್ ಹೀರೋ
ಮೊದಲು ನಾವು ಮಂಗಳವಾರ ಕಿವೀಸ್ ಟೀಮ್ ದಾಖಲಿಸಿದ ಐತಿಹಾಸಿಕ ಟೆಸ್ಟ್ ಬಗ್ಗೆ ಚರ್ಚೆ ಮಾಡೋಣ ಅಮೇಲೆ ಭಾರತದ ಗೆಲುವನ್ನು ಮೆಲಕು ಹಾಕೋಣ. ವೆಲ್ಲಿಂಗ್ಟನ್ ಬೇಸಿನ್ ರಿವರ್ಸ್ ಮೈದಾನದಲ್ಲಿ ಇಂದು ರೋಚಕವಾಗಿ ಕೊನೆಗೊಂಡ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ತಂಡಕ್ಕೆ ಗೆಲ್ಲಲು 258 ರನ್ ಗಳ ಅವಶ್ಯಕತೆಯಿತ್ತು. ಆದರೆ ಅದು ಗೆಲುವಿನ ಅಂಚಿಗೆ ಬಂದು ಮುಗ್ಗುರಿಸಿತು. ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ ನಲ್ಲಿ ಜೇಮ್ಸ್ ಆಂಡರ್ಸನ್ ಅವರ ಕೊನೆಯ ವಿಕೆಟ್ ಪಡೆದ ನೀಲ್ ವ್ಯಾಗ್ನರ್ ಒಟ್ಟು 4 ಬಲಿ ಪಡೆದು ಯಶಸ್ವೀ ಬೌಲರ್ ಎನಿಸಿಕೊಂಡರಲ್ಲದೆ ನೆರೆದಿದ್ದ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಅಂಡರ್ಸನ್ ನೀಡಿದ ಕ್ಯಾಚನ್ನು ವಿಕೆಟ್ ಕೀಪರ್ ಟಾಮ್ ಬ್ಲುಂಡೆಲ್ ಅದ್ಭುತವಾಗಿ ಡೈವ್ ಮಾಡಿ ಹಿಡಿದರು.

ಸಂಭ್ರಮಿಸುತ್ತಿರುವ ಕಿವಿ ಆಟಗಾರರು
ಇದನ್ನೂ ಓದಿ: World Record: ಕ್ರಿಕೆಟ್ ಇತಿಹಾಸದಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ ಮೆಗ್ ಲ್ಯಾನಿಂಗ್
‘ಇದೊಂದು ನಂಬಲಸದಳ ಸಾಧನೆ. ಟೀಮಿನ ಪ್ರತಿಯೊಬ್ಬ ಸದಸ್ಯ ಅಂತಿಮ ಕ್ಷಣದವರೆಗೆ ಹೋರಾಡಿದ, ಎಲ್ಲರೂ ಅಭಿನಂದನಾರ್ಹರು’ ಎಂದು ಪಂದ್ಯದ ಬಳಿಕ ವ್ಯಾಗ್ನರ್ ಹೇಳಿದರು. ತಮ್ಮ ಎದುರಾಳಿಗಳ ಮೇಲೆ ಫಾಲೋ ಆನ್ ಹೇರಿದ ಮೇಲೆ ಇಂಗ್ಲೆಂಡ್ ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯವೊಂದನ್ನು ಸೋತಿದೆ.
ವಿಲಿಯಮ್ಸನ್ ಅಮೋಘ ಬ್ಯಾಟಿಂಗ್
ವೆಲಿಂಗ್ಟನ್ ಟೆಸ್ಟ್ ನ ಕೊನೆಯ ಎರಡು ದಿನಗಳು ಅತ್ಯಂತ ರೋಚಕವಾಗಿದ್ದವು. ಮೊದಲ ಇನ್ನಿಂಗ್ಸ್ ನಲ್ಲಿ 8 ವಿಕೆಟ್ ಗೆ 435 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡ ಪ್ರವಾಸಿ ಆಂಗ್ಲರು ಕಿವಿಸ್ ತಂಡವನ್ನು ಕೇವಲ 209 ರನ್ ಮೊತ್ತಕ್ಕೆ ಆಲೌಟ್ ಮಾಡಿ ಫಾಲೋ ಆನ್ ಹೇರಿತು.
ಪ್ರಸ್ತುತವಾಗಿ ವಿಶ್ವದ ಶ್ರೇಷ್ಠ ಬ್ಯಾಟರ್ ಗಳಲ್ಲಿ ಒಬ್ಬರಾಗಿರುವ ಕಿವಿ ನಾಯಕ ವಿಲಿಯಮ್ಸನ್ ತಮ್ಮ ತಂಡದ ಎರಡನೇ ಇನ್ನಿಂಗ್ಸ್ ನಲ್ಲಿ ಬಾರಿಸಿದ ಆಕರ್ಷಕ ಮತ್ತು ಅತ್ಯಂತ ಜವಾಬ್ದಾರಿಯುತ 132 ರನ್ ಗಳ ಕೊಡುಗೆಯಿಂದ ನ್ಯೂಜಿಲೆಂಡ್ 483 ರನ್ ಮೊತ್ತ ಪೇರಿಸಲು ಮತ್ತು ಇಂಗ್ಲೆಂಡ್ ಗೆ ಗೆಲ್ಲಲು 258 ರನ್ ಗಳ ಲಕ್ಷ್ಯ ನೀಡಲು ಸಾಧ್ಯವಾಯಿತು.
ಟೆಸ್ಟ್ ಪಂದ್ಯ ಎಲ್ಲೇ ನಡೆಯಲಿ, ನಾಲ್ಕನೇ ಇನ್ನಿಂಗ್ಸ್ ನಲ್ಲಿ ಮತ್ತು ಪಂದ್ಯದ ಕೊನೆಯ ದಿನ 200 ಕ್ಕಿಂತ ಹೆಚ್ಚು ರನ್ ಗಳಿಸಿ ಗೆಲುವು ಸಾಧಿಸುವುದು ಬಹಳ ಕಷ್ಟ ಮಾರಾಯ್ರೇ. 4 ನೇ ದಿನಾದಾಟ ಕೊನೆಗೊಂಡಾಗ ಇಂಗ್ಲೆಂಡ್ 1 ವಿಕೆಟ್ ಕಳೆದುಕೊಂಡು 48 ರನ್ ಗಳಿಸಿತ್ತು ಮತ್ತು ಕೊನೆಯ ದಿನ ಗೆಲುವಿಗೆ ಅದಕ್ಕೆ ಇನ್ನೂ 210 ರನ್ ಅವಶ್ಯಕತೆಯಿತ್ತು.
ತಿಣುಕಾಡಿದ ಆಂಗ್ಲರು
ಆದರೆ, ಇಂದು ಆಂದರೆ ಮಂಗಳವಾರ ಬೆಳಗ್ಗೆ ಅತಿಥೇಯ ತಂಡದ ಬೌಲರ್ ಗಳು ಇಂಗ್ಲೆಂಡ್ ಬ್ಯಾಟರ್ ಗಳಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿದರು. ದಿನದಾಟದ ಮೊದಲ ಸೆಷನ್ ನ ಮೊದಲ ಗಂಟೆಯ ಆಟದಲ್ಲಿ ಅವರು ಕೇವಲ 27 ರನ್ ನೀಡಿ 4 ವಿಕೆಟ್ ಕಬಳಿಸಿದರು. ಆದರೆ ಅನುಭವಿ ಮತ್ತು ವಿಶ್ವದರ್ಜೆಯ ಬ್ಯಾಟರ್ ಜೋ ರೂಟ್ ನಾಯಕ ಸ್ಟೋಕ್ಸ್ ಜೊತೆಗೂಡಿ ಪರಿಸ್ಥಿತಿಯನ್ನು ನಿಭಾಯಿಸಿ ಲಂಚ್ ವಿರಾಮದ ವೇಳೆಗೆ ಸ್ಕೋರನ್ನು 5/168 ತಲುಪಿಸಿದರು.
ಆದರೆ ಎರಡನೇ ಸೆಷನ್ ಆಟ ಆರಂಭವಾದ ಸ್ವಲ್ಪ ಹೊತ್ತಿನಲ್ಲೇ ಸ್ಟೋಕ್ಸ್ ಔಟಾದರು. ಅವರ ನಿರ್ಗಮನದಿಂದ ವಿಚಲಿತರಾದಂತೆ ಕಂಡ ರೂಟ್ ಶತಕದಂಚಿನಲ್ಲಿದ್ದಾಗ (95) ಔಟಾಗಿ ಪೆವಿಲಿಯನ್ ಗೆ ಮರಳಿದರು. ಆಗ ಪ್ರವಾಸಿ ತಂಡದ ಗೆಲುವಿಗೆ ಇನ್ನೂ 57 ರನ್ ಬೇಕಿದ್ದವು. ಇಂಗ್ಲೆಂಡ್ ವಿಕೆಟ್ ಕೀಪರ್ ಬೆನ್ ಫೋಕ್ಸ್ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿ 35 ರನ್ ಗಳಿಸಿ ಔಟಾದರು. ಅವರು ನಿರ್ಗಮಿಸಿದಾಗ ಅಂಡರ್ಸನ್ ಮತ್ತು ಜ್ಯಾಕ್ ಲೀಚ್ ಅವರ ಕೊನೆಯ ಜೋಡಿ ಕ್ರೀಸ್ ಮೇಲಿತ್ತು ಮತ್ತು ಇಂಗ್ಲೆಂಡ್ ಗೆ ಗೆಲ್ಲಲು 7 ರನ್ ಬೇಕಿದ್ದವು.
ಆ ಹಂತದಲ್ಲೇ ವೇಗವಾಗಿ ಬರುತ್ತಿದ್ದ ಚೆಂಡಿನೆಡೆ ಬ್ಯಾಟ್ ಬೀಸಿದ ಆಂಸಡರ್ಸನ್ ಬೌಂಡರಿ ಗಿಟ್ಟಿಸಿದರು. ಗೆಲುವಿನ ಅಂತರ 2 ರನ್ ಗೆ ಇಳಿಯಿತು. ಅದರೆ ವ್ಯಾಗ್ನರ್ ಮತ್ತು ಬ್ಲುಂಡೆಲ್ ಜೋಡಿಯು ಅಂತಿಮ ನಗೆ ಬೀರಿತು. ವಿಲಿಯಮ್ಸನ್ ತಂಡ ಒಂದು ರನ್ ಅಂತರದಿಂದ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿತಲ್ಲದೆ ಸರಣಿಯನ್ನು 1-1 ರಿಂದ ಸಮ ಮಾಡಿಕೊಂಡಿತು.
ಭಾರತದ ಐತಿಹಾಸಿಕ ಜಯ ಮಾರ್ಚ್ 11-15, 2001
ಭಾರತ ಮತ್ತು ಆಸ್ಟ್ರೇಲಿಯ ನಡುವೆ ಟೆಸ್ಟ್ ಸರಣಿಗಳಿ ಌಶಸ್ ಕ್ಕಿಂತ ಹೆಚ್ಚು ಮಹತ್ವ ಮತ್ತು ಜನಪ್ರಿಯತೆ ಪಡೆದಿಕೊಳ್ಳಲಾರಂಭಿಸಿದ್ದು ಪ್ರಾಯಶ: ಕೊಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಈ ಟೆಸ್ಟ್ ಪಂದ್ಯದಿಂದ ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು. ಅಸಲಿಗೆ ಇದನ್ನು ವಿವಿಎಸ್ ಲಕ್ಷ್ಮಣ್ ಟೆಸ್ಟ್ ಅಂತ ಕರೀತಾರೆ. ಅವತ್ತು ಕಾಮೆಂಟರಿ ಬಾಕ್ಸ್ ನಲ್ಲಿದ್ದ ಆಸ್ಟ್ರೇಲಿಯದ ಗ್ರೇಟ್ ಬ್ಯಾಟರ್ ಗಳಲ್ಲಿ ಒಬ್ಬರಾಗಿರುವ ಇಯಾನ್ ಚಾಪೆಲ್ ಲಕ್ಷ್ಮಣ್ ರನ್ನು ‘ವೆರಿ ವೆರಿ ಸ್ಪೆಶಲ್ ಲಕ್ಷ್ಮಣ್’ ಎಂದು ಕರೆದರು.
ಆಸ್ಸೀಸ್ ದೊಡ್ಡ ಮೊತ್ತ!
ಸ್ಟೀವ್ ವಾ ನಾಯಕತ್ವದ ಆಸ್ಟ್ರೇಲಿಯ ಚೆನೈನಲ್ಲಿ ನಡೆದ ಮೊದಲ ಟೆಸ್ಟ್ ಸುಲಭವಾಗಿ ಗೆದ್ದು ಬೀಗಲಾರಂಭಿಸಿತ್ತು. ಈ ಸರಣಿಯನ್ನು ಅದು ‘ಫೈನಲ್ ಫ್ರಂಟಿಯರ್’ ಅಂತ ಘೋಷಣೆ ಮಾಡಿಕೊಂಡಿತ್ತು. ವಾ ನಾಯಕತ್ವದಲ್ಲಿ ಆಸ್ಟ್ರೇಲಿಯ ಎಲ್ಲ ರಾಷ್ಟ್ರಗಳನ್ನು ಅವುಗಳ ನೆಲದ ಮೇಲೆಯೇ ಮಣಿಸಿತ್ತು ಆದರೆ ಭಾರತದಲ್ಲಿ ಅದು ಸಾಧ್ಯವಾಗಿರಲಿಲ್ಲ. ಭಾರತೀಯ ಟೆಸ್ಟ್ ತಂಡದ ನಾಯಕತ್ವಕ್ಕೆ ಹೊಸ ಬಾಷ್ಯ ಬರೆದ ಸೌರವ್ ಗಂಗೂಲಿ ಆಗಷ್ಟೇ ಸ್ಕಿಪ್ಪರ್ ಆಗಿದ್ದರು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪ್ರವಾಸಿ ತಂಡ ಸ್ಟೀವ್ ಅವರ ಶತಕ ಹಾಗೂ ಓಪನರ್ ಮೈಕೆಲ್ ಸ್ಲೇಟರ್ ಗಳಿಸಿದ 97 ರನ್ ಗಳ ನೆರವಿನಿಂದ 445 ರನ್ ಗಳ ದೊಡ್ಡ ಮೊತ್ತ ಕಲೆ ಹಾಕಿತು.
ಅದಕ್ಕೆ ಉತ್ತರವಾಗಿ ಭಾರತ ಗ್ಲೆನ್ ಮ್ಯಾಕ್ ಗ್ರಾ ಅವರ ಮಾರಕ ದಾಳಿಗೆ ತತ್ತರಿಸಿ ಕೇವಲ 171 ರನ್ ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಕೇವಲ ಲಕ್ಷ್ಮಣ್ ಮಾತ್ರ ಬ್ಯಾಟಿಂಗ್ ನಲ್ಲಿ ಮಿಂಚಿ 59 ರನ್ ಗಳಿಸಿದರು. ಮ್ಯಾಕ್ ಗ್ರಾ 18 ರನ್ ನೀಡಿ 4 ವಿಕೆಟ್ ಪಡೆದರು. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ಗಂಗೂಲಿ ಬ್ಯಾಟಿಂಗ್ ನಲ್ಲಿ ಫೇಲ್ ಆದರು.
ಭಾರತದ ಮೇಲೆ ಫಾಲೋ ಆನ್ ಹೇರಿದ ಸ್ಟೀವ್ ವಾ
274 ರನ್ ಗಳ ಬೃಹತ್ ಮುನ್ನಡೆ ಪಡೆದ ವಾ ಭಾರತದ ಮೇಲೆ ಫಾಲೋ ಆನ್ ಹೇರಿದರು. ಎರಡನೇ ಇನ್ನಿಂಗ್ಸ್ ನಲ್ಲೂ ಭಾರತದ ಟಾಪ್ ಆರ್ಡರ್ ನಿಂದ ಹೇಳಿಕೊಳ್ಳುವಂಥ ಬ್ಯಾಟಿಂಗ್ ಪ್ರದರ್ಶನ ಬರಲಿಲ್ಲ. 3ನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಬಂದ ಲಕ್ಷ್ಮಣ್ ಮಾತ್ರ ಗಟ್ಟಿಯಾಗಿ ನಿಂತಿದ್ದರು. ಒಂದು ಹಂತದಲ್ಲಿ ಭಾರತದ ಸ್ಕೋರ್ 3/115 ಆಗಿತ್ತು. ಆಗ ಹೈದರಾಬಾದ್ ನ ಆಕರ್ಷಕ ಬ್ಯಾಟರ್ ನನ್ನು ಜೊತೆಗೂಡಿದ ಲೋಕಲ್ ಬಾಯ್ ಗಂಗೂಲಿ (48) 117 ರನ್ ಗಳ ಜೊತೆಯಾಟದಲ್ಲಿ ಪಾಲ್ಗೊಂಡರು.
ಲಕ್ಷ್ಮಣ್ ತಾಂಡವ ನೃತ್ಯ
ಗಂಗೂಲಿ ನಿರ್ಗಮನದ ಮೇಲೆ ಬೃಹತ್ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದಿದ್ದು ಐತಿಹಾಸಿಕ. ರಾಹುಲ್ ದ್ರಾವಿಡ್ ಸ್ಪರ್ಶ ಕಳೆದುಕೊಂಡಿದ್ದರು, ಅವರನ್ನು ಡ್ರಾಪ್ ಮಾಡಿ ಅತ ಕೂಗು ಎದ್ದಿತ್ತು. ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಳಗಿಳಿಸಿದ್ದು ದ್ರಾವಿಡ್ ಗೆ ಅಸಮಾಧಾನ ಮತ್ತು ಕೋಪ ತರಿಸಿತ್ತು. ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲೇಬೇಕಾದ ಒತ್ತಡದಲ್ಲಿದ್ದ ಅವರು ಅಂದು ಲಕ್ಷ್ಮಣ್ ಜೊತೆಗೂಡಿ ಪ್ರೇಕ್ಷಕರಿಗೆ ಬ್ಯಾಟಿಂಗ್ ರಸದೌತಣ ನೀಡಿದರು.
ಆದರೆ ಲೈಮ್ ಲೈಟ್ ಎಲ್ಲ ಲಕ್ಷ್ಮಣ್ ಮೇಲಿತ್ತು. ಅವರು ಮೈದಾನದಲ್ಲಿ ನಡೆಸಿದ ತಾಂಡವ ನೃತ್ಯ ಕಂಡು ಆಸ್ಸೀಗಳು ಗರಬಡಿದವರಂತಾದರು. 281 ರನ್ ಅವರ ಇನ್ನಿಂಗ್ಸ್ ವಿಸ್ಡನ್ ಕ್ರಿಕೆಟ್ ಬುಕ್ ನಲ್ಲಿ ಟೆಸ್ಟ್ ಕ್ರಿಕೆಟ್ ಇತಿಹಾಸ ಅತ್ಯಂತ ಶ್ರೇಷ್ಠ ಇನ್ನಿಂಗ್ ಗಳಲ್ಲೊಂದು ಅಂತ ದಾಖಲಾಗಿದೆ. ಲೆಜೆಂಡರಿ ಸ್ಪಿನ್ನರ್ ದಿವಂಗತ ಶೇನ್ ವಾರ್ನ್ ಅವರು ಲಕ್ಷ್ಮಣ್ ಎದುರು ಶಾಲಾ ಬಾಲಕನಂತೆ ಕಂಡರು! ತಮ್ಮ ಇನ್ನಿಂಗ್ಸ್ ನಲ್ಲಿ ವಿವಿಎಸ್ ಬಾರಿಸಿದ್ದು 44 ಬೌಂಡರಿಗಳು! ಅವರ ಬ್ಯಾಟ್ ನಿಂದ ಒಂದೇ ಒಂದು ತಪ್ಪು ಹೊಡೆತ ಅವತ್ತು ಬರಲಿಲ್ಲ. ಅವರ ಬ್ಯಾಟಿಂಗ್ ಶೈಲಿ ನೋಡುಗರಿಗೆ ಸುಂದರ ಕಾವ್ಯದ ಹಾಗೆ ಅನಿಸಿತ್ತು. ಹೊಡೆತಗಳೆಲ್ಲ ಮನಮೋಹಕ!
4ನೇ ದಿನ ಒಂದೇ ಒಂದು ವಿಕೆಟ್ ಬೀಳಲಿಲ್ಲ
ಅವರಿಗೆ ಅತ್ಯುತ್ತಮ ಬೆಂಬಲ ನೀಡಿದ ಕನ್ನಡಿಗ 180 ರನ್ ಗಳ ಅಮೋಘ ಇನ್ನಿಂಗ್ಸ್ ಆಡಿದರು. ಅವರ ನಡುವೆ 5 ನೇ ವಿಕೆಟ್ ಜೊತೆಯಾಟದಲ್ಲಿ ಬಂದಿದ್ದು 376 ರನ್! ದ್ರಾವಿಡ್ 20 ಬಾರಿ ಚೆಂಡನ್ನು ಬೌಂಡರಿಗಟ್ಟಿದ್ದರು. ಪಂದ್ಯದ 4 ನೇ ದಿನ ಅವರಿಬ್ಬರ ಬ್ಯಾಟಿಂಗ್ ವೈಖರಿ ಹೇಗಿತ್ತೆಂದರೆ, ಇಡೀ ದಿನ ಆಸ್ಸೀ ಬೌಲರ್ ಗಳಿಗೆ ಅವರನ್ನು ಬೇರ್ಪಡಿಸಲಾಗಲಿಲ್ಲ.
ಕೊನೆಯ ದಿನ ಭಾರತದ ಸ್ಕೋರ್ 657/7 ಆಗಿದ್ದಾಗ ಗಂಗೂಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಗೆಲ್ಲಲು 384 ರನ್ ಗಳಿಸಬೇಕಿದ್ದ ಪ್ರವಾಸಿ ತಂಡ ಹರ್ಭಜನ್ ಸಿಂಗ್ ಅವರ ಸ್ಪಿನ್ ದಾಳಿ ಎದುರು ತತ್ತರಿಸಿ 212 ರನ್ ಮೊತ್ತಕ್ಕೆ ಅಲೌಟ್ ಆಯಿತು. ಭಾರತಕ್ಕೆ 171 ರನ್ ಗಳ ಭರ್ಜರಿ ಗೆಲುವು. ಆಸ್ಸೀಗಳ ಮೊದಲ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ಪಡೆದಿದ್ದ ಭಜ್ಜೀ ಎರಡನೆ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಪಡೆದರು. ಬ್ಯಾಟಿಂಗ್ ನಲ್ಲಿ ಫೇಲಾಗಿದ್ದ ಸಚಿನ್ ಆಸ್ಟ್ರೇಲಿಯದ ಎರಡನೇ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ಪಡೆದರು.
ಫಾಲೋ ಅನ್ ಆಗಿ ಟೆಸ್ಟ್ ಪಂದ್ಯ ಗೆದ್ದ ಕೇವಲ ಎರಡನೇ ರಾಷ್ಟ್ರವೆನಿಸಿಕೊಂಡ ಭಾರತ 22 ವರ್ಷಗಳ ಹಿಂದೆ ಇತಿಹಾಸ ನಿರ್ಮಿಸಿದ್ದು ಹಾಗೆ!
ಮತ್ತಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ