ಪಿಂಕ್ ಬಾಲ್​ ಅಲ್ಲ… ಈ ಬಾರಿ ಭಾರತ vs ಆಸ್ಟ್ರೇಲಿಯಾ ನಡುವೆ ಪಿಂಕ್ ಟೆಸ್ಟ್.

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5ನೇ ಟೆಸ್ಟ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯಲಿರುವ ಈ ಪಂದ್ಯವು ಜನವರಿ 3 ರಿಂದ ಶುರುವಾಗಲಿದೆ. ವಿಶೇಷ ಎಂದರೆ ಈ ಪಂದ್ಯವು ಪಿಂಕ್ ಟೆಸ್ಟ್. ಆದರೆ ಇದು ಪಿಂಕ್ ಬಾಲ್ ಟೆಸ್ಟ್​ ಅಲ್ಲ. ಅಂದರೆ ಪಿಂಕ್ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ಆಟಗಾರರು ಪಿಂಕ್ ಬ್ಯಾಗಿ ಕ್ಯಾಪ್​ನೊಂದಿಗೆ ಕಣಕ್ಕಿಳಿಯಲಿದ್ದಾರೆ.

ಪಿಂಕ್ ಬಾಲ್ ಟೆಸ್ಟ್ ಎಂದರೆ ಡೇ-ನೈಟ್ ಟೆಸ್ಟ್ ಪಂದ್ಯ. ಹೊನಲು ಬೆಳಕಿನಲ್ಲಿ ಆಡಲಾಗುವ ಈ ಪಂದ್ಯದಲ್ಲಿ ಪಿಂಕ್ ಬಾಲ್ ಅನ್ನು ಬಳಸಲಾಗುತ್ತದೆ. ಹೀಗಾಗಿಯೇ ಡೇ-ನೈಟ್ ಟೆಸ್ಟ್ ಪಂದ್ಯವನ್ನು ಪಿಂಕ್ ಬಾಲ್ ಟೆಸ್ಟ್ ಎಂದು ಕರೆಯಲಾಗುತ್ತಿದೆ.

ಪಿಂಕ್ ಟೆಸ್ಟ್ ಎಂದರೆ, ಪ್ರತಿ ವರ್ಷ ಸಿಡ್ನಿಯಲ್ಲಿ ಆಡಲಾಗುವ ಮೊದಲ ಟೆಸ್ಟ್ ಪಂದ್ಯವನ್ನು ಪಿಂಕ್ ಟೆಸ್ಟ್ ಎಂದು ಕರೆಯಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಈ ಪಂದ್ಯದಲ್ಲಿ ಆಟಗಾರರು ಪಿಂಕ್ ಕ್ಯಾಪ್ ಧರಿಸುವುದು. ಇದರ ಉದ್ದೇಶ ಸ್ತನ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸುವುದು ಹಾಗೂ ಅದರ ವಿರುದ್ಧ ಹೋರಾಡುತ್ತಿರುವವರಿಗೆ ಧೈರ್ಯ ತುಂಬುವುದು.

ಇಂತಹದೊಂದು ಅಭಿಯಾನಕ್ಕೆ ನಾಂದಿಯಾಡಿದ್ದು ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಗ್ಲೆನ್ ಮೆಕ್​ಗ್ರಾಥ್ ಎಂಬುದು ವಿಶೇಷ. ಮೆಕ್​ಗ್ರಾಥ್ ಅವರ ಪತ್ನಿ ಜೇನ್ ಮೆಕ್‌ಗ್ರಾತ್ ಅವರು ಸ್ತನ ಕ್ಯಾನ್ಸರ್​ನಿಂದ ಮೃತಪಟ್ಟಿದ್ದರು. ಆ ಬಳಿಕ ಮೆಕ್‌ಗ್ರಾತ್ ಫೌಂಡೇಶನ್ ಸ್ಥಾಪಿಸಿದ ಗ್ಲೆನ್ ಮೆಕ್​ಗ್ರಾಥ್ ಸ್ತನ ಕ್ಯಾನ್ಸರ್ ಜಾಗೃತಿ ಹಾಗೂ ಈ ಕ್ಯಾನ್ಸರ್‌ನಿಂದ ಬಳಲುತ್ತಿರುವವರ ಚಿಕಿತ್ಸೆಗೆ ನೆರವು ನೀಡುತ್ತಾ ಬರುತ್ತಿದ್ದಾರೆ.

ಈ ಅಭಿಯಾನಕ್ಕೆ ಸಿಡ್ನಿ ಕ್ರಿಕೆಟ್ ಕೂಡ ಸಾಥ್ ನೀಡಿದ್ದು, ಈ ಮೂಲಕ ಪ್ರತಿ ವರ್ಷ ಪಿಂಕ್ ಟೆಸ್ಟ್ ಪಂದ್ಯವನ್ನು ಆಯೋಜಿಸುತ್ತಿದೆ. ಈ ಪಂದ್ಯಕ್ಕಾಗಿ ಸಿಡ್ನಿ ಸ್ಟೇಡಿಯಂನ ಗ್ಯಾಲರಿಗಳನ್ನು ಪಿಂಕ್ ಬಣ್ಣಗಳಿಂದ ಅಲಂಕೃತಗೊಳಿಸಲಾಗುತ್ತದೆ. ಹಾಗೆಯೇ ಸಿಡ್ನಿ ಟೆಸ್ಟ್ ಪಂದ್ಯದ ಮೂರನೇ ದಿನದಂದು ಲೇಡೀಸ್ ಸ್ಟ್ಯಾಂಡ್ ಅನ್ನು ತಾತ್ಕಾಲಿಕವಾಗಿ ಜೇನ್ ಮೆಕ್‌ಗ್ರಾತ್ ಸ್ಟ್ಯಾಂಡ್ ಎಂದು ಮರುನಾಮಕರಣ ಮಾಡಲಾಗುತ್ತದೆ.

ಇನ್ನು ಈ ಪಂದ್ಯದಲ್ಲಿ ಆಟಗಾರರು ಧರಿಸಿದ ಪಿಂಕ್ ಕ್ಯಾಪ್​ ಅನ್ನು ಕೂಡ ಹರಾಜಾಗಿಡಲಾಗುತ್ತದೆ. ಇದರಿಂದ ಬಂದ ಹಣವನ್ನು ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಬಳಸಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಈ ಪಂದ್ಯವನ್ನು ಪಿಂಕ್ ಬಾಲ್​ನಲ್ಲಿ ಆಡಲಾಗುವುದಿಲ್ಲ. ಬದಲಾಗಿ ಟೆಸ್ಟ್​​ ಕ್ರಿಕೆಟ್​​ನಲ್ಲಿ ಸಾಮಾನ್ಯವಾಗಿ ಬಳಸಲಾಗುವ ರೆಡ್ ಬಾಲ್​​ನಲ್ಲೇ ಈ ಪಂದ್ಯವನ್ನು ಆಯೋಜಿಸಲಾಗುತ್ತದೆ.

Source : https://tv9kannada.com/photo-gallery/cricket-photos/ind-vs-aus-india-vs-australia-play-pink-test-in-sydney-cricket-news-in-kannada-zp-957993-2.html

Leave a Reply

Your email address will not be published. Required fields are marked *