ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ ನಾಲ್ವರು ಚಾರಣಿಗರು ಉತ್ತರಾಖಂಡ್ನ ಸಹಸ್ರತಾಲ್‌ನಲ್ಲಿ ಸಾವನ್ನಪ್ಪಿದ್ದಾರೆ. 23 ಚಾರಣಿಗರ ಪೈಕಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಪಿಟಿಐಗೆ ತಿಳಿಸಿದ್ದಾರೆ. ಸದ್ಯ 11 ಚಾರಣಿಗರನ್ನು ರಕ್ಷಣೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಸಚಿವ ಕೃಷ್ಣ ಭೈರೇಗೌಡ ರಕ್ಷಣಾ ಸ್ಥಳಕ್ಕೆ ತೆರಳಿದ್ದಾರೆ.

ಬೆಂಗಳೂರು, ಜೂನ್ 05: ಉತ್ತರಾಖಂಡ್ನ (Uttarakhand) ಸಹಸ್ರತಾಲ್ಗೆ ಚಾರಣಕ್ಕೆ ತೆರಳಿದ್ದ 23 ಜನರ ಪೈಕಿ ಕರ್ನಾಟಕದ ನಾಲ್ವರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ (Karnataka) ನಾಲ್ವರು ಚಾರಣಿಗರು ಮೃತಪಟ್ಟಿರುವುದಾಗಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಪಿಟಿಐಗೆ ತಿಳಿಸಿದ್ದಾರೆ. ನಾಲ್ವರು ಗೈಡ್ಗಳು ಸೇರಿ 19 ಚಾರಣಿಗರು ಚಾರಣಕ್ಕೆ ತೆರಳಿದ್ದಾಗ ದುರಂತ ಸಂಭವಿಸಿದೆ. ಆದರೆ ದುರಂತದಲ್ಲಿ ಮೃತಪಟ್ಟವರ ಗುರುತು ಇನ್ನು ತಿಳಿದುಬಂದಿಲ್ಲ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರಾಗಿರುವ ಕಂದಾಯ ಸಚಿವ ಕೃಷ್ಣ ಭೈರೇಗೌಡ ಬೆಂಗಳೂರಿನಿಂದ ಡೆಹ್ರಾಡೂನ್ಗೆ ತೆರಳಿದ್ದಾರೆ.
ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದ್ದಾರೆ. ಉತ್ತರಾಖಂಡ್ ಸರ್ಕಾರದ ಜೊತೆ ಮಾತಾಡಿರುವ ಬಗ್ಗೆಯೂ ಮಾಹಿತಿ ನೀಡಿದ್ದು, ಖುದ್ದು ತೆರಳಿ ಕಾರ್ಯಾಚರಣೆ ನೋಡಿಕೊಳ್ಳಲು ಸಿಎಂ ಸೂಚನೆ ಮೇರೆಗೆ ಡೆಹ್ರಾಡೂನ್ಗೆ ತೆರಳಿದ್ದಾರೆ. ಇನ್ನು ಓರ್ವ ಚಾರಣಿಗರ ಜೊತೆ ಕೃಷ್ಣ ಭೈರೇಗೌಡ ದೂರವಾಣಿ ಮೂಲಕ ಮಾತನಾಡಿದ್ದಾರೆ.
ಕೆಲವು ಚಾರಣಿಗರು ಮೃತಪಟ್ಟಿರುವ ವರದಿ ಲಭ್ಯವಾಗಿದೆ ಎಂದು ಕಂದಾಯ ಇಲಾಖೆಯಿಂದ ಅಧಿಕೃತ ಮಾಹಿತಿ ನೀಡಿದೆ. ಅದನ್ನು ನಾವು ಸ್ಥಳೀಯ ಅಧಿಕಾರಿಗಳು ಮತ್ತು ಖಾಸಗಿ ಏಜೆನ್ಸಿಗಳೊಂದಿಗೆ ಮರುದೃಢೀಕರಿಸಲು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ.
ಮೃತ ಚಾರಣಿಗರ ಮೃತದೇಹಗಳನ್ನು ಹೊರತೆಗೆಯಲು ಎಲ್ಲಾ ಪ್ರಯತ್ನ ಮಾಡುವಂತೆ ಸಿಎಂ ನಮಗೆ ಸೂಚನೆ ನೀಡಿದ್ದಾರೆ. ನಾವು ಉತ್ತರಾಖಂಡ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು ಕೆಲಸ ನಿರ್ವಹಿಸಲಿದ್ದೇವೆ ಎಂದು ಮಾಹಿತಿ ನೀಡಲಾಗಿದೆ.
11 ಚಾರಣಿಗರ ರಕ್ಷಣೆ
ಚಾರಣಕ್ಕೆ ಹೋದ ತಂಡ ಅಪಾಯದಲ್ಲಿ ಸಿಲುಕಿರುವ ಬಗ್ಗೆ ನಿನ್ನೆ ರಾತ್ರಿ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಗೆ ಮಾಹಿತಿ ನೀಡಿದೆ. ರಕ್ಷಣಾ ಕಾರ್ಯಾಚರಣೆಗೆ ಉತ್ತರಾಖಂಡ್ ಸರ್ಕಾರ ಹಾಗೂ ಕೇಂದ್ರ ಗೃಹ ಇಲಾಖೆಯೊಂದಿಗೆ ಎಸ್ಡಿಆರ್ಎಫ್ ಸಂಪರ್ಕದಲ್ಲಿದೆ. ಚಾರಣಿಗರ ರಕ್ಷಣೆಗಾಗಿ ವಾಯುಪಡೆ ಹೆಲಿಕಾಪ್ಟರ್ ಉತ್ತರ ಕಾಶಿ ತಲುಪಿದೆ. ಸದ್ಯ ಸ್ಥಳೀಯವಾಗಿ ಲಭ್ಯವಾದ 4 ಹೆಲಿಕಾಪ್ಟರ್ ಬಳಸಿ 11 ಚಾರಣಿಗರನ್ನು ಏರ್ಲಿಫ್ಟ್ ಮಾಡಿದ್ದು, ಚಿಕಿತ್ಸೆಗಾಗಿ ಡೆಹ್ರಾಡೂನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.