ಮುಂದಿನ ತಿಂಗಳು ನಡೆಯಲಿರುವ ಕೆಸೆಟ್ ಪರೀಕ್ಷೆಗೆ ಕಲಬುರಗಿಯ ಪರೀಕ್ಷಾ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.

ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆ ಹಾಗೂ ಇತ್ತಿಚಿಗೆ ನಡೆದ ಕೆಇಎ ವಿವಿಧ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ವ್ಯಾಪಕ ಅಕ್ರಮ ನಡೆದಿರುವ ಹಿನ್ನೆಲೆ ಕಲಬುರಗಿಯಲ್ಲಿ ಪರೀಕ್ಷೆ ನಡೆಸುವುದೇ ಬೇಡ ಎಂಬ ನಿರ್ಧಾರಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಂದಿದೆ.
ಬರುವ ಜನವರಿ 13 ರಂದು ನಡೆಸಲಿರುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ(ಕೆಸೆಟ್-2023) ಪರೀಕ್ಷೆಗೆ ನಿಗದಿ ಮಾಡಲಾಗಿರುವ ಕಲಬುರಗಿಯಲ್ಲಿನ ಪರೀಕ್ಷಾ ಕೇಂದ್ರವನ್ನು ರಾಜ್ಯಧಾನಿ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ.
ಕಲಬುರಗಿಯಲ್ಲಿ ಕಳೆದ 2021ರಲ್ಲಿ 545 ಪಿಎಸ್‌ಐ ಹುದ್ದೆಗಳಿಗೆ ನಡೆಸಿದ ನೇಮಕಾತಿ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿತ್ತು. ಈ ಸಂಬಂಧ ಆರ್ ಡಿ ಪಾಟೀಲ್ ಸೇರಿ ಪರೀಕ್ಷೆಗೆ ಹಾಜರಾದ 55 ಕ್ಕೂ ಅಧಿಕ ಜನರು ಜೈಲು ಪಾಲಾಗಿದ್ದರು. ಬಳಿಕ ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ ಮಾಸುವ ಮುನ್ನವೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇತ್ತೀಚಗೆ ನಡೆಸಿದ ವಿವಿಧ ಹುದ್ದೆಗಳ ನೇಮಕಾತಿಯ ಪರೀಕ್ಷೆಯಲ್ಲಿಯೂ ವ್ಯಾಪಕ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಪರೀಕ್ಷೆ ನಡೆಸದಿರಲು ನಿರ್ಧಾರ ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರ ಬೆಂಗಳೂರಿಗೆ ವರ್ಗಾವಣೆ ಮಾಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಕೃತ ಪ್ರಕಟಣೆ ಹೊರಡಿಸಿದೆ. ಪಕ್ಕದ ವಿಜಯಪುರದಲ್ಲಿನ ಕೇಂದ್ರವನ್ನೂ ತುಮಕೂರಿಗೆ ಸ್ಥಳಾಂತರಿಸಲಾಗಿದೆ.
ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ ಕಲ್ಯಾಣ ಕರ್ನಾಟಕದಿಂದ ಹೆಚ್ಚಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಈಗ ಪರೀಕ್ಷಾ ಕೇಂದ್ರಗಳು ದೂರದ ಬೆಂಗಳೂರು, ತುಮಕೂರಿಗೆ ಸ್ಥಳಾಂತರಿಸಿರುವ ಅಭ್ಯರ್ಥಿಗಳಿಗೆ ತೊಂದರೆ ಆಗಲಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಪರೀಕ್ಷೆ ಎದುರಿಸುವುದು ಅನಿವಾರ್ಯವಾಗಿದೆ. ಈಗಾಗಲೇ ಪಿಎಸ್‌ಐ ಮರು ಪರೀಕ್ಷೆ ಕೂಡಾ ಬೆಂಗಳೂರಿನಲ್ಲಿ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಯಾರೋ ಮಾಡಿದ ತಪ್ಪಿಗೆ ಮತ್ಯಾರಿಗೋ ಶಿಕ್ಷೆ ಅನ್ನೋ ತರಹ ಆಗಿದೆ ಎಂದು ಅಭ್ಯರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಅಕ್ರಮ ಎಸಗಿದರೆ ಆಸ್ತಿ ಮುಟ್ಟುಗೋಲು: ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮ ತಡೆಯಲು ರಾಜ್ಯ ಸರ್ಕಾರ ಪ್ರತ್ಯೇಕ ಕಾಯ್ದೆ ತರಲು ತೀರ್ಮಾನಿಸಿದೆ. ಕಳೆದ ತಿಂಗಳು ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಪಬ್ಲಿಕ್ ಎಕ್ಸಾಮಿನೇಷನ್ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅನ್ಯಾಯದ ವಿಧಾನ ತಡೆಗಟ್ಟುವಿಕೆ ಕ್ರಮಗಳು) ವಿಧೇಯಕ 2023ಕ್ಕೆ ಅನುಮೋದನೆ ನೀಡಲಾಗಿತ್ತು.
ಕರ್ನಾಟಕ ಪಬ್ಲಿಕ್ ಎಕ್ಸಾಮಿನೇಷನ್ ವಿಧೇಯಕ-2023ರಲ್ಲಿ ಕಠಿಣ ಕಾನೂನುಗಳನ್ನು ರೂಪಿಸಲಾಗಿದೆ. ವಿಧೇಯಕದಲ್ಲಿ, ಅಕ್ರಮ ಎಸಗಿದವರ ಮೇಲೆ ಕಠಿಣ ಸೆರೆಮನೆವಾಸ ಹಾಗೂ ಬೃಹತ್ ದಂಡ ವಿಧಿಸುವ ನಿಯಮ ಸೇರಿಸಲಾಗಿದೆ. ಒಂದು ವೇಳೆ, ಪರೀಕ್ಷಾರ್ಥಿ ಕಾನೂನುಬಾಹಿರ ಕೃತ್ಯದಲ್ಲಿ ತೊಡಗಿ ಅಕ್ರಮದಲ್ಲಿ ಭಾಗಿಯಾಗಿರುವುದು ದೃಢಪಟ್ಟರೆ, ಅಂಥ ಅಪರಾಧಿಗೆ ಗರಿಷ್ಠ ಐದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ನಿಯಮ ರೂಪಿಸಲಾಗಿದೆ. ಅದರ ಜೊತೆಗೆ ಬೃಹತ್ ಮೊತ್ತದ ದಂಡ ವಿಧಿಸುವ ಅಂಶವನ್ನೂ ಸೇರಿಸಲಾಗಿದೆ. 10 ಲಕ್ಷ ರೂ. ಕಡಿಮೆ ಇಲ್ಲದಂತೆ ದಂಡ ವಿಧಿಸುವ ನಿಯಮ ರೂಪಿಸಲಾಗಿದೆ. ದಂಡ ಕಟ್ಟಲು ವಿಫಲನಾದರೆ 9 ತಿಂಗಳ ಜೈಲು ಶಿಕ್ಷೆ ವಿಧಿಸಲಾಗುವುದು. ಈ ವಿಧೇಯಕದಲ್ಲಿ ಪ್ರಮುಖವಾಗಿ ತಪ್ಪಿತಸ್ಥನ ಆಸ್ತಿ ಮುಟ್ಟುಗೋಲಿನ ನಿಯಮವನ್ನೂ ಸೇರಿಸಲಾಗಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 0