ಮೊದಲ ದಿನ 17 ವಿಕೆಟ್ ಪಡೆದು ಮಿಂಚಿದ ಬೌಲರ್ಸ್! ಆಸ್ಟ್ರೇಲಿಯಾ ಏಟಿಗೆ ತಿರುಗೇಟು ಕೊಟ್ಟ ಟೀಮ್ ಇಂಡಿಯಾ.


ಬಾರ್ಡರ್ ಗವಾಸ್ಕರ್ ಟ್ರೋಫಿಯ (Border Gavaskar Trophy) ಮೊದಲ ದಿನ ಪರ್ತ್​ನಲ್ಲಿ (Perth Test) ಬೌಲರ್​ಗಳು ವಿಜೃಂಭಿಸಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಕಾಂಗರೂಗಳ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 150ಕ್ಕೆ ಆಲೌಟ್ ಆಗಿತ್ತು. ಆದರೆ ಎರಡನೇ ಇನ್ನಿಂಗ್ಸ್​ನಲ್ಲಿ ಭಾರತೀಯ ಬೌಲರ್​ಗಳು (Indian Bowlers) ಆರ್ಭಟಿಸಿದರು. ಆಸ್ಟ್ರೇಲಿಯನ್ನರಿಗೆ ಅವರದ್ದೇ ಮಾದರಿಯಲ್ಲಿ ತಿರುಗೇಟು ಕೊಟ್ಟ ಟೀಮ್ ಇಂಡಿಯಾ ವೇಗಿಗಳು ಮೊದಲ ದಿನವೇ 7 ವಿಕೆಟ್ ಪಡೆದು ಮಿಂಚಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಆಸೀಸ್​ 27 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 67 ರನ್​ಗಳಿಸಿದೆ.

ಭಾರತದ ಮೊದಲ ಇನ್ನಿಂಗ್ಸ್​ನ 150 ರನ್​ಗಳನ್ನು ಹಿಂಬಾಲಿಸಲು ಹೊರಟ ಆಸ್ಟ್ರೇಲಿಯಾ ನಿರಂತರ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಬುಮ್ರಾ ತಮ್ಮ ಮೊದಲ ಸ್ಪೆಲ್​ನಲ್ಲೇ ಆರಂಭಿಕರಿಬ್ಬರನ್ನ ಪೆವಿಲಿಯನ್​ಗಟ್ಟಿದರು. ಆಸ್ಟೇಲಿಯಾ ಪರ ಇಂದೇ ಪದಾರ್ಪಣೆ ಮಾಡಿದ ನೇಥನ್ ಮೆಕ್​ಸ್ವೀನಿ 13 ಎಸೆತಗಳಲ್ಲಿ 10 ರನ್​ಗಳಿಸಿದ್ದ ವೇಳೆ ಬುಮ್ರಾ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ಮತ್ತೊಬ್ಬ ಆರಂಭಿಕ ಬ್ಯಾಟರ್​ ಉಸ್ಮಾನ್ ಖವಾಜ 19 ಎಸೆತಗಳಲ್ಲಿ 8 ರನ್​ಗಳಿಸಿ ಕೊಹ್ಲಿ ಕ್ಯಾಚ್ ನೀಡಿ ಔಟಾದರು.

ಎರಡಂಕಿ ದಾಟಿದ್ದು 3 ಮಂದಿ!

ಖವಾಜ ಔಟಾದ ನಂತರದ ಎಸೆತದಲ್ಲೇ ನಾಯಕ ಬುಮ್ರಾ ಆಸ್ಟ್ರೇಲಿಯಾದ ಬ್ಯಾಟಿಂಗ್ ಆಧಾರ ಸ್ಥಂಭವಾಗಿದ್ದ ಸ್ಟೀವ್ ಸ್ಮಿತ್​ರನ್ನ ಗೋಲಡನ್​ ಡಕ್ ಮಾಡಿದರು. ನಂತರ ಬಂದ ಅದ್ಭುತ ಫಾರ್ಮ್​ನಲ್ಲಿರುವ ಟ್ರಾವಿಸ್ ಹೆಡ್​ರನ್ನ (11) ಹರ್ಷಿತ್ ರಾಣಾ ಬೌಲ್ಡ್ ಮಾಡಿದರು. ಮೊಹಮ್ಮದ್ ಸಿರಾಜ್ 6 ರನ್​ಗಳಿಸಿದ್ದ ಮಿಚ್​ ಮಾರ್ಷ್ (6)​ ಸಿರಾಜ್​ ಬೌಲಿಂಗ್​ನಲ್ಲಿ ರಾಹುಲ್​ಗೆ ಕ್ಯಾಚ್ ನೀಡಿದರು. ನಾಯಕ ಪ್ಯಾಟ್ ಕಮಿನ್ಸ್ 3 ರನ್​ಗಳಿಸಿ ಸಿರಾಜ್​ಗೆ ವಿಕೆಟ್ ಒಪ್ಪಿಸಿದರು.

ಪ್ರಸ್ತುತ ವಿಕೆಟ್ ಕೀಪರ್ ಅಲೆಕ್ಸ್​ ಕ್ಯಾರಿ 18 ಹಾಗೂ ಮಿಚೆಲ್ ಸ್ಟಾರ್ಕ್  6 ರನ್​ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.

ಭಾರತದ ಪರ ಮಿಂಚಿನ ಬೌಲಿಂಗ್ ಮಾಡಿದ ಜಸ್ಪ್ರೀತ್ ಬುಮ್ರಾ 17ಕ್ಕೆ 4 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 17ಕ್ಕೆ2,  ಹರ್ಷಿತ್ ರಾಣಾ 1 ವಿಕೆಟ್ ಪಡೆದು ಮಿಂಚಿದರು.

ಭಾರತ 150ಕ್ಕೆ ಆಲೌಟ್

ಇದಕ್ಕೂ ಮುನ್ನ ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 49.4 ಓವರ್​ಗಳಲ್ಲಿ 150ಕ್ಕೆ ಆಲೌಟ್ ಆಗಿದೆ. ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು. ಆದರೆ ಭಾರತೀಯ ಬ್ಯಾಟರ್​ಗಳು ಮಾತ್ರ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು. ಇಡೀ ಇನ್ನಿಂಗ್ಸ್​ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಸಿಡಿಸಿದ 41 ರನ್ ತಂಡದ ಗರಿಷ್ಠ ಸ್ಕೋರ್ ಆಯಿತು.

ಸೊನ್ನೆ ಸುತ್ತಿದ ಇಬ್ಬರು ಯುವ ಆಟಗಾರರು

ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಟೀಮ್ ಇಂಡಿಯಾ ಕೆಟ್ಟ ಆರಂಭ ಪಡೆದುಕೊಂಡಿತು. ಇದೇ ಮೊದಲ ಬಾರಿಗೆ ಆಸೀಸ್ ಪ್ರವಾಸ ಕೈಗೊಂಡಿರುವ ಯಶಸ್ವಿ ಜೈಸ್ವಾಲ್ ಹಾಗೂ ದೇವದತ್​ ಪಡಿಕ್ಕಲ್ ಸೊನ್ನೆ ಸುತ್ತಿದರೆ, ಅನುಭವಿ ವಿರಾಟ್ ಕೊಹ್ಲಿ ಕೇವಲ 5 ರನ್​ಗಳಿಸಿ ನಿರಾಶೆ ಮೂಡಿಸಿದರು. 74 ಎಸೆತಗಳಲ್ಲಿ 3 ಬೌಂಡರಿ ಸಿಡಿಸಿ 26 ರನ್​ಗಳಿಸಿದ್ದ ಕನ್ನಡಿಗ ಕೆಎಲ್ ರಾಹುಲ್​ ಥರ್ಡ್ ಅಂಪೈರ್ ನೀಡಿದ ವಿವಾದಾತ್ಮಕ ತೀರ್ಪಿಗೆ ಬಲಿಯಾದರು.

ನಂತರ ಬಂದ ಧ್ರುವ್ ಜುರೆಲ್ 11ಕ್ಕೆ ಸೀಮಿತವಾದರೆ, ಅಶ್ವಿನ್​ ಹಾಗೂ ಜಡೇಜಾರನ್ನು ಹಿಂದಿಕ್ಕಿ ತಂಡದಲ್ಲಿ ಅವಕಾಶ ಪಡೆದಿದ್ದ ವಾಷಿಂಗ್ಟನ್ ಸುಂದರ್ ಕೇವಲ 4 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. 100 ರನ್​ಗಳಿಸುವುದು ಅನುಮಾನ ಎಂಬ ಸ್ಥಿತಿಯಲ್ಲಿ ಟೀಮ್ ಇಂಡಿಯಾಗೆ ರಿಷಭ್ ಪಂತ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಸ್ವಲ್ಪ ಸಮಯ ವಿಕೆಟ್ ಮಳೆಯನ್ನ ತಡೆದರು. ಪಂತ್ 78 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 37 ರನ್​ಗಳಿಸಿದರೆ, ಪದಾರ್ಪಣೆ ಆಟಗಾರ ರೆಡ್ಡಿ 59 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 41 ರನ್​ಗಳಿಸಿದರು. ಉಳಿದಂತೆ ಬುಮ್ರಾ 8, ಹರ್ಷಿತ್ ರಾಣಾ 7ರನ್​ಗೆ ವಿಕೆಟ್ ಒಪ್ಪಿಸಿದರು.

ಮಿಂಚಿದ ಹೇಜಲ್​ವುಡ್

ನಿರೀಕ್ಷೆಯಂತೆ ಆಸ್ಟ್ರೇಲಿಯಾ ವೇಗದ ಬೌಲರ್​ಗಳು ಅದ್ಭುತ ಪ್ರದರ್ಶನ ತೋರಿದರು. ಜೋಶ್ ಹೇಜಲ್​ವುಡ್​ 29 ರನ್​ ನೀಡಿ  4 ವಿಕೆಟ್ ಪಡೆದರೆ, ಅವರಿಗೆ ಸಾಥ್ ನೀಡಿದ ಮಿಚೆಲ್ ಸ್ಟಾರ್ಕ್​ 14ಕ್ಕೆ 2, ಮಿಚೆಲ್ ಮಾರ್ಷ್ 12ಕ್ಕೆ2  ಹಾಗೂ ನಾಯಕ ಪ್ಯಾಟ್ ಕಮಿನ್ಸ್ 67ಕ್ಕೆ 2 ವಿಕೆಟ್ ಪಡೆದು ಮಿಂಚಿದರು.

Source : https://kannada.news18.com/news/sports/border-gavaskar-trophy-bowlers-put-india-on-top-in-first-day-mbr-1927128.html

Views: 0

Leave a Reply

Your email address will not be published. Required fields are marked *