ಮನೆಯಿಂದಲೇ ಸಾವಿರಾರು ರೂ. ಹಣವನ್ನು ದುಡಿಯಬಹುದು ಎಂಬ ಆಸೆ ತೋರಿಸಿದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ನೀವು ಕೂಡ ಆನ್ಲೈನ್ನಲ್ಲಿ ಕೆಲಸದ ಆಫರ್ ಪಡೆದಿದ್ದರೆ ಅದು ನಕಲಿಯೋ ಅಥವಾ ಅಸಲಿಯೋ ಎಂದು ಗುರುತಿಸುವುದು ಹೇಗೆ?
ನಕಲಿ ವರ್ಕ್ ಫ್ರಂ ಹೋಂ (Work From Home) ಹಗರಣವು ಸಾಮಾನ್ಯವಾಗಿ ಪ್ರಸಿದ್ಧ ಕಂಪನಿಗಳ ಮಾನವ ಸಂಪನ್ಮೂಲ (ಎಚ್‌ಆರ್) ಪ್ರತಿನಿಧಿಗಳಂತೆ ತೋರುತ್ತಿರುವ ಸ್ಕ್ಯಾಮರ್‌ಗಳ ಸಂದೇಶದೊಂದಿಗೆ ಪ್ರಾರಂಭವಾಗುತ್ತದೆ. ಅವರು ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಯೂಟ್ಯೂಬ್ (YouTube) ವೀಡಿಯೊಗಳನ್ನು ಲೈಕ್ ಮಾಡಲು ಮತ್ತು ಫಾಲೋ ಮಾಡಿದರೆ ದುಡ್ಡು ಕೊಡುವುದಾಗಿ ನಿಮಗೆ ಮೆಸೇಜ್ ಕಳುಹಿಸಬಹುದು ಅಥವಾ ಫೋನ್ ಮಾಡಬಹುದು. ಮೊದಲು ನಿಮ್ಮ ವಿಶ್ವಾಸವನ್ನು ಗಳಿಸುವ ಸಲುವಾಗಿ ನಿಮಗೆ ಹಣವನ್ನು ಕಳುಹಿಸುತ್ತಾರೆ.
ಸ್ಕ್ಯಾಮರ್‌ಗಳು ತಮ್ಮ ಖಾತೆಗಳಿಗೆ ದಿನವೂ ಆಯಾ ಅಕೌಂಟ್ಗೆ ಪಾವತಿಗಳನ್ನು ಮಾಡುವುದರಿಂದ ಜನರು ಇದು ಕಾನೂನುಬದ್ಧ ವ್ಯವಹಾರವೆಂದು ಸುಲಭವಾಗಿ ನಂಬುತ್ತಾರೆ. ಆದರೆ, ಇದು ಕೇವಲ ನಾಟಕವಾಗಿರುತ್ತದೆ. ಈ ಮೂಲಕ ಅವರು ನಿಮಗೆ ಗಾಳ ಹಾಕುತ್ತಾರೆ. ಸ್ಕ್ಯಾಮರ್‌ಗಳು ಬಲಿಪಶುಗಳನ್ನು ಟೆಲಿಗ್ರಾಮ್ ಗುಂಪಿಗೆ ಸೇರಿಸಿದಾಗ ಹಗರಣವು ಬೇರೆ ತಿರುವನ್ನು ತೆಗೆದುಕೊಳ್ಳುತ್ತದೆ. ಅಲ್ಲಿ ಅವರು ನಕಲಿ, ಅತ್ಯಾಧುನಿಕವಾಗಿ ಕಾಣುವ ಕ್ರಿಪ್ಟೋ ವ್ಯಾಪಾರ ವೇದಿಕೆಗಳನ್ನು ರಚಿಸುತ್ತಾರೆ. ಅವರು ಸಂತ್ರಸ್ತರಿಗೆ ಹಣವನ್ನು ಕಳುಹಿಸಲು ಮತ್ತು ಅವರ ಹೂಡಿಕೆಯನ್ನು ಹೆಚ್ಚು ಮಾಡಲು ಕೆಲವು ಕಾರ್ಯಗಳನ್ನು ಪೂರ್ಣಗೊಳಿಸಲು ಕೇಳುತ್ತಾರೆ.
ಅದನ್ನು ನಂಬುವ ಜನರಿಗೆ ತಮ್ಮ ಹಣ ಸುರಕ್ಷಿತ ಎಂಬ ಅಭಿಪ್ರಾಯವನ್ನು ನೀಡಲು ವಂಚಕರು ನಕಲಿ ವರ್ಚುವಲ್ ವ್ಯಾಲೆಟ್‌ಗಳನ್ನು ರಚಿಸುತ್ತಾರೆ. ಇದನ್ನು ನಂಬಿ ಸಂತ್ರಸ್ತರು ಪ್ರತಿನಿತ್ಯ ಹಣವನ್ನು ಕಳುಹಿಸುತ್ತಾರೆ ಮತ್ತು ಕೆಲವೊಮ್ಮೆ ತಮ್ಮ ಇಡೀ ಜೀವನದ ಉಳಿತಾಯವನ್ನು ಕಳೆದುಕೊಳ್ಳುತ್ತಾರೆ.
ಡೇಟಾ-ಎಂಟ್ರಿ ಹಗರಣದಲ್ಲಿ ಜನರಿಗೆ ಹೆಚ್ಚಿನ ಪಾವತಿಯ ಡೇಟಾ ಎಂಟ್ರಿ ಉದ್ಯೋಗಗಳ ಭರವಸೆ ನೀಡಲಾಗುತ್ತದೆ. ಆದರೆ ನೋಂದಣಿ ಶುಲ್ಕವನ್ನು ಪಾವತಿಸಿದ ನಂತರ ಅಥವಾ ಸಾಫ್ಟ್‌ವೇರ್‌ನಲ್ಲಿ ಹೂಡಿಕೆ ಮಾಡಿದ ನಂತರ, ಆ ಉದ್ಯೋಗಗಳು ಅಸ್ತಿತ್ವದಲ್ಲಿಲ್ಲ ಎಂದು ಗೊತ್ತಾಗುತ್ತದೆ. ಇನ್ನು ಕೆಲವೊಮ್ಮೆ ಸಂತ್ರಸ್ತರಿಗೆ ಅವರ ಕೆಲಸಕ್ಕೆ ಪಾವತಿಸಲಾಗುವುದಿಲ್ಲ ಅಥವಾ ನಕಲಿ ಚೆಕ್‌ಗಳನ್ನು ನೀಡಲಾಗುತ್ತದೆ. ಅವರು ತಿಳಿಯದೆ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುತ್ತಾರೆ, ಚೆಕ್‌ಗಳು ಬೌನ್ಸ್ ಆಗುವಾಗ ಮಾತ್ರ ಹೊಣೆಗಾರರಾಗಿರಬೇಕಾಗುತ್ತದೆ.
ವಂಚಕರು ಉದ್ಯೋಗದ ಪೋರ್ಟಲ್‌ಗಳು ಅಥವಾ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮೋಸದ ಉದ್ಯೋಗ ಪಟ್ಟಿಗಳನ್ನು ಪೋಸ್ಟ್ ಮಾಡುತ್ತಾರೆ. ವರ್ಕ್ ಫ್ರಮ್ ಹೋಂ ಅವಕಾಶಗಳನ್ನು ಹುಡುಕುವ ಜನರನ್ನು ಗುರಿಯಾಗಿಸುತ್ತಾರೆ. ನಂತರ ಅವರು ವೈಯಕ್ತಿಕ ಮಾಹಿತಿ, ಸಂಸ್ಕರಣಾ ಶುಲ್ಕ ಅಥವಾ ತರಬೇತಿಗಾಗಿ ಪಾವತಿ ಮಾಡಬೇಕೆಂದು ಹೇಳುತ್ತಾರೆ. ಇಂತಹ ವಂಚಕರ ಬಗ್ಗೆ ಎಚ್ಚರಿಕೆಯಿಂದ ಇರುವುದು ಉತ್ತಮ.