ಐಸಿಸಿ ಮಾತುಕತೆ ಯಶಸ್ವಿ: ಹೈವೋಲ್ಟೇಜ್ ಪಂದ್ಯ ಆಡಲು ಪಾಕಿಸ್ತಾನ ಸಮ್ಮತಿ? ಲಾಹೋರ್‌ನಲ್ಲಿ ಮಹತ್ವದ ಸಭೆ.

ನವದೆಹಲಿ: ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದ ಪಾಕಿಸ್ತಾನ ಇದೀಗ ತಣ್ಣಗಾದಂತಿದೆ. ಫೆಬ್ರವರಿ 15ರಂದು ನಡೆಯಲಿರುವ ಈ ಮಹತ್ವದ ಪಂದ್ಯದಲ್ಲಿ ಪಾಕ್ ತಂಡ ಕಣಕ್ಕಿಳಿಯುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಮೂಲಗಳು ವರದಿ ಮಾಡಿವೆ.

ಐಸಿಸಿ ಎಚ್ಚರಿಕೆಗೆ ಮಣಿದ ಪಾಕಿಸ್ತಾನ? ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರವನ್ನು ಪಾಕಿಸ್ತಾನ ಸರ್ಕಾರ ಪ್ರಕಟಿಸಿದ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಇಕ್ಕಟ್ಟಿಗೆ ಸಿಲುಕಿತ್ತು. ಆದರೆ, ಈ ನಿರ್ಧಾರಕ್ಕೆ ಸೂಕ್ತ ಕಾರಣಗಳೊಂದಿಗೆ ಸ್ಪಷ್ಟನೆ ನೀಡುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC) ತಾಕೀತು ಮಾಡಿದ ಬೆನ್ನಲ್ಲೇ ಪಾಕ್ ನಿಲುವಿನಲ್ಲಿ ಹಠಾತ್ ಬದಲಾವಣೆ ಕಂಡುಬಂದಿದೆ.

ಐಸಿಸಿಯು ಪಿಸಿಬಿಗೆ ಕಠಿಣ ಎಚ್ಚರಿಕೆಯನ್ನು ರವಾನಿಸಿದ್ದು, ಒಂದು ವೇಳೆ ಪಂದ್ಯವನ್ನು ಬಹಿಷ್ಕರಿಸಿದರೆ ಭಾರಿ ದಂಡ, ಪಾಯಿಂಟ್ ಕಡಿತ, ಸದಸ್ಯತ್ವ ಅಮಾನತು ಹಾಗೂ ಮುಂಬರುವ ಟೂರ್ನಿಗಳ ಪ್ರಸಾರ ಹಕ್ಕುಗಳ ಕಡಿತದಂತಹ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದೆ ಎನ್ನಲಾಗಿದೆ.

ಲಾಹೋರ್‌ನಲ್ಲಿ ಮಹತ್ವದ ಸಭೆ ಸದ್ಯದ ಬಿಕ್ಕಟ್ಟನ್ನು ಶಮನಗೊಳಿಸಲು ಬಿಸಿಬಿ ಅಧ್ಯಕ್ಷ ಅಮಿನುಲ್ ಇಸ್ಲಾಂ ಬುಲ್‌ಬುಲ್ ಭಾನುವಾರ ಲಾಹೋರ್‌ಗೆ ತಲುಪಿದ್ದು, ಪಿಸಿಬಿ ಅಧಿಕಾರಿಗಳೊಂದಿಗೆ ನಿರ್ಣಾಯಕ ಸಭೆ ನಡೆಸುತ್ತಿದ್ದಾರೆ. ಅಲ್ಲದೆ, ಇಬ್ಬರು ಐಸಿಸಿ ಅಧಿಕಾರಿಗಳು ಕೂಡ ಈ ಮಾತುಕತೆಯಲ್ಲಿ ಪಾಲ್ಗೊಳ್ಳಲು ಲಾಹೋರ್‌ಗೆ ತೆರಳಿದ್ದಾರೆ. ಸದ್ಯ ಪಿಸಿಬಿ ಮತ್ತು ಐಸಿಸಿ ನಡುವೆ ಹೊಸದಾಗಿ ಮಾತುಕತೆ ಆರಂಭವಾಗಿದ್ದು, ಸಕಾರಾತ್ಮಕ ಫಲಿತಾಂಶ ಹೊರಬರುವ ನಿರೀಕ್ಷೆಯಿದೆ.

ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದ ಉಭಯ ತಂಡಗಳು ಈಗಾಗಲೇ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ತಮ್ಮ ಮೊದಲ ಪಂದ್ಯಗಳನ್ನು ಜಯಿಸಿವೆ. ಕೊಲಂಬೊದಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ತಂಡ ನೆದರ್ಲೆಂಡ್ಸ್ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದರೆ, ಅತ್ತ ಭಾರತ ತಂಡವು ಕಳೆದ ವಿಶ್ವಕಪ್‌ನಲ್ಲಿ ಪಾಕಿಸ್ತಾನಕ್ಕೆ ಸೋಲುಣಿಸಿದ್ದ ಅಮೆರಿಕ ತಂಡವನ್ನು ಮಣಿಸಿ ಶುಭಾರಂಭ ಮಾಡಿದೆ.

ಒಟ್ಟಿನಲ್ಲಿ, ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಫೆಬ್ರವರಿ 15ರ ಇಂಡೋ-ಪಾಕ್ ಪಂದ್ಯ ನಡೆಯುವುದು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.

Leave a Reply

Your email address will not be published. Required fields are marked *