NPS Vatsalya Scheme: ಮಕ್ಕಳ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರ ಹೊಸ ಯೋಜನೆ ಜಾರಿಗೆ ತರುತ್ತಿದೆ. ಈ ಯೋಜನೆ ಇಂದಿನಿಂದಲೇ ಜಾರಿಯಾಗುತ್ತಿದೆ.

- ಹೊಸ ಯೋಜನೆಗೆ ನಿರ್ಮಲಾ ಸೀತಾರಾಮನ್ ಚಾಲನೆ
- ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆಗೆ ಅವಕಾಶ
- ಯೋಜನೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
NPS Vatsalya Scheme: ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಅಂದರೆ ಸೆಪ್ಟೆಂಬರ್ 18 ರಂದು ಹೊಸ ಯೋಜನೆಗೆ ಚಾಲನೆ ನೀಡಲಿದ್ದಾರೆ.ಈ ಯೋಜನೆಗೆ ‘ಎನ್‌ಪಿಎಸ್ ವಾತ್ಸಲ್ಯ’ ಎಂದು ಹೆಸರಿಡಲಾಗಿದೆ. ಇದಕ್ಕೆ ಸಂಬಂಧಿಸಿದ ಘೋಷಣೆಯನ್ನು ಹಣಕಾಸು ಸಚಿವರು 2024 ರ ಬಜೆಟ್‌ನಲ್ಲಿಯೇ ಮಾಡಿದ್ದಾರೆ. ಈ ಯೋಜನೆಯಡಿಯಲ್ಲಿ, ಪೋಷಕರು ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡಬಹುದು.
ಇನ್ನು ಇಂದಿನಿಂದಲೇ ಜಾರಿಗೆ ಬರುವ ಈ ಸರ್ಕಾರಿ ಯೋಜನೆಯಲ್ಲಿ ಯಾರು ಹೂಡಿಕೆ ಮಾಡಬಹುದು ಎಂಬ ಪ್ರಶ್ನೆಯೂ ಮನಸ್ಸಿನಲ್ಲಿ ಮೂಡುತ್ತದೆ. ಎನ್‌ಪಿಎಸ್ ವಾತ್ಸಲ್ಯದಲ್ಲಿ ಮಾಡಬಹುದಾದ ಕನಿಷ್ಠ ಮತ್ತು ಗರಿಷ್ಠ ಹೂಡಿಕೆ ಎಷ್ಟು? NPS ವಾತ್ಸಲ್ಯವನ್ನು ಯಾರು ನಿರ್ವಹಿಸುತ್ತಾರೆ? ಮಗುವಿಗೆ 18 ವರ್ಷ ತುಂಬಿದ ನಂತರವೂ NPS ವಾತ್ಸಲ್ಯವನ್ನು ಮುಂದುವರಿಸಬಹುದೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ .
ದೇಶದ ನಾಗರಿಕರು ತಮ್ಮ ಮಗುವಿನ ಹೆಸರಿನಲ್ಲಿ ಎನ್‌ಪಿಎಸ್ ವಾತ್ಸಲ್ಯ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.ಮಗು ದೊಡ್ಡವನಾದ ನಂತರವೂ ಆತ ಅಥವಾ ಆಕೆ ಬಯಸಿದರೆ ಯೋಜನೆಯನ್ನು ಮುಂದುವರೆಸಿಕೊಂಡು ಹೋಗಬಹುದು. ಮಗುವಿನ ಪೋಷಕರು ಸಹ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿರ್ವಹಿಸುತ್ತದೆ.
ಪೋಷಕರು ತಮ್ಮ ಮಕ್ಕಳಿಗಾಗಿ NPS ವಾತ್ಸಲ್ಯ ಯೋಜನೆಯಲ್ಲಿ ಹೂಡಿಕೆ ಮಾಡುವಾಗ ಹಲವಾರು ಆಯ್ಕೆಗಳಲ್ಲಿ ಯಾವುದಾದರೂ ಒಂದರಲ್ಲಿ ಹೂಡಿಕೆ ಮಾಡುವ ಆಯ್ಕೆಯನ್ನು ಪಡೆಯುತ್ತಾರೆ.ಈ ಎಲ್ಲಾ ಹೂಡಿಕೆ ಆಯ್ಕೆಗಳನ್ನು ಸರ್ಕಾರ ಅನುಮೋದಿಸಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ವೆಬ್‌ಸೈಟ್ ಪ್ರಕಾರ, ಎನ್‌ಪಿಎಸ್ ವಾತ್ಸಲ್ಯದಲ್ಲಿ ನಾಲ್ಕು ಹೂಡಿಕೆ ಆಯ್ಕೆಗಳಿವೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ವೆಬ್‌ಸೈಟ್ ಪ್ರಕಾರ, ನಿಮ್ಮ ಮಗುವಿನ ಹೆಸರಿನಲ್ಲಿ ಎನ್‌ಪಿಎಸ್ ವಾತ್ಸಲ್ಯ ಯೋಜನೆಯಲ್ಲಿ ಹೂಡಿಕೆ ಮಾಡಬೇಕಾದರೆ, ಪ್ರತಿ ವರ್ಷ ಕನಿಷ್ಠ 1000 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ಇಲ್ಲಿ ಹೂಡಿಕೆಗೆ ಗರಿಷ್ಟ ಮಿತಿ ಇಲ್ಲ.
ಮಗುವಿನ ಹೆಸರಿನಲ್ಲಿ ಠೇವಣಿ ಮಾಡಿದ ಹಣದಿಂದ ಸ್ವಲ್ಪ ಹಣವನ್ನು ಹಿಂಪಡೆಯಲು ಬಯಸಿದರೆ, ಹೂಡಿಕೆಯ ದಿನಾಂಕದಿಂದ ಮೂರು ವರ್ಷಗಳವರೆಗೆ ಕಾಯಬೇಕಾಗುತ್ತದೆ. ನಂತರ ಹೂಡಿಕೆಯ 25 ಪ್ರತಿಶತದಷ್ಟು ಹಣವನ್ನು ಹಿಂಪಡೆಯಬಹುದು.ಯಾವುದೇ ಕಾಯಿ,ಲೆ ಶಿಕ್ಷಣ ಅಥವಾ ಚಿಕಿತ್ಸೆಗಾಗಿ ಈ ಹಣವನ್ನು ಹಿಂಪಡೆಯಬಹುದು.ಇದಲ್ಲದೇ ಶೇ.75ಕ್ಕಿಂತ ಹೆಚ್ಚು ಅಂಗವೈಕಲ್ಯವಿದ್ದಲ್ಲಿ ಹಣವನ್ನು ಹಿಂಪಡೆಯಬಹುದು.ನಿಮ್ಮ ಮಗುವಿಗೆ 18 ವರ್ಷ ತುಂಬುವವರೆಗೆ ಮೂರು ಬಾರಿ ಹಣ ಹಿಂಪಡೆಯಬಹುದು.
ಇನ್ನು ಮಗುವಿಗೆ 18 ವರ್ಷ ತುಂಬಿದಾಗ ಈ ಯೋಜನೆಯಿಂದ ನಿರ್ಗಮಿಸಬಹುದು. ಮಗುವಿನ ಖಾತೆಯಲ್ಲಿ 2.5 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಹಣ ಇದ್ದರೆ ಒಂದೇ ಬಾರಿಗೆ ಸಂಪೂರ್ಣ ಹಣವನ್ನು ಹಿಂಪಡೆಯಬಹುದು.ಇದಕ್ಕಿಂತ ಹೆಚ್ಚು ಹಣ ಹೂಡಿಕೆಯಾಗಿದ್ದರೆ ಒಮ್ಮೆ 20% ಹಣವನ್ನು ಹಿಂಪಡೆಯಬಹುದು.ಉಳಿದ ಹಣವನ್ನು ನಿಯಮಿತ ಆದಾಯಕ್ಕಾಗಿ ವರ್ಷಾಶನವಾಗಿ ಪಡೆಯಬಹುದು. ಇದರಿಂದಾಗಿ ಪ್ರತಿ ತಿಂಗಳು ಹಣ ಸಿಕ್ಕಿದ ಹಾಗೆ ಆಗುತ್ತದೆ.
ಇದಲ್ಲದೇ ತಮ್ಮ ಮಕ್ಕಳಿಗಾಗಿ ಎನ್‌ಪಿಎಸ್ ವಾತ್ಸಲ್ಯದಲ್ಲಿ ಹೂಡಿಕೆ ಮಾಡುವವರಿಗೆ ಬೇರೆ ಆಯ್ಕೆಗಳೂ ಇವೆ. ಮಗುವಿಗೆ 18 ವರ್ಷ ತುಂಬಿದ ನಂತರವೂ ಆ ಯೋಜನೆಯನ್ನು ಮುಂದುವರಿಸಬಹುದು.ಆಗ NPS ವಾತ್ಸಲ್ಯವನ್ನು NPS ಶ್ರೇಣಿ-1 ಆಗಿ ಪರಿವರ್ತಿಸಲಾಗುತ್ತದೆ.ಮಗುವಿಗೆ 18 ವರ್ಷಗಳು ಪೂರ್ಣಗೊಂಡ ನಂತರ ಮೂರು ತಿಂಗಳೊಳಗೆ ಮತ್ತೆ KYC ಅನ್ನು ಪೂರ್ಣಗೊಳಿಸಬೇಕು.