16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಂದು (IPL 2023) ಎರಡು ಪಂದ್ಯಗಳನ್ನು ಆಯೋಜಿಸಲಾಗಿದೆ. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸೊಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಮ್ಯಾಚ್ನಲ್ಲಿ ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ಮತ್ತು ಫಾಫ್ ಡುಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (PBKS vs RCB) ತಂಡ ಮುಖಾಮುಖಿ ಆಗಲಿದೆ. ಸಂಜೆ ಡೆಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಮತ್ತೊಂದು ಪಂದ್ಯ ನಡೆಯಲಿದ್ದು ಡೇವಿಡ್ ವಾರ್ನರ್ ಅವರ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ (DC vs KKR) ಅನ್ನು ಎದುರಿಸಲಿದೆ.
ಪಂಜಾಬ್-ಆರ್ಸಿಬಿ
ಪಂಜಾಬ್ ಆಡಿದ ಐದು ಪಂದ್ಯಗಳಲ್ಲಿ ಮೂರರಲ್ಲಿ ಜಯ ಸಾಧಿಸಿ ಎರಡು ಪಂದ್ಯಗಳಲ್ಲಿ ಸೋತಿದೆ. ಇತ್ತ ಆರ್ಸಿಬಿ ಕೂಡ ಐದು ಪಂದ್ಯಗಳನ್ನು ಆಡಿದ್ದು ಕೇವಲ ಎರಡರಲ್ಲಿ ಜಯ ಸಾಧಿಸಿ ಮೂರು ಪಂದ್ಯದಲ್ಲಿ ಸೋಲುಂಡಿದೆ. ಪಂಜಾಬ್ ತಂಡದಲ್ಲಿ ಒಬ್ಬ ಆಟಗಾರ ವೈಫಲ್ಯ ಅನುಭವಿಸಿದರೆ ಮತ್ತೊಬ್ಬ ಪ್ಲೇಯರ್ ಪಂದ್ಯವನ್ನು ಗೆಲ್ಲಿಸಿಕೊಡುತ್ತಿದ್ದಾರೆ. ಶಿಖರ್ ಧವನ್, ಮ್ಯಾಥ್ಯೂ ಶಾರ್ಟ್, ಹರ್ಪ್ರೀತ್ ಸಿಂಗ್ ಸಿಖಂದರ್ ರಾಜಾ, ಶಾರುಖ್ ಖಾನ್ ಫಾರ್ಮ್ನಲ್ಲಿದ್ದಾರೆ. ಸ್ಯಾಮ್ ಕುರ್ರನ್, ರಬಾಡಾ, ಅರ್ಶ್ದೀಪ್ ಸಿಂಗ್, ರಾಹುಲ್ ಚಹರ್ ಪ್ರಮುಖ ಬೌಲರ್ಗಳಾಗಿದ್ದಾರೆ.
IPL 2023: RCB ವಿರುದ್ಧ ಕನ್ನಡಿಗನನ್ನು ಕಣಕ್ಕಿಳಿಸಲಿದೆಯಾ ಪಂಜಾಬ್ ಕಿಂಗ್ಸ್..?
ರಾಯಲ್ ಚಾಲೆಂಜರ್ಸ್ ಬ್ಯಾಟಿಂಗ್ನಲ್ಲಿ ಬಲಿಷ್ಠವಾಗಿದ್ದರೂ ಬೌಲಿಂಗ್ನಲ್ಲಿ ತೀರಾ ಕಳಪೆ ಪ್ರದರ್ಶನ ತೋರುತ್ತಿದೆ. ಮೊಹಮ್ಮದ್ ಸಿರಾಜ್ ಬಿಟ್ಟರೆ ಮತ್ಯಾವ ಬೌಲರ್ ಕೂಡ ಮಾರಕವಾಗಿ ಗೋಚರಿಸುತ್ತಿಲ್ಲ. ಹೀಗಾಗಿ ಬೌಲಿಂಗ್ ವಿಭಾಗದಲ್ಲಿ ಇಂದು ಬದಲಾವಣೆ ಖಚಿತ ಎಂದು ಹೇಳಬಹುದು. ವಿರಾಟ್ ಕೊಹ್ಲಿ, ನಾಯಕ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿದ್ದಾರೆ, ಮಹಿಪಾಲ್ ಲುಮ್ರೂರ್, ದಿನೇಶ್ ಕಾರ್ತಿಕ್, ಶಹ್ಬಾಜ್ ಅಹ್ಮಾದ್ ಕಡೆಯಿಂದ ಉತ್ತಮ ಆಟಬರಬೇಕಿದೆ. ಪಾಯಿಂಟ್ ಟೇಬಲ್ನಲ್ಲಿ ಮೇಲಕ್ಕೇರಲು ಇಂದಿನ ಪಂದ್ಯದಲ್ಲಿ ಆರ್ಸಿಬಿ ಗೆಲ್ಲಲೇ ಬೇಕಾಗಿದೆ.
ಡೆಲ್ಲಿ-ಕೋಲ್ಕತ್ತಾ
ಡೆಲ್ಲಿ ಆಡಿದ ಐದು ಪಂದ್ಯಗಳ ಪೈಕಿ ಐದರಲ್ಲೂ ಸೋಲುಂಡಿದೆ. ತಂಡದ ಪರ ರನ್ ಕಲೆಹಾಕುತ್ತಿದ್ದ ನಾಯಕ ಡೇವಿಡ್ ವಾರ್ನರ್ ಕೂಡ ಈಗ ಮಂಕಾಗಿದ್ದಾರೆ. ಪೃಥ್ವಿ ಶಾ, ಯಶ್ ದುಲ್, ರೋಮನ್ ಪಾವೆಲ್, ಲಲಿತ್ ಯಾದವ್ ಘನೆತೆಗೆ ತಕ್ಕಂತೆ ಆಡುತ್ತಿಲ್ಲ. ಮನೀಶ್ ಪಾಂಡೆ ಕಳೆದ ಮ್ಯಾಚ್ನಲ್ಲಿ ಅರ್ಧಶತಕ ಸಿಡಿಸಿ ನೆರವಾಗಿದ್ದರು. ಅಕ್ಷರ್ ಪಟೇಲ್ ಮಾತ್ರ ಆಲ್ರೌಂಡ್ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್ನಲ್ಲೂ ಮುಖೇಶ್ ಕುಮಾರ್, ಮುಸ್ತಫಿಜುರ್ ರೆಹ್ಮಾನ್, ಆ್ಯನ್ರಿಚ್ ನಾರ್ಟ್ಜೆ, ಕುಲ್ದೀಪ್ ಯಾದವ್ ಮಾರಕವಾಗಿ ಕಾಣಿಸಿಕೊಳ್ಳುತ್ತಿಲ್ಲ.
ಇತ್ತ ಕೆಕೆಆರ್ ಆಡಿದ ಐದು ಪಂದ್ಯಗಳ ಪೈಕಿ ಮೂರರಲ್ಲಿ ಸೋಲು ಎರಡರಲ್ಲಿ ಗೆಲುವು ಕಂಡು ಏಳನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಕೋಲ್ಕತ್ತಾ ಸೋಲು ಕಂಡರೂ ಬ್ಯಾಟಿಂಗ್ ವಿಭಾಗದಲ್ಲಿ ಬಲಿಷ್ಠವಾಗಿದೆ. ನಾಯಕ ನಿತೀಶ್ ರಾಣ ಹಾಗೂ ರಿಂಕು ಸಿಂಗ್ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಎನ್. ಜಗದೀಸನ್, ವೆಂಕಟೇಶ್ ಅಯ್ಯರ್ ಕೂಡ ಫಾರ್ಮ್ನಲ್ಲಿದ್ದಾರೆ. ರೆಹ್ಮಾನುಲ್ಲ ಗುರ್ಬಜ್, ಶಾರ್ದೂಲ್ ಥಾಕೂರ್ ಬ್ಯಾಟಿಂಗ್ನಲ್ಲಿ ಬಲ ತುಂಬಿದರೆ ತಂಡದ ಮೊತ್ತ ಮತ್ತೊಮ್ಮೆ 200+ ಆಗುವುದು ಖಚಿತ. ಆಂಡ್ರೆ ರಸೆಲ್ ಅಬ್ಬರಿಸಬೇಕಿದೆ. ಸುನಿಲ್ ನರೈನ್, ವರುಣ್ ಚಕ್ರವರ್ತಿ, ಲೂಕಿ ಫರ್ಗುಸನ್, ಉಮೇಶ್ ಯಾದವ್, ಸುಯೇಶ್ ಶರ್ಮಾ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ