ಸಿನಿಮಾ ಹಾಡುಗಳ ಮೂಲಕ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಕವಿ ಪರಿಚಯ: ಬೆಳಗಾವಿ ಶಿಕ್ಷಕನಿಂದ ವಿನೂತನ ಪ್ರಯೋಗ.

POETS INTRODUCTION THROUGH SONGS : ಬೆಳಗಾವಿ ಸರ್ಕಾರಿ ಸರ್ದಾರ್ಸ್ ಪ್ರೌಢಶಾಲೆಯ ಕನ್ನಡ ಶಿಕ್ಷಕರೊಬ್ಬರು ಸಿನಿಮಾ ಹಾಡುಗಳ ಮೂಲಕ ವಿದ್ಯಾರ್ಥಿಗಳಿಗೆ ಕವಿಪರಿಚಯ ಮಾಡಿಕೊಡುತ್ತಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಬೆಳಗಾವಿ: ಎಸ್ಎಸ್ಎಲ್​ಸಿ ಪರೀಕ್ಷೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ನಾನಾ ರೀತಿಯ ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳನ್ನು ಶಿಕ್ಷಕರು ಹುರಿಗೊಳಿಸುತ್ತಿದ್ದಾರೆ. ಆದರೆ, ಇಲ್ಲೊಬ್ಬ ಮೇಷ್ಟ್ರು ಸಿನಿಮಾದ ಟ್ರೆಂಡಿಂಗ್ ಹಾಡುಗಳನ್ನೇ ಬಳಸಿಕೊಂಡು ಮಕ್ಕಳಿಗೆ ಪಾಠ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

“ಜೇನದನಿಯೊಳೆ ಮೀನ ಕಣ್ಣೊಳೆ, ರಾರಾ ರಕ್ಕಮ್ಮ, ಯಾಕ ಹುಡುಗ ಮೈಯಾಗ ಹ್ಯಾಂಗ ಐತಿ, ಲಂಗಾದಾವಣ್ಯಾಗ ಮಸ್ತಾಗಿ ಕಾಣತಿ‌ ಲಾವಣ್ಯ” ದಾಟಿಯಲ್ಲಿ ಕವಿ ಪರಿಚಯ ಮಾಡಿಸುತ್ತಿರುವ ಶಿಕ್ಷಕರು. ಫುಲ್ ಜೋಶ್‌ನಲ್ಲಿ ಹಾಡು ಹಾಡುತ್ತಾ ಕವಿ ಪರಿಚಯ ನೆನಪಿಟ್ಟುಕೊಳ್ಳುತ್ತಿರುವ ವಿದ್ಯಾರ್ಥಿಗಳು.

ಹೌದು, ಬೆಳಗಾವಿ ಸರ್ಕಾರಿ ಸರ್ದಾರ್ಸ್ ಪ್ರೌಢಶಾಲೆಯ ಎಸ್ಎಸ್​ಎಲ್​ಸಿ ತರಗತಿಯಲ್ಲಿ ಕಂಡು ಬಂದ ದೃಶ್ಯವಿದು. ಕನ್ನಡ ಶಿಕ್ಷಕ ರವಿ ಹಲಕರ್ಣಿ ಅವರು ಇಂಥದ್ದೊಂದು ವಿನೂತನ ಪ್ರಯೋಗದ ಮೂಲಕ ವಿದ್ಯಾರ್ಥಿಗಳಿಗೆ ವಿಭಿನ್ನವಾಗಿ ಪಾಠ ಮಾಡುತ್ತಿದ್ದಾರೆ. ಅಲ್ಲದೇ ವ್ಯಾಕರಣ ಸೂತ್ರಗಳಿಗೂ ಹಾಡ‌ನ್ನು ಜೋಡಿಸಿದ್ದು, ವಿದ್ಯಾರ್ಥಿಗಳು ತುಂಬಾ ಆಸಕ್ತಿಯಿಂದ ಪಾಠ ಆಲಿಸುತ್ತಿದ್ದಾರೆ.

175 ವರ್ಷಗಳ ಇತಿಹಾಸ ಹೊಂದಿರುವ ಸರ್ದಾರ್ಸ್ ಪ್ರೌಢಶಾಲೆಯಲ್ಲಿ ಒಟ್ಟು 165 ಎಸ್ಎಸ್ಎಲ್​ಸಿ ವಿದ್ಯಾರ್ಥಿಗಳಿದ್ದು, ಉತ್ತಮ ಅಂಕ ಗಳಿಸುವ ನಿಟ್ಟಿನಲ್ಲಿ ಇಲ್ಲಿನ ಶಿಕ್ಷಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಟ್ರೆಂಡಿಂಗ್ ಹಾಡುಗಳು, ಚೀಟಿಗೊಂದು ಚಾಟಿ, ಗುಂಪು ಅಧ್ಯಯನ, ಮಕ್ಕಳ ಮನೆ ಭೇಟಿ, ಪ್ರತಿದಿನ ಪರೀಕ್ಷಾ ದಿನ, ವೇಕ್ ಅಪ್ ಕಾಲ್, ವಾರದ ಮಿತ್ರ, ನಿತ್ಯನೋಟ, ಚೀಟಿ ಎತ್ತು ಚಿತ್ರ ಬಿಡಿಸು, ಟಾಕ್ ವಿಥ್ ಟಾಪರ್ಸ್, ಅಭಿಪ್ರೇರಣಾ ಕಾರ್ಯಾಗಾರ ಸೇರಿ ವಿವಿಧ ಕಾರ್ಯಕ್ರಮಗಳ ಮೂಲಕ ಮಕ್ಕಳನ್ನು ಪರೀಕ್ಷೆಗೆ ಸಜ್ಜುಗೊಳಿಸಲಾಗುತ್ತಿದೆ.

ಯಾವ್ಯಾವ ಟ್ರೆಂಡಿಂಗ್ ಹಾಡುಗಳು?: “ದೊಡ್ಮನೆ ಹುಡುಗ” ಸಿನಿಮಾದ ಯಾಕ ಹುಡುಗ ಮೈಯಾಗ ಹ್ಯಾಂಗ ಐತಿ ಹಾಡಿಗೆ ವರಕವಿ ದ.ರಾ.ಬೇಂದ್ರೆ ಅವರ ಪರಿಚಯ ಮಾಡಿದ್ದು, “ನಾಕುತಂತಿ ಬರದವರು ಯಾರು ಗೊತ್ತಾ?, 1896ರ ಹೊತ್ತ. ಅವರದ್ದು ಧಾರವಾಡ, ಹೆಚ್ಚಿಗೆ ಮಾತು ಬ್ಯಾಡ” ಹೀಗೆ ಸಾಹಿತ್ಯ ರಚಿಸಲಾಗಿದೆ. ಮಕ್ಕಳು ಹಾಡುತ್ತಾ, ಸಖತ್ ಎಂಜಾಯ್ ಮಾಡುತ್ತಾ ಕವಿ ಪರಿಚಯ ನೆನಪಿಟ್ಟುಕೊಂಡಿದ್ದಾರೆ.

ಉತ್ತರ ಕರ್ನಾಟಕ ಜಾನಪದ ಕಲಾವಿದ ಬಾಳು ಬೆಳಗುಂದಿ ಅವರ “ಲಂಗಾದಾವಣ್ಯಾಗ ಮಸ್ತಾಗಿ ಕಾಣತಿ‌ ಲಾವಣ್ಯ, ನಿನ್ನ ಫೋನ್ ನಂಬರ್ ಕೊಟ್ಟರ ಬರತೈತಿ ಪುಣ್ಯ” ಹಾಡಿಗೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಾ, ಎಂ.ಮರಿಯಪ್ಪ ಭಟ್ಟರು ಹುಟ್ಟಿದ ಊರು ಕಬಕ, 1906ನಲ್ಲಿ ಕೇಳಕ್ಕ ಜಾತಕ ತಿಲಕಂ ಛಂದಸ್ಸಾರ ಬರೆದರಕ್ಕ. ಸಾಹಿತ್ಯ ರಚಿಸಿ ಮಕ್ಕಳು ಸದಾ ಈ ಹಾಡು ಗುಣುಗುವಂತೆ ಮಾಡಿದ್ದಾರೆ.

ವಿಕ್ರಾಂತ್ ರೋಣ ಚಿತ್ರದ ರಾರಾ ರಕ್ಕಮ್ಮ, ಗಡಂಗ ರಕ್ಕಮ್ಮ ನಾನು ಗೋಲಿಸೋಡಾ ಬಾಟಲಿ ಹಾಡಿಗೆ 1909 ಹಾವೇರಿ ಜಿಲ್ಲೆ ಸವಣೂರು, 1909 ವಿ.ಕೃ. ಗೋಕಾಕರು ಹುಟ್ಟಿದರು. ಉಗಮ, ಪಯಣ, ಈಜ್ಜೋಡು, ಸಮುದ್ರ ಗೀತೆಗಳು, ಭಾರತ ಸಿಂಧೂರಶ್ಮಿ ಎಂಬ ಕಾವ್ಯ ಬರೆದರು. ರಾರಾ ರಕ್ಕಮ್ಮ ಎಂದು ಹಾಡು ಮುಂದುವರಿಯುತ್ತದೆ.

ಕೃಷ್ಣಂ ಪ್ರಣಯ ಸಖಿ ಸಿ‌ನಿಮಾದ “ಜೇನದನಿಯೊಳೆ ಮೀನ ಕಣ್ಣೊಳೆ, ಸೊಬಗೆ ಮೈ ತುಂಬಿದೆ, ಹಂಸ ನಡೆಯೊಳೆ, ಎದೆಗೆ ಇಳಿದೊಳೆ, ಜೀವ ಝಲ್ಲೆಂದಿದೆ. ಅನಾಮಿಕಾ, ಆಕರ್ಷಿಕಾ, ಇವಾಂಶಿಕಾ ಹೆಸರೇನೆ?” ಹಾಡಿಗೆ ಮಂಡ್ಯ ಜಿಲ್ಲೆಯ ಅಕ್ಕಿ ಹೆಬ್ಬಾಳು ಗ್ರಾಮದೊಳಗೆ, ಅಪರ ವಯಸ್ಕನ ಅಮೆರಿಕ ಯಾತ್ರೆ ಚಂಡ ಮಾರುತದಲ್ಲಿ, ಚಿತ್ರಗಳು-ಪತ್ರಗಳು-ದೇವರು ಬರೆದಾರು. ಪಂಪಾ, ಗಿಂಪಾ ಅಕಾಡೆಮಿ ಪ್ರಶಸ್ತಿ ಪಡೆದಾರು. ಸಾಹಿತ್ಯ ರಚಿಸಿ ಎ.ಆರ್.ಮೂರ್ತಿರಾವ್ ಅವರ ಕವಿ ಪರಿಚಯ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ.

ಕಾಂತಾರ ಸಿನಿಮಾದ “ಸಿಂಗಾರ ಸಿರಿಯೆ ಅಂಗಾಲಿನಲ್ಲಿ ಬಂಗಾರ ಅಗೆಯುವ ಛಾಯೆ, ಗಾಂಧಾರಿಯಂತೆ ಕಣ್ಮುಚ್ಚಿ ಹೊಂಗನಸಾ ಅರಸೋ ಮಾಯೆ, ಮಂದಹಾಸ ಆ ನಲುಮೆಯ ಶ್ರಾವಣ ಮಾಸ”. ವೆಂಗಿಮಂಡಲದಾ ವೆಂಗಿಪಳುವಿನಲ್ಲಿ 902ನೇ ಇಸವಿಯಲ್ಲಿ ಜನಿಸಿದ ಪಂಪ. ಆಹಾ ಆದಿಪುರಾಣ, ವಿಕ್ರಾಮಾರ್ಜುನ ವಿಜಯ, ಸಂಸಾರ ಸಾರೋದಯ. ಇವನು ರತ್ನತ್ರಯ ಆದಿಕವಿ ಎಂದು ಪೂಜ್ಯನಯ್ಯ ಎಂದು ಸಾಹಿತ್ಯ ರಚಿಸಿ ದಾಟಿ ಹೊಂದಿಸಲಾಗಿದೆ.

ಕಿರಿಕ್ ಪಾರ್ಟಿ ಚಿತ್ರದ “ಬೆಳಗೆದ್ದು ಯಾರ ಮುಖವ ನಾನು ನೋಡಿದೆ, ಅಂದಾನೋ ಅದೃಷ್ಟಾನೋ ಮುಂದೆ ನಿಂತಿದೆ, ನಿನ್ನೆ ಕಂಡ ಕನಸು ಬ್ಲಾಕ್ ಆ್ಯಂಡ್​ ವೈಟು ಇಂದು ಬಣ್ಣವಾಗಿದೆ”. ಹಾಡಿನ ದಾಟಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಪರಿಚಯ ಮಾಡಿಸಲಾಗಿದ್ದು, ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ 1904ನೇ ಇಸವಿಯಲ್ಲಿ ನವಿಲು, ಕೊಳಲು, ಪಾಂಚಜನ್ಯ, ಮಲೆಗಳಲ್ಲಿ ಮದುಮಗಳು. ಜ್ಞಾನಪೀಠ, ಪದ್ಮಭೂಷಣ ಪ್ರಶಸ್ತಿ ಪಡೆದ ವೀರರು. ರಾಮಾಯಣ ದರ್ಶನವ ಜಗಕ್ಕೆಲ್ಲಾ ಮಾಡಿದರು!

ಯಾರೇ ನೀನು ಸುಂದರ ಚೆಲುವೆ ಒಬ್ಬಳೆ ನಿಂತಿರುವೆ, ಹಸಿರು ಸೀರೆ ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ ಹಾಡಿಗೆ ಬಾಲಗಕೋಟೆ ಜಿಲ್ಲೆಯ ಮುಧೋಳ ಪ್ರ್ಯಾಂತದಲ್ಲಿ 942ನೇ ವರ್ಷದಲ್ಲಿ ಜನಿಸಿ ಬಂದ ರನ್ನ ಕವಿಯು, ಕನ್ನಡ ಲೋಕದಲ್ಲಿ, ಗದಾಯುದ್ಧ ಕಾವ್ಯವ ಬರೆದ ಶಕ್ತಿಯ ಕವಿಯಲ್ಲಿ, ಆ ಪರಶುರಾಮ ಚರಿತೆ, ಚಕ್ರೇಶ್ವರ ಚರಿತೆಯು!

ಹೀಗೆ 30ಕ್ಕೂ ಅಧಿಕ ಟ್ರೆಂಡಿಂಗ್ ಹಾಡುಗಳ ದಾಟಿಯಲ್ಲಿ ಸಾಹಿತ್ಯ ರಚಿಸಿ ಕವಿಗಳ ಪರಿಚಯ ಮತ್ತು ವ್ಯಾಕರಣ ಸೂತ್ರಗಳನ್ನು ರವಿ ಹಲಕರ್ಣಿ ಅವರು ತುಂಬಾ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.

ಈ ಕುರಿತು ಶಿಕ್ಷಕ ರವಿ ಹಲಕರ್ಣಿ ‘ಈಟಿವಿ ಭಾರತ್​’ ಜೊತೆಗೆ ಮಾತನಾಡಿ, ಈಗಿನ ಮಕ್ಕಳು ಆಸಕ್ತಿ ಕಳೆದುಕೊಂಡು ಓದಿನಿಂದ ವಿಮುಖರಾಗುತ್ತಿದ್ದಾರೆ. ಆದರೆ, ಸಿನಿಮಾದ ಹಾಡುಗಳನ್ನು ರಾಗ-ತಾಳ ಬದ್ಧವಾಗಿ, ಸಾಹಿತ್ಯ ಒಂದು ಚೂರು ತಪ್ಪದೇ ಹಾಡುತ್ತಾರೆ. ಆದ್ದರಿಂದ ಮಕ್ಕಳ ಆಸಕ್ತಿಯನ್ನೇ ಬಳಸಿಕೊಂಡು ಕಳೆದ ಮೂರು ವರ್ಷಗಳಿಂದ ಈ ರೀತಿ ಪ್ರಯೋಗಕ್ಕೆ ಮುಂದಾಗಿದ್ದೇವೆ. ಕವಿ ಪರಿಚಯಕ್ಕೆ 6 ಅಂಕಗಳು ಇರುತ್ತವೆ. ಹಾಗಾಗಿ, ಟ್ರೆಂಡಿಂಗ್ ಹಾಡುಗಳಿಗೆ ಮಕ್ಕಳು ಕಳೆದು ಹೋಗುತ್ತಾರೆ. ಆ ನಿಟ್ಟಿನಲ್ಲಿ ಮಕ್ಕಳನ್ನು ಪರೀಕ್ಷೆಗೆ ತಯಾರು ಮಾಡುತ್ತಿದ್ದೇವೆ. ಇದಕ್ಕೆ ಒಳ್ಳೆಯ ಸ್ಪಂದನೆ ಸಿಗುತ್ತಿದೆ” ಎಂದರು.

teacher teaching poet introduction to students through film songs in belagavi

ಹಾಡುಗಳನ್ನು ಕವಿಪರಿಚಯ ರೂಪದಲ್ಲಿ ಮಾಡಿದ್ದು ಸಹಕಾರಿಯಾಗಿದೆ: “ಈಗ ರಿಲೀಸ್ ಆಗುವ ಹೊಸ ಹಾಡು ನಮ್ಮ ಬಾಯಲ್ಲಿ ಗುನಗುತ್ತಿರುತ್ತದೆ. ಅಂಥ ಕೆಲ ಹಾಡುಗಳನ್ನು ಕವಿಪರಿಚಯ ರೂಪದಲ್ಲಿ ಮಾಡಿದ್ದು ನಮಗೆ ತುಂಬಾ ಸಹಕಾರಿ ಆಗಿದೆ. ಊಟದ ಸಮಯದಲ್ಲಿ ನಾವೆಲ್ಲಾ ಗುಂಪಾಗಿ ಕುಳಿತುಕೊಂಡು ಈ ಹಾಡುಗಳನ್ನೆ ಹಾಡುತ್ತೇವೆ. ಇದರಿಂದ ಪರೀಕ್ಷೆಯಲ್ಲಿ ಸುಲಭವಾಗಿ ಬರೆದು 6 ಅಂಕ ಪಡೆಯಬಹುದು. ತುಂಬಾ ಎಂಜಾಯ್ ಮಾಡುತ್ತಾ ಎಸ್ಎಸ್ಎಲ್​ಸಿ ಪರೀಕ್ಷೆಗೆ ನಾವು ತಯಾರಾಗುತ್ತಿದ್ದೇವೆ” ಎನ್ನುತ್ತಾರೆ‌ ವಿದ್ಯಾರ್ಥಿನಿ ಸಹನಾ ಮುರಗೋಡ.

ಮತ್ತೋರ್ವ ವಿದ್ಯಾರ್ಥಿನಿ ಸವಿತಾ ಉಚಗಾಂವಕರ್ ಮಾತನಾಡಿ, “ಕವಿಪರಿಚಯ, ವ್ಯಾಕರಣ ಸೂತ್ರಗಳನ್ನು ಸಿನಿಮಾ ಹಾಡುಗಳ ಮೂಲಕ ಸುಲಭವಾಗಿ ನಮಗೆ ನೆನಪಿಟ್ಟುಕೊಳ್ಳುವಂತೆ ಮಾಡಿದ್ದಾರೆ. ಇದರಿಂದ ನಾವು ಯಾವುದೇ ರೀತಿ ಭಯ ಇಲ್ಲದೇ ಪರೀಕ್ಷೆ ಬರೆಯುತ್ತೇವೆ. ಪ್ರತಿಕ್ಷಣವೂ ತುಂಬಾ ಎಂಜಾಯ್ ಮಾಡುತ್ತಿದ್ದೇವೆ” ಎಂದು ಹರ್ಷ ವ್ಯಕ್ತಪಡಿಸಿದರು.

Source : https://www.etvbharat.com/kn/!state/teacher-teaching-poet-introduction-to-students-through-film-songs-in-belagavi-karnataka-news-kas25022103534

Leave a Reply

Your email address will not be published. Required fields are marked *