60 ವರ್ಷದ ಹಿಂದೆ ಕಳ್ಳತನ ಆರೋಪದಡಿ ಊರು ಬಿಟ್ಟಿದ್ದ ಪೂಜಾರಿ! ಈಗ ದೇಗುಲ ಸಮೀಪವೇ ‘ನನ್ನಿವಾಳ’ ದೇವರ ಚಿನ್ನ ಪತ್ತೆ!

ಹೈಲೈಟ್ಸ್‌:

  • ನನ್ನಿವಾಳ ಮ್ಯಾಸ ಬೇಡರ ಹಟ್ಟಿಯಲ್ಲಿ ಸಿನಿಮಾಕ್ಕೆ ಹೋಲುವ ಕತೆ.
  • ಕಾಣೆಯಾಗಿದ್ದ ಚಿನ್ನಾಭರಣಕ್ಕಾಗಿ ಬಡಿದಾಡಿ ಸತ್ತ ಪೂಜಾರಿ ಕುಟುಂಬ.
  • ಜೆಸಿಬಿ ಓಡಿಸುವಾಗ ಸಿಕ್ಕ ಬ್ರಿಟಿಷ್‌ ಕಾಲದ ತಿಜೂರಿ.

ಚಳ್ಳಕೆರೆ (ಚಿತ್ರದುರ್ಗ): ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿಯ ಬಂಗಾರ ದೇವರಹಟ್ಟಿ ಗ್ರಾಮದಲ್ಲಿ 60 ವರ್ಷಗಳ ಹಿಂದೆ ಕಳ್ಳತನವಾಗಿದೆ ಅಂದುಕೊಂಡಿದ್ದ ದೇವರ ಚಿನ್ನಾಭರಣವಿದ್ದ ಬ್ರಿಟಿಷ್‌ ಕಾಲದ ತಿಜೂರಿ ಪೆಟ್ಟಿಗೆ ಭಾನುವಾರ ಪತ್ತೆಯಾಗಿದೆ. ಒಂದೂವರೆ ಕೆಜಿಯಷ್ಟು ಬಂಗಾರದ ಪೂಜಾ ಸಾಮಗ್ರಿ ಇರುವ ತಿಜೂರಿ ಇದಾಗಿದ್ದು, ಜೆಸಿಬಿಯಿಂದ ಸ್ಥಳ ಸಮತಟ್ಟು ಮಾಡುವಾಗ ಸಿಕ್ಕಿದೆ. ಬುಡಕಟ್ಟು ದೇವರ ಆಭರಣದ ನಿಗೂಡ ಕಾಂತಾರ ಕತೆಯೊಂದು ಸುತ್ತಲೂ ಕುತೂಹಲಕ್ಕೆ ಕಾರಣವಾಗಿದೆ.

ಹಟ್ಟಿಯ ಯಜಮಾನರು ‘‘ಇದು ತುಕ್ಕು ಹಿಡಿದಿದೆ, ಗುಜುರಿಗೆ ಹಾಕಿದರಾಯಿತು’’ ಎಂದು ಹಾರೆಯಿಂದ ಮೀಟಿದಾಗ ಚಿನ್ನಾಭರಣ ಪತ್ತೆಯಾಗಿವೆ. ದಶಕಗಳಿಂದ ಸ್ವಚ್ಛಗೊಳಿಸದೆ ಹಾಗೆಯೇ ಇದ್ದ ಆಭರಣಗಳು ಈಗ ಹೊಳಪು ಕಳೆದುಕೊಂಡಿವೆ. ಆಕಸ್ಮಿಕವಾಗಿ ಕಾಣೆಯಾಗಿದ್ದ ಬಂಗಾರದ ಒಡವೆ ಹಿಂದೆ ನಡೆದಿರುವ ಕೊಲೆ ರಕ್ತಪಾತದ ಕತೆಯೂ ಇದರೊಂದಿಗೆ ಬೆಳಕಿಗೆ ಬಂದಿದೆ. ಇದು ದೇವರ ಬಂಗಾರ ಕದ್ದ ಎಂಬ ಆರೋಪ ಪೂಜಾರಿಯ ಮೇಲೆ ಹಾಕುವಂಥ ಕಥೆಯಿರುವ ಕೆಲವು ಸಿನಿಮಾ ಕಥೆಯನ್ನು ಹೋಲುತ್ತದೆ.

ನನ್ನಿವಾಳ ಗ್ರಾಮದಲ್ಲಿ ದೊಡ್ಡದಾದ ಬೆಟ್ಟವಿದೆ. ನೋಡಲು ಏಕಶಿಲಾ ಬೆಟ್ಟದಂತೆ ಕಾಣುವ ಇದು ಚಳ್ಳಕೆರೆ – ಚಿತ್ರದುರ್ಗ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಸಾಗುವಾಗ ದೂರದಿಂದಲೇ ಕಾಣುತ್ತದೆ. ಹಲವಾರು ದಶಕಗಳ ಹಿಂದಿನಿಂದಲೂ ಈ ರಸ್ತೆಯಲ್ಲಿ ಪ್ರಯಾಣಿಸುವಾಗ ಕೆಲವು ಹಿರಿಯರು, ಕಿರಿಯರು ನನ್ನಿವಾಳದ ಬೆಟ್ಟದ ಕೆಳಗೆ ಕೈ ತೋರಿಸಿ ಆ ಬೆಟ್ಟದ ಕೆಳಗೆ ಬಂಗಾರವಿದೆ ಎಂದು ಹೇಳುತ್ತಿದ್ದರು. ಬಹುಶಃ ಈಗ ಸಿಕ್ಕಿರುವ ಬಂಗಾರದ ಬಗ್ಗೆಯೇ ಆಗಿನ ಜನರು ಮಾತನಾಡಿಕೊಳ್ಳುತ್ತಿದ್ದರೇನೋ ಎಂದೆನಿಸುತ್ತದೆ.

ಹಟ್ಟಿಯ ದೇವರನ್ನು ಪೂಜಿಸುವವರು ಇವರೇ

ನನ್ನಿವಾಳ ಗ್ರಾಪಂ ವ್ಯಾಪ್ತಿಯಲ್ಲಿಇರುವ ಮ್ಯಾಸ ಬೇಡರ 34 ಹಟ್ಟಿಗಳಲ್ಲಿ ಬಂಗಾರ ದೇವರ ಹಟ್ಟಿಯೂ ಒಂದು. ಈಗ ಸುಮಾರು ಹತ್ತು ಸಾವರ ಜನಸಂಖ್ಯೆ ಇರುವ ನನ್ನಿವಾಳದಲ್ಲಿ ಶೇಕಡಾ 75 ರಷ್ಟು ಮ್ಯಾಸಬೇಡರಿದ್ದಾರೆ. ಅಮೃತ್‌ ಮಹಲ್‌ ಕಾವಲ್‌ ಪಕ್ಕದಲ್ಲಿ ತಲತಲಾಂತರದಿಂದ ಪಶು ಸಂಗೋಪನೆ ಮಾಡಿಕೊಂಡು ಬದುಕುವ ಬುಡಕಟ್ಟುಗಳಲ್ಲಿ ಒಂದಾಗಿರುವ ಮ್ಯಾಸ ಬೇಡರು. ಇವರ ಗುಡಿಸಲು ಹಾಗೂ ದೇವಸ್ಥಾನ ಎಲ್ಲವೂ ಸ್ಥಳೀಯವಾಗಿ ಸಿಗುವ ಕಮ್ಸಿ ಹುಲ್ಲಿನಿಂದ ಬಣವೆಯಂತೆ ಕಟ್ಟಿಕೊಳ್ಳುವುದು ಪರಂಪರೆ. ಇವರೇ ಈ ಹಟ್ಟಿಯ ದೇವಸ್ಥಾನವನ್ನು ಕಟ್ಟಿದ್ದವರು.

ದೇಗುಲ ಆಭರಣದ ಇತಿಹಾಸ!

ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿಯಂತೆ ಚಿನ್ನಾಭರಣವನ್ನು ಜಾತ್ರೆಯಲ್ಲಿದೇವರಿಗೆ ಅಲಂಕಾರ ಮಾಡಿ ನಂತರ, ಲಾಕರ್‌ನಲ್ಲಿ ತೆಗೆದಿಡಲಾಗುತ್ತಿತ್ತು. ದೇವರ ಆಭರಣಗಳನ್ನು ವಾರ್ಷಿಕ ಪೂಜೆ ಹೊರತಾಗಿ ಯಾರೂ ನೋಡಬಾರದು ಎನ್ನುವುದು ಬುಡಕಟ್ಟು ಜನರ ನಂಬುಗೆ. ಆ ಪ್ರಕಾರ ಅಂದಿನ ಪೂಜಾರಿ, ಕಬ್ಬಿಣದ ಲಾಕರ್‌ನಲ್ಲಿ ಚಿನ್ನಾಭರಣ ಇಟ್ಟಿದ್ದ. ಪ್ರತೀ ವರ್ಷವೂ ಇಲ್ಲಿಜಾತ್ರೆಗಳು ನಡೆಯುತ್ತವೆ ಎಂದೇನೂ ಇಲ್ಲ. ಬರಗಾಲ, ಕುಟುಂಬಗಳ ವೈಮನಸ್ಯದ ಕಾರಣ ಕೆಲವೊಮ್ಮೆ ಹತ್ತಾರು ವರ್ಷಗಳ ಬಳಿಕ ದೇವರ ಜಾತ್ರೆ ನಡೆಯುತ್ತದೆ. ಅಂಥ ಸಂದರ್ಭದಲ್ಲಿ ತಿಜೂರಿ ಹೂತಿಟ್ಟ ಇಟ್ಟ ಗುಡಿಸಲು ಒಂದರ ಸುತ್ತ ಹುಲ್ಲುಬೆಳೆದು, ಕಾಣೆಯಾಗಿತ್ತು.

ಪೂಜಾರಿ ಮೇಲೆ ಬಂದಿತ್ತು ಆರೋಪ!

ಹತ್ತಾರು ವರ್ಷಗಳ ಬಳಿಕ ಜಾತ್ರೆಗೆ ದೇವರ ವಡವೆಯನ್ನು ಕೇಳಿದರೆ, ಪೂಜಾರಿಗೆ ಸ್ಥಳ ಗುರುತಿಸುವುದೇ ಸಾಧ್ಯವಾಗಲಿಲ್ಲ. ಇದೇ ವಿಚಾರ ಗುಡಿಯ ಪೂಜಾರಿ ಮತ್ತು ಅಣ್ಣ-ತಮ್ಮಂದಿರು, ಯಜಮಾನರ ನಡುವೆ ಗಲಾಟೆಗಳು ನಡೆದಿದ್ದವು. ಪೂಜಾರಿಯೇ ಆಭರಣ ಕಳ್ಳತನ ಮಾಡಿದ್ದಾರೆಂದು ವೈಮನಸ್ಯ ಉಂಟಾಗಿ, ಹೊಡೆದಾಟಗಳು ನಡೆಯತೊಡಗಿದವು. ಕಿರುಕುಳ, ವ್ಯಾಜ್ಯಗಳಿಗೆ ಹೆದರಿ ಕಳ್ಳತನ ಆರೋಪ ಹೊತ್ತುಕೊಂಡು ಪೂಜಾರಿ ಮತ್ತು ಅವರ ಮಕ್ಕಳು ಹಟ್ಟಿ ತೊರೆದು ಓಡಿ ಹೋಗಿದ್ದರು. ಈಗ ಗಲಾಟೆ ಮಾಡಿದವರು ಯಾರೂ ಬದುಕುಳಿದಿಲ್ಲ. ಆ ಘಟನೆಯ ಬಗ್ಗೆ ಹೇಳುವಂಥವರೂ ಈಗ ಯಾರೂ ಉಳಿದಿಲ್ಲ. ಇದೀಗ ಇಲ್ಲಿರುವವರಿಗೆ ಯಾರಿಗೂ ಸರಿಯಾದ ವಿಷಯ ಗೊತ್ತಿಲ್ಲ.

ದೇವರ ಲಾಕರ್‌ನಲ್ಲಿ ಏನಿದೆ?

ಪತ್ತೆಯಾದ ಲಾಕರ್‌ನಲ್ಲಿದೇವರ ಒಡವೆಗಳು, ನಾಗರ ಹೆಡೆ, ರಾಗಿ ಪೂಜಾ ಸಾಮಗ್ರಿಗಳು, ದೇವರ ದೀಪಗಳು, ವಿಗ್ರಹ, ನಾಣ್ಯಗಳು, ಭಕ್ತರು ಅರ್ಪಿಸಿದ ಕಾಣಿಕೆಗಳು ಇವೆ. ಲಾಕರ್‌ ಮಣ್ಣಿನಿಂದ ಧೂಳು ಹಿಡಿದಿರುವುದರಿಂದ ಪಾಲಿಷ್‌ ಮಾಡಿ ಮತ್ತೆ ದೇವರಿಗೆ ಮರು ಅರ್ಪಣೆ ಮಾಡಲಾಗುತ್ತದೆ ಎನ್ನುತ್ತಾರೆ ಹಟ್ಟಿಯ ಜನರು.

Source : Vijaykarnataka

Leave a Reply

Your email address will not be published. Required fields are marked *