Rugby Player Shweta Shahi: ಬಿಹಾರದ ನಳಂದ ಜಿಲ್ಲೆಯ ರೈತ ಕುಟುಂಬದ ರಗ್ಬಿ ಆಟಗಾರ್ತಿ ಶ್ವೇತಾ ಶಾಹಿ ಅವರು 4 ಬೆಳ್ಳಿ, 2 ಕಂಚು ಸೇರಿದಂತೆ 9 ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ.

ನಳಂದ (ಬಿಹಾರ): ರಗ್ಬಿ ಆಟದಲ್ಲಿ ಬಿಹಾರದ ಶ್ವೇತಾ ಶಾಹಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಬಿಹಾರದಲ್ಲಿ ರಗ್ಬಿ ಗರ್ಲ್ ಎಂದೇ ಹೆಸರು ಮಾಡಿರುವ 23 ವರ್ಷದ ಈ ಸಾಧಕಿ, ಚೆನ್ನೈನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದಾರೆ. ರೈತ ಕುಟುಂಬದ ಈ ಪಟು ತಮ್ಮ ಪರಿಶ್ರಮದಿಂದ ದೊಡ್ಡ ಸಾಧನೆ ಮಾಡಿ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ.
ಶ್ವೇತಾ ಶಾಹಿ ಅವರು ಮೂಲತಃ ನಳಂದ ಜಿಲ್ಲೆಯ ಸಿಲಾವ್ ಬ್ಲಾಕ್ನ ಭದರಿ ಗ್ರಾಮದ ನಿವಾಸಿ ರೈತ ಸುಜಿತ್ ಕುಮಾರ್ ಶಾಹಿ ಅವರ ಪುತ್ರಿ. ಮಧ್ಯಮ ವರ್ಗದ ಕುಟುಂಬದ ಸುಜಿತ್ ಕುಮಾರ್ ಅವರಿಗೆ ಇಬ್ಬರು ಪುತ್ರಿಯರು ಮತ್ತು ಮೂವರು ಪುತ್ರರು ಸೇರಿದಂತೆ 5 ಮಕ್ಕಳಿದ್ದಾರೆ. ಈ ಪೈಕಿ ಶ್ವೇತಾ ಶಾಹಿ ಎರಡನೇ ಮಗಳು.
ಕ್ರೀಡೆಯಲ್ಲಿ ಶ್ವೇತಾ ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕ ಕ್ರಮೇಣವಾಗಿ ಬ್ಲಾಕ್ನಿಂದ ಜಿಲ್ಲಾ ಮಟ್ಟ, ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿದವರು. ಅಥ್ಲೀಟ್ನಲ್ಲಿ 2010ರಿಂದ 2012ರವರೆಗೆ ರಾಜ್ಯ ಮಟ್ಟದ ಕ್ರೀಡಾಪಟುವಾಗಿ ಆಡಿದ್ದಾರೆ. 2013ರಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಬಿಹಾರದ ಮುಜಾಫರ್ಪುರಕ್ಕೆ ಹೋಗಿದ್ದರು. ಅದೇ ಸಮಯದಲ್ಲಿ ಬಿಹಾರ ರಗ್ಬಿ ಅಸೋಸಿಯೇಶನ್ನ ಕಾರ್ಯದರ್ಶಿ ಪಂಕಜ್ ಕುಮಾರ್ ಜ್ಯೋತಿ ಅವರನ್ನು ಭೇಟಿಯಾಗಿದ್ದರು. ಅಲ್ಲಿಂದ ರಗ್ಬಿ ಆಟದತ್ತ ಶ್ವೇತಾ ಅವರ ಚಿತ್ತ ಬೆಳೆಯಿತು.
ರಗ್ಬಿ ಆಡಲು ಆಫರ್: ಮುಜಾಫರ್ಪುರದಲ್ಲಿ ಭೇಟಿಯಾದ ಬಿಹಾರದ ರಗ್ಬಿ ಕಾರ್ಯದರ್ಶಿ ಪಂಕಜ್ ಕುಮಾರ್ ಅವರು ಒಲಿಂಪಿಕ್ಸ್ನಲ್ಲಿ ರಗ್ಬಿ ಆಟದಲ್ಲಿ ಭಾಗವಹಿಸುವಂತೆ ಶ್ವೇತಾ ಅವರಿಗೆ ಸಲಹೆ ನೀಡಿದರು. ರಗ್ಬಿ ಟ್ರಯಲ್ ಭುವನೇಶ್ವರದಲ್ಲಿ ನಡೆಯಬೇಕಿತ್ತು. ರಗ್ಬಿ ಆಡಲು ಶ್ವೇತಾ ಒಪ್ಪಿದಾಗ ಪಾಟ್ನಾಗೆ ಅವರನ್ನು ಪಂಕಜ್ ಕುಮಾರ್ ಕರೆಸಿಕೊಂಡರು. ಎರಡು ದಿನಗಳ ತರಬೇತಿ ಬಳಿಕ ಭುವನೇಶ್ವರಕ್ಕೆ ಕರೆದೊಯ್ದರು. ಅಲ್ಲಿ ರಗ್ಬಿ ಇಂಡಿಯಾದ ಮ್ಯಾನೇಜರ್ ನಾಸಿರ್ ಹುಸೇನ್ ಅವರನ್ನು ಭೇಟಿಯಾದರು. ಅಲ್ಲದೇ, ತರಬೇತಿ ಪೂರ್ಣಗೊಳಿಸಿದ ಬಳಿಕ ರಗ್ಬಿ ಆಟವನ್ನು ಅರ್ಥಮಾಡಿಕೊಳ್ಳಲು ಮತ್ತು ಅದರ ಅಭ್ಯಾಸದಲ್ಲಿ ಶ್ವೇತಾ ತೊಡಗಿದರು.
ಭುವನೇಶ್ವರದಿಂದ ಶ್ವೇತಾ ಹಳ್ಳಿಗೆ ಹಿಂದಿರುಗಿದಾಗ ತನ್ನ ತಂದೆ ಮತ್ತು ಮೂವರು ಸಹೋದರರೊಂದಿಗೆ ರಗ್ಬಿ ಅಭ್ಯಾಸ ಮಾಡಲು ಪ್ರಾರಂಭಿಸಿದರು. ತನ್ನ ತಂದೆಯೊಂದಿಗೆ ಓಟದ ಅಭ್ಯಾಸ ಮಾಡುವಾಗ ಗ್ರಾಮದ ಜನರು ವ್ಯಂಗ್ಯವಾಡುತ್ತಿದ್ದರು. ಆದರೆ, ಮನೆಯ ಆರ್ಥಿಕ ಸ್ಥಿತಿ ಸರಿಯಿಲ್ಲದ ಸಂದರ್ಭದಲ್ಲಿ ತಂದೆ ಅವರಿಗೆ ಕೃಷಿಯಲ್ಲಿ ಸಹಾಯ ಮಾಡುತ್ತಲೇ ಶ್ವೇತಾ, ಕ್ರೀಡೆಯಲ್ಲಿ ಉನ್ನತ ಮಟ್ಟಕ್ಕೆ ಬೆಳೆದು ಅಂದು ವ್ಯಂಗ್ಯ ಮಾಡುತ್ತಿದ್ದ ಜನರಿಗೆ ಉತ್ತರ ನೀಡಿದ್ದಲ್ಲದೇ, ಅಪ್ಪನ ಗೌರವ ಹೆಚ್ಚಿಸಿದ್ದಾರೆ.
ಯೂಟ್ಯೂಬ್ ನೋಡಿ ಆಟ ಸುಧಾರಣೆ: 2015ರಲ್ಲಿ ಶ್ವೇತಾ ತಮ್ಮ 16ನೇ ವಯಸ್ಸಿನಲ್ಲಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಚೊಚ್ಚಲ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿ ಗಮನ ಸೆಳೆದರು. ಇದಾದ ನಂತರ ಹಿಂತಿರುಗಿ ನೋಡದ ಶ್ವೇತಾ ಸತತ ಪರಿಶ್ರಮದಿಂದ ಮೇಲೆ 4 ಬೆಳ್ಳಿ, 2 ಕಂಚು ಸೇರಿದಂತೆ 9 ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ.
ಮೊದಲ ಬಾರಿಗೆ ರಾಷ್ಟ್ರೀಯ ಕ್ರೀಡಾಕೂಟವನ್ನು ಆಡಲು ಹೋದಾಗ ಸ್ವಲ್ಪ ಆತಂಕಕ್ಕೊಳಗಾಗಿದ್ದೆ. ಆದರೆ, ಕುಟುಂಬ ಹಾಗೂ ತರಬೇತುದಾರರ ಪ್ರೋತ್ಸಾಹದಿಂದ ಈ ಮಟ್ಟದ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಶ್ವೇತಾ ಹೇಳುತ್ತಾರೆ. ಇಷ್ಟೇ ಅಲ್ಲ, ತಮ್ಮ ಆಟವನ್ನು ಸುಧಾರಿಸುವಲ್ಲಿ ಯೂಟ್ಯೂಬ್ ಕೂಡ ಪ್ರಮುಖ ಪಾತ್ರ ವಹಿಸಿದೆ. ಯೂಟ್ಯೂಟ್ ನೋಡಿ ದೇಶ-ವಿದೇಶದ ಅತ್ಯುತ್ತಮ ಆಟಗಾರರ ಆಟವನ್ನು ಅರ್ಥಮಾಡಿಕೊಂಡೆ. ಇದರಿಂದ ಬಹಳಷ್ಟು ಕಲಿತಿದ್ದು, ತುಂಬಾ ಪ್ರಯೋಜನವಾಗಿದೆ ಎಂದು ತಿಳಿಸಿದರು.
ಪಿಎಸ್ಐಗೆ ಹುದ್ದೆಗೆ ಆಯ್ಕೆ: ಪ್ರಸ್ತುತ ಪಂಜಾಬ್ ವೃತ್ತಿಪರ ವಿಶ್ವವಿದ್ಯಾಲಯದಲ್ಲಿ ಎಂ.ಪಿ.ಇಡಿ ಓದುತ್ತಿರುವ ಶ್ವೇತಾ ಶಾಹಿ ಅವರು, ರಾಜ್ಯ ಸರ್ಕಾರದ ‘ಪದಕ ತನ್ನಿ, ಉದ್ಯೋಗ ಪಡೆಯಿರಿ’ ಯೋಜನೆಯಡಿ ಬಿಹಾರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಶೀಘ್ರವೇ ಶ್ವೇತಾ ಕರ್ತವ್ಯಕ್ಕೆ ಸೇರ್ಪಡೆಯಾಗುವ ನಿರೀಕ್ಷೆ ಇದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 0