ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಆ. 04 : ಉಪನ್ಯಾಸಕರು ತರಗತಿಗಳಲ್ಲಿ ವರ್ಷವಿಡೀ ಬೋಧನೆ ಮಾಡಿದ್ದಕ್ಕೆ ಕೊನೆಯಲ್ಲಿ ಪ್ರತಿಫಲ ಫಲಿಸುವುದು ಪ್ರತಿಭಾ ಪುರಸ್ಕಾರಕ್ಕೆ ಭಾಜನರಾದ ನಿಮ್ಮಂಥ ವಿದ್ಯಾರ್ಥಿಗಳಿಂದ ಎಂಬುದನ್ನು ವಿದ್ಯಾರ್ಥಿಗಳು ಮನಗಾಣಬೇಕು. ಇಂತಹ ಸಾರ್ಥಕ ಕ್ಷಣಕ್ಕಾಗಿ ಪ್ರತಿ ಉಪನ್ಯಾಸಕ ಹಂಬಲಿಸುತ್ತಾನೆ ಎಂದು ಚಿತ್ರದುರ್ಗ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಬಿ. ಆರ್. ಮಲ್ಲೇಶ್ ತಿಳಿಸಿದರು.
ಚಿತ್ರದುರ್ಗ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಮಧ್ಯಾಹ್ನ ಭೌತಶಾಸ್ತ್ರ ಉಪನ್ಯಾಸಕರ ವೇದಿಕೆ ಹಮ್ಮಿಕೊಂಡಿದ್ದ “ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತರಿಗೆ ಸನ್ಮಾನ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇದೇ ವೇಳೆ ಕಾರ್ಯಕ್ರಮ ಉದ್ಘಾಟಿಸಿದ ಚಿತ್ರದುರ್ಗ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ನಿರ್ದೇಶಕರಾದ ಆರ್. ಪುಟ್ಟಸ್ವಾಮಿ ಮಾತನಾಡಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಎಲ್ಲರ ಸಮ್ಮುಖದಲ್ಲಿ ಸನ್ಮಾನಿಸುವುದು ಇನ್ನಷ್ಟು ಸಾಧಿಸಲು ಪ್ರೇರಣೆ ನೀಡಿದಂತಾಗುತ್ತದೆ. ಈ ರೀತಿಯ ಕಾರ್ಯಕ್ರಮಗಳನ್ನು ಎಲ್ಲಾ ವಿಷಯವಾರು ವೇದಿಕೆಗಳು ಹಮ್ಮಿಕೊಳ್ಳುವ ಮೂಲಕ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೌತಶಾಸ್ತ್ರ ಉಪನ್ಯಾಸಕರ ವೇದಿಕೆಯ ಅಧ್ಯಕ್ಷರು ಹಾಗೂ ಪ್ರಾಂಶುಪಾಲರಾದ ಕೆ. ನಾಗಣ್ಣ ವಹಿಸಿದ್ದರು. ವೇದಿಕೆಯಲ್ಲಿ ಚಿತ್ರದುರ್ಗ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಎಸ್. ದೇವೇಂದ್ರಪ್ಪ, ಪ್ರಾಂಶುಪಾಲರಾದ ಕೆ.ಹೆಚ್. ರಾಜು ಹಾಗೂ ನರಸಿಂಹಮೂರ್ತಿ ಉಪಸ್ಥಿತರಿದ್ದರು. ಉಪನ್ಯಾಸಕ ಉಮೇಶ್ ಪ್ರಾರ್ಥಿಸಿದರೆ, ಉಪನ್ಯಾಸಕ ಸುರೇಶ್ ಮುರನಾಳ್ ಸ್ವಾಗತಿಸಿದರು,ಪ್ರಾಂಶುಪಾಲರಾದ ವಿಶ್ವನಾಥ್ ವಂದಿಸಿದರು. ಭೌತಶಾಸ್ತ್ರ ವೇದಿಕೆಯ ಕಾರ್ಯದರ್ಶಿ ಹಾಗೂ ಉಪನ್ಯಾಸಕ ವಿಜಯಕುಮಾರ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.