ಚಿತ್ರದುರ್ಗ | ರಾಜ್ಯಪಾಲರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡುತ್ತಿರುವ ಕಾಂಗ್ರೆಸ್ಸಿಗರ ವಿರುದ್ದ ಬಿಜೆಪಿಯಿಂದ ಪ್ರತಿಭಟನೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಆ. 22 : ಮುಡಾ ಹಗರಣದಲ್ಲಿ ಸಿಲುಕಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಂಡತನ ಪ್ರದರ್ಶಿಸುವ ಬದಲು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಅದನ್ನು ಬಿಟ್ಟು ರಾಜ್ಯಪಾಲರನ್ನು ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ ಎಂದು ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಟಿ.ಸುರೇಶ್‍ಸಿದ್ದಾಪುರ ತಿಳಿಸಿದ್ದಾರೆ.

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವಿರುದ್ದ ಪ್ರಾಸಿಕ್ಯೂಷನ್‍ಗೆ ಅವಕಾಶ ನೀಡಿರುವ ರಾಜ್ಯಪಾಲರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡುತ್ತಿರುವ ಕಾಂಗ್ರೆಸ್ ವಿರುದ್ದ ಬಿಜೆಪಿ.ಯಿಂದ ಒನಕೆ ಓಬವ್ವ ವೃತ್ತದಲ್ಲಿ ಗುರುವಾರ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು. ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ರಾಜ್ಯಪಾಲ ಹಂಸರಾಜ್ ಭಾರಧ್ವಾಜ್‍ರವರು ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿದಾಗ ನಾವುಗಳ್ಯಾರು ಪ್ರತಿಭಟನೆ ಮಾಡದೆ ಕಾನೂನನ್ನು ಗೌರವಿಸಿದೆವು. ಈಗಿನ ಕಾಂಗ್ರೆಸ್ ಸರ್ಕಾರದ ಸಚಿವರು ಸಿದ್ದರಾಮಯ್ಯನವರು ಯಾವುದೇ ತಪ್ಪು ಮಾಡಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು?

ಮುಡಾದಲ್ಲಿ ಹಗರಣವಾಗಿರುವುದನ್ನು ಒಪ್ಪಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿದು ಕಾನೂನು ರೀತಿಯಲ್ಲಿ ಹೋರಾಟ ಮಾಡಲಿ. ಅದನ್ನು ಬಿಟ್ಟು ರಾಜ್ಯಪಾಲರ ವಿರುದ್ದ ಸಂವಿಧಾನಭಾಹಿರ ಮಾತುಗಳನ್ನಾಡುವುದು ಸರಿಯಲ್ಲ. ಐವಾನ್ ಡಿಸೋಜ,ದಿನೇಶ್‍ಗುಂಡೂರಾವ್, ಕೃಷ್ಣಭೈರೇಗೌಡ ಇನ್ನು ಅನೇಕ ನಾಯಕರುಗಳು ಹೀನಾಯ ಪದಗಳನ್ನು ಬಳಸುವುದನ್ನು ನಿಲ್ಲಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.

ಪ್ರಧಾನ ಕಾರ್ಯದರ್ಶಿ ಸಂಪತ್ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಮೂರು ತಿಂಗಳಷ್ಟರೊಳಗೆ ನಾನಾ ರೀತಿಯ ಹಗರಣಗಳನ್ನು ಎಸಗಿರುವುದನ್ನು ನೋಡಿದರೆ ಆಲಿಬಾಬು ಮತ್ತು ನಲವತ್ತು ಕಳ್ಳರು ಎನ್ನುವಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್‍ಗೆ ಅವಕಾಶ ನೀಡಿರುವುದನ್ನು ಸಹಿಸಿಕೊಳ್ಳಲು ಆಗದ ಕಾಂಗ್ರೆಸ್ ನಾಯಕರುಗಳು ರಾಜ್ಯಪಾಲರ ಬಗ್ಗೆ ಅಗೌರವದ ಮಾತುಗಳನ್ನಾಡುತ್ತಿದ್ದಾರೆ. ದಲಿತ ವಿರೋಧಿ ಕಾಂಗ್ರೆಸ್‍ನಲ್ಲಿ ಒಬ್ಬರಿಗಿಂತ ಒಬ್ಬರು ಹಗರಣಗಳನ್ನು ಎಸಗುವುದರಲ್ಲಿ ನಿಸ್ಸೀಮರು. ಐವಾನ್ ಡಿಸೋಜರನ್ನು ಕೂಡಲೆ ಬಂಧಿಸಬೇಕೆಂದು ಒತ್ತಾಯಿಸಿದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ ಮಾತನಾಡುತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಕಳಂಕಬಂದಿರುವುದರಿಂದ ಕೂಡಲೆ ರಾಜೀನಾಮೆ ನೀಡಬೇಕು. ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗಲು ಅಂದಿನ ರಾಜ್ಯಪಾಲರು ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿದಾಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ರಾಜೀನಾಮೆಗೆ ಒತ್ತಡ ಹೇರಿದ್ದನ್ನು ಮರೆತಂತಿದೆ. ಯಾವುದೇ ಕಪ್ಪುಚುಕ್ಕೆಯಿಲ್ಲದೆ ಆಡಳಿತ ನಡೆಸುತ್ತಿದ್ದೇನೆಂದು ಹೇಳಿಕೊಳ್ಳುತ್ತಿರುವ ಸಿದ್ದರಾಮಯ್ಯನವರು ಮೈತುಂಬ ಕಳಂಕ ಮೆತ್ತಿಕೊಂಡಿರುವುದರಿಂದ ತಕ್ಷಣವೆ ಅಧಿಕಾರದಿಂದ ಕೆಳಗಿಳಿದು ವಿಚಾರಣೆಗೆ ಸಹಕರಿಸಬೇಕೆಂದು ಆಗ್ರಹಿಸಿದರು.

ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಕಾಯಿ ರಾಂದಾಸ್, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್‍ಯಾದವ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ವಕ್ತಾರ ನಾಗರಾಜ್‍ಬೇದ್ರೆ,ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚಂದ್ರು, ಭಾರ್ಗವಿ ದ್ರಾವಿಡ್, ನಂದಿ ನಾಗರಾಜ್,ಬಸಮ್ಮ, ವೀರೇಶ್, ಕಿರಣ್, ವೀಣ, ನಗರಸಭೆ ಸದಸ್ಯ ಸುರೇಶ್, ಶಂಭು ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Views: 0

Leave a Reply

Your email address will not be published. Required fields are marked *