ಬೆಳೆ ಸಮೀಕ್ಷಾ ವರದಿ ಮಾಹಿತಿ ನೀಡುವಲ್ಲಿ ಪಿ.ಡಿ.ಓ.ಗಳ ಬೇಜವಾಬ್ದಾರಿತನ ವಿರೋಧಿಸಿ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಪ್ರತಿಭಟನೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜು. 24 : ಬೆಳೆ ಸಮೀಕ್ಷಾ ವರದಿಯನ್ನು ತಯಾರಿಸುವಲ್ಲಿ ನೀರಾವರಿ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡಿರುವ ದೊಡ್ಡಸಿದ್ದವ್ವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪಿ.ಡಿ.ಓ.ಗಳು ವಿಮಾ ಕಂಪನಿಗಳಿಗೆ ಕಳಿಸಿ ಬೇಜವಾಬ್ದಾರಿತನ ತೋರಿರುವುದರ ವಿರುದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಕಚೇರಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ನೀರಾವರಿ ಪ್ರದೇಶಗಳಲ್ಲಿ ಬೆಳೆ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿರುವ ಪಿ.ಡಿ.ಓ.ಗಳು ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆ ಹಾನಿಯಾಗಿರುವ ಮಾಹಿತಿಯನ್ನು ವಿಮಾ ಕಂಪನಿಗಳಿಗೆ ಕಳಿಸಿದ್ದರೆ ರೈತರಿಗೆ ಪರಿಹಾರ ಸಿಗುತ್ತಿತ್ತು. ಸಿಟು+೫೦ ಬೆಲೆ ನೀತಿಯ ಕೆಳಗೆ ಬೆಲೆ ಭದ್ರತೆ ಕಾಯ್ದೆ ಜಾರಿಗೊಳಿಸುವವರೆಗೂ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಸ್ವಯಂ ವೆಚ್ಚ ಯೋಜನೆಯನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು. ಮತ್ತು ಆರ್.ಆರ್.ನಂಬರ್‌ಗಳಿಗೆ ಆಧಾರ್ ನಂಬರ್ ಜೋಡಣೆ ಮಾಡುವಂತೆ ಹೊರಡಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯಬೇಕೆಂದು ಪ್ರತಿಭಟನಾನಿರತ ರೈತರು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಕಾಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ ರೈತರ ಕೃಷಿಗೆ ಬಹುಮುಖ್ಯವಾಗಿ ಬೇಕಾಗಿರುವ ನೀರು ಹಾಗೂ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಿದರೆ ಎಲ್ಲಾ ಸಬ್ಸಿಡಿಗಳನ್ನು ಕೈಬಿಡುತ್ತೇವೆ. ಎಲ್ಲಿಯವರೆಗೂ ಈ ಸೌಕರ್ಯಗಳನ್ನು ಒದಗಿಸುವುದಿಲ್ಲವೋ ಅಲ್ಲಿಯತನಕ ಆರ್.ಆರ್.ನಂಬರ್‌ಗೆ ಆಧಾರ್ ಜೋಡಣೆ ಮಾಡುವುದಿಲ್ಲವೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆ ವೈದ್ಯರುಗಳ ಮೇಲೆ ಹಲ್ಲೆ ಮಾಡಿದವರಿಗೆ ಮೂರು ವರ್ಷ ಜೈಲು, ಐವತ್ತು ಸಾವಿರ ರೂ.ಗಳ ದಂಡ ವಿಧಿಸುವುದಾಗಿ ಶಾಸಕಾಂಗ ಸಭೆಯಲ್ಲಿ ಸಚಿವ ಸಂಪುಟ ತೀರ್ಮಾನಿಸಿದ್ದು, ಸದ್ಯದಲ್ಲಿಯೇ ಕಾಯ್ದೆ ಜಾರಿಯಾಗಲಿದೆ. ಆರೋಗ್ಯ ಸಿಬ್ಬಂದಿಗಳು ಎಷ್ಟು ಪರಿಣಿತರು ಎನ್ನುವುದನ್ನು ಪ್ರತಿ ವರ್ಷವೂ ತಪಾಸಣೆ ನಡೆಸಬೇಕು. ಕಾಪಿ ಹೊಡೆದು ಲಂಚ ಕೊಟ್ಟು ಸರ್ಟಿಫಿಕೇಟ್‌ಗಳನ್ನು ಪಡೆದುಕೊಂಡಿರುವ ಸಾಕಷ್ಟು ವೈದ್ಯರುಗಳು ಈಗಲೂ ಇರುವುದರಿಂದ ಆಸ್ಪತ್ರೆಗೆ ಬರುವ ಬಡ ರೋಗಿಗಳು ಈಗಲೂ ಉಳಿಸಿಕೊಳ್ಳಲು ಆಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಕೇಳಿದಷ್ಟು ಹಣ ಕೊಟ್ಟು ಬರೆದುಕೊಟ್ಟಂತ ಔಷಧಿಗಳನ್ನೆಲ್ಲಾ ತಂದರೂ ಕೊನೆಗೆ ಹೆಣ ಹಾಕಿಕೊಂಡು ಮನೆಗೆ ಹೋಗುವ ಹೀನ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತಹ ಸಂದರ್ಭಗಳಲ್ಲಿ ವೈದ್ಯರುಗಳ ಮೇಲೆ ಹಲ್ಲೆ ಮಾಡದೇ ಇರುತ್ತಾರೆಯೇ ಎಂದು ಖಾರವಾಗಿ ಈಚಘಟ್ಟದ ಸಿದ್ದವೀರಪ್ಪ ಪ್ರಶ್ನಿಸಿದರು?

ಸರ್ಕಾರದ ನಿಯಮಗಳನ್ನು ಮೀರಿ ಖಾಸಗಿ ಶಾಲೆಗಳಲ್ಲಿ ಮಕ್ಕಳಿಂದ ಡೊನೇಷನ್ ಪಡೆಯಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಎಷ್ಟು ಶುಲ್ಕವಿದೆಯೋ ಅಷ್ಠೆ ಶುಲ್ಕವನ್ನು ಪಡೆದು ಶಿಕ್ಷಣ ನೀಡಬೇಕು. ಈ ಸಂಬಂಧ ಜಿಲ್ಲಾಧಿಕಾರಿ ಜೊತೆ ಹಲವಾರು ಸಭೆ ನಡೆಸಿದ್ದೇವೆ. ಆದರೂ ಖಾಸಗಿ ಶಾಲೆಯವರು ಪೋಷಕರುಗಳಿಂದ ಹಣ ಸುಲಿಗೆ ಮಾಡುತ್ತಿರುವುದು ಇನ್ನು ನಿಂತಿಲ್ಲ ಎಂದು ಆಪಾದಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ಆರ್.ಬಿ.ನಿಜಲಿಂಗಪ್ಪ, ಹನುಮಂತರೆಡ್ಡಿ ಚಂದ್ರಮೌಳಿ, ಎಂ.ಟಿ.ಸತೀಶ್‌ರೆಡ್ಡಿ, ಎಂ.ಬಸವರಾಜಪ್ಪ, ತಿಮ್ಮಾರೆಡ್ಡಿ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *