ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ,ಜು.23 : ವಾಣಿಜ್ಯ ವಾಹನಗಳಿಗೆ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸುವ ಆದೇಶವನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಟ್ಯಾಕ್ಸಿ ಚಾಲಕರ ಸಂಘದವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕೇಂದ್ರ ಸಾರಿಗೆ ಇಲಾಖೆಯ ಆದೇಶದಂತೆ ರಾಜ್ಯದ ಸಾರಿಗೆ ಇಲಾಖೆಯು ನೀಡಿರುವ ವಾಣಿಜ್ಯ ವಾಹನಗಳಿಗೆ ಪ್ಯಾನಿಕ್ ಬಟನ್ ಮತ್ತು ಜಿಪಿಆರ್‌ಎಸ್ ಎಂಬ ಅವೈಜ್ಞಾನಿಕವಾದ ಸಾಧನವನ್ನು ಅಳವಡಿಸಲು ನೀಡಿರುವ ಆದೇಶ ತುಂಬಾ ತ್ರಾಸದಾಯಕವಾಗಿದ್ದು, ರಾಜ್ಯದ ಎಲ್ಲಾ ವಾಣಿಜ್ಯ ವಾಹನಗಳು ಹಾಗೂ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕ ಮಾಲೀಕರು ಹೈರಾಣರಾಗಿರುತ್ತಾರೆ. ಇಂತಹ ಅವೈಜ್ಞಾನಿಕವಾದ ಸಾಧನಗಳನ್ನು ಅಳವಡಿಸಲು ಕೇಂದ್ರ ಸರ್ಕಾರ ನಿಗದಿಪಡಿಸಿರುವ ದರ ರೂ.7890 ಆಗಿದೆ. ಆದರೆ ರಾಜ್ಯದ ಎಲ್ಲಾ ಸಾರಿಗೆ ಕಚೇರಿಗಳಲ್ಲಿ 13 ಸಾವಿರದಿಂದ 15 ಸಾವಿರದವರೆಗೆ ವಸೂಲಿ ಮಾಡುತ್ತಿದ್ದು, ಇದು ಇಡೀ ರಾಜ್ಯದ ಟೂರಿಸ್ಟ್ ವಾಹನ ಚಾಲಕ ಮಾಲೀಕರಿಗೆ ಮಾಡುತ್ತಿರುವ ಅಕ್ಷಮ್ಯ ಅಪರಾಧವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ರಾಜ್ಯ ಸಾರಿಗೆ ಮಂತ್ರಿಗಳು ಈ ಬಗ್ಗೆ ಸೆಪ್ಟೆಂಬರ್2024 ರ ತನಕ ಯಾವುದೇ ವಾಹನಗಳಿಗೆ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸದೆ ಎಫ್ ಸಿ(ಫಿಟೈಸ್) ಮಾಡಬಹುದು ಎಂದು ತಿಳಿಸಿದ್ದಾರೆ. ಆದರೂ ಕೂಡ ಇದನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಸಚಿವರ ಆದೇಶವನ್ನು ನಿರ್ಲಕ್ಷಿಸಿ ತರಾತುರಿಯಲ್ಲಿ ಎಫ್ ಸಿ ಮಾಡಲು ಪ್ಯಾನಿಕ್ ಬಟನ್ ಕಡ್ಡಾಯ ಮಾಡಿರುತ್ತಾರೆ. ದುಬಾರಿ ತೆರಿಗೆ, ಸ್ಪೀಡ್ ಗವರ್ನರ್, ಬಾಡಿಗೆ ಮಾಡುವ ಖಾಸಗಿ ವಾಹನಗಳು ಹಾಗೂ ದುಬಾರಿ ಇನ್ಸೂರೆನ್ಸ್ ಮುಂತಾದ ಸರ್ಕಾರಿ ವೆಚ್ಚಗಳಿಂದ ಹೈರಾಣವಾಗಿರುವಂತಹ ರಾಜ್ಯದ ಎಲ್ಲಾ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್, ಸರ್ವೀಸ್ ಬಸ್ಸುಗಳ ಚಾಲಕ ಮಾಲೀಕರಿಗೆ ಸಂಜೀವಿನಿ ರೀತಿಯಲ್ಲಿ ನೆರವನ್ನು ನೀಡುವ ಬದಲು ನಮ್ಮ ಉದ್ಯೋಗಕ್ಕೆ ಪೂರಕವಾಗಿರುವಂತಹ ಅನೇಕ ಕಾಯ್ದೆಗಳು ಇದ್ದರೂ ಕೂಡ ಅವುಗಳನ್ನು ಅನುಷ್ಠಾನಗೊಳಿಸದೆ ಕೇವಲ ತಮ್ಮ ಸ್ವಾರ್ಥಕ್ಕೆ ರಾಜ್ಯದ ಚಾಲಕ ಮಾಲೀಕರ ಗಾಯದ ಮೇಲೆ ಬರೆ ಎಳೆಯುತ್ತಿದ್ದಾರೆ ಎಂದು ಆರೋಪಿಸಿದರು.
ಸ್ವ-ಉದ್ಯೋಗವಾದ ಈ ಟ್ಯಾಕ್ಸಿ ಉದ್ಯಮವನ್ನು ಪ್ರೋತ್ಸಾಹಿಸುವ ಬದಲು ಇದನ್ನು ನಿರ್ನಾಮ ಮಾಡುವಂತ ಹುನ್ನಾರ ನಡೆಯುತ್ತಿರುವುದು ಸ್ಪಷ್ಟವಾಗುತ್ತಿದೆ. ಆದ್ದರಿಂದ ಈ ಅಧಿವೇಶನದಲ್ಲಿ ರಾಜ್ಯದ ಎಲ್ಲಾ ವಾಣಿಜ್ಯ ವಾಹನ ಚಾಲಕ ಮಾಲೀಕರ ಪರವಾಗಿ ಸರ್ಕಾರದ ಗಮನ ಸೆಳೆದು ಈ ಆದೇಶವನ್ನು ಖಾಯಂ ಆಗಿ ರದ್ದುಗೊಳಿಸಬೇಕು ಎಂದು ಒತ್ತಾಯಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಅರುಣ್‌ಕುಮಾರ್, ಸಂಜು, ಕೃಷ್ಣಮೂರ್ತಿ, ಸುರೇಶ್, ಈಶ್ವರಪ್ಪ, ಮೋಹನ್, ಸಂತೋಷ, ನರಸಿಂಹ, ನರಹರಿ ಸೇರಿದಂತೆ ಇತರರು ಭಾಗವಹಿಸಿದ್ದರು.
Views: 0