ಪದವಿ ವಿದ್ಯಾರ್ಥಿಗಳ ತರಗತಿ ಬಹಿಷ್ಕಾರ: ಎಐಡಿಎಸ್‍ಓ ನೇತೃತ್ವದಲ್ಲಿ ಪ್ರತಿಭಟನೆ – “ತರಗತಿಗಳಿಲ್ಲದೆ ಪರೀಕ್ಷೆ ಬೇಡ”

ಚಿತ್ರದುರ್ಗ, ಸೆ. 27:

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಕೊರತೆಯಿಂದಾಗಿ ವಿದ್ಯಾರ್ಥಿಗಳು ತರಗತಿಗಳಿಲ್ಲದೆ ಪರದಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಎಐಡಿಎಸ್‍ಓ ನೇತೃತ್ವದಲ್ಲಿ ನಗರದ ಸರ್ಕಾರಿ ವಿಜ್ಞಾನ ಕಾಲೇಜು, ಸರ್ಕಾರಿ ಆಟ್ರ್ಸ್ (ಸ್ವಾಯತ್ತ) ಕಾಲೇಜು ಮತ್ತು ಸರ್ಕಾರಿ ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಇಂದು ಪ್ರತಿಭಟನೆ ನಡೆಸಿದರು.

ರಾಜ್ಯವ್ಯಾಪಿಯಾಗಿ ಎಐಡಿಎಸ್‍ಓ ನೀಡಿದ ಕರೆ ಅನುಸರಿಸಿ ವಿದ್ಯಾರ್ಥಿಗಳು ಕಾಲೇಜು ಗೇಟ್ ಮುಚ್ಚಿ, ಫಲಕಗಳನ್ನು ಹಿಡಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಖಾಸಗಿ ಕಾಲೇಜುಗಳಲ್ಲಿ ತರಗತಿಗಳು ಸರಾಗವಾಗಿ ಸಾಗುತ್ತಿದ್ದು, ಆಂತರಿಕ ಪರೀಕ್ಷೆಗಳನ್ನು ಕೂಡ ಮುಗಿಸಲಾಗಿದೆ. ಆದರೆ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು ಪ್ರತಿದಿನ ಹಲವು ಕಿಲೋಮೀಟರ್ ಪ್ರಯಾಣಿಸಿ ಖಾಲಿ ತರಗತಿ ಕೋಣೆಗಳನ್ನು ನೋಡಿ ಹಿಂದಿರುಗುತ್ತಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಐಡಿಎಸ್‍ಓ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ ಬಿಳೂರ್ ಹೇಳಿದರು:
“2025-26ರ ವೇಳಾಪಟ್ಟಿಯ ಪ್ರಕಾರ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಸೆಮಿಸ್ಟರ್ ಪರೀಕ್ಷೆಗಳು ನಡೆಯಲಿವೆ. ಆದರೆ ತರಗತಿಗಳೇ ನಡೆಯದ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಇದು ಘೋರ ಅನ್ಯಾಯ. ತರಗತಿಗಳನ್ನು ನಡೆಸದೆ ಪರೀಕ್ಷೆ ನಡೆಸುವ ಸರ್ಕಾರದ ಕ್ರಮವನ್ನು ಹಿಂತೆಗೆದುಕೊಳ್ಳಬೇಕು. ಮೊದಲು ಅವಶ್ಯಕ ತರಗತಿಗಳನ್ನು ನಡೆಸಿ, ನಂತರ ಪರೀಕ್ಷೆ ನಡೆಸಬೇಕು” ಎಂದು ಆಗ್ರಹಿಸಿದರು.

ಹೋರಾಟದ ಮುಂದಿನ ಹಂತವಾಗಿ “ತರಗತಿಗಳಿಲ್ಲದೆ ಪರೀಕ್ಷೆ ಬೇಡ” ಎಂಬ ಘೋಷಣೆ ನೀಡುತ್ತಾ ರಾಜ್ಯದಾದ್ಯಂತ ಸಂಘರ್ಷ ನಡೆಸಲು ವಿದ್ಯಾರ್ಥಿಗಳು ನಿರ್ಧರಿಸಿದರು. ಸರ್ಕಾರಿ ವಿವಿಗಳು ಖಾಸಗಿ ಕಾಲೇಜುಗಳ ಪರ ಕಾರ್ಯನಿರ್ವಹಿಸುತ್ತಿರುವುದೇ ಎಂಬ ಪ್ರಶ್ನೆ ವಿದ್ಯಾರ್ಥಿಗಳಿಂದ ಎದ್ದಿತು.

ತರಗತಿ ಬಹಿಷ್ಕಾರ ಯಶಸ್ವಿಯಾಗಿ ನಡೆದು, ವಿದ್ಯಾರ್ಥಿಗಳ ಪ್ರಮುಖ ಬೇಡಿಕೆ ಎಂದರೆ —

  • ತರಗತಿಗಳಿಲ್ಲದೆ ಪರೀಕ್ಷೆ ನಡೆಸಬಾರದು
  • ಘೋಷಿತ ಪರೀಕ್ಷಾ ದಿನಾಂಕಗಳನ್ನು ಮುಂದೂಡಬೇಕು

ಈ ಪ್ರತಿಭಟನೆಯಲ್ಲಿ ಎಐಡಿಎಸ್‍ಓ ಜಿಲ್ಲಾ ಸಂಚಾಲಕ ಕೆ.ಈರಣ್ಣ ಸಲೀಂ, ಸುದೀಪ್, ಮನು, ವೆಂಕಟೇಶ, ನಿತೀಶ, ಸಹನಾ, ಪುಷ್ಮಾ, ಅಂಜುಮ್, ಸುಹಾನಾ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *