PU Exam: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ವೇಳಾಪಟ್ಟಿ ಪ್ರಕಟ; ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ

PUC Supplementary Examinations: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟವಾಗಿದೆ.

ಬೆಂಗಳೂರು: ಅನುತ್ತೀರ್ಣರಾದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಮತ್ತೊಂದು ಪೂರಕ ಪರೀಕ್ಷೆ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ಧರಿಸಿದ್ದು, ಇಂದು ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಮಾಡಿದೆ.

ಆಗಸ್ಟ್ 21ರಿಂದ ಸೆಪ್ಟೆಂಬರ್ 2ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ನಡೆಯಲಿವೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವೇಳಾಪಟ್ಟಿ ಪ್ರಕಟಿಸಿದೆ.

2022-23ನೇ ಸಾಲಿನಲ್ಲಿ ಹಾಗೂ ಅದಕ್ಕಿಂತ ಹಿಂದಿನ ವರ್ಷಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮಾತ್ರ ಈ ಪರೀಕ್ಷೆಗೆ ನೋಂದಾಯಿಸಲು ಅರ್ಹರಾಗಿರುತ್ತಾರೆ. ಫಲಿತಾಂಶ ತಿರಸ್ಕರಿಸಲು ಸದರಿ ಪರೀಕ್ಷೆಯಲ್ಲಿ ಅವಕಾಶವಿರುವುದಿಲ್ಲ. ಪರೀಕ್ಷೆ ಸಂಬಂಧಿಸಿದ ಸುತ್ತೋಲೆ ಹಾಗೂ ವೇಳಾಪಟ್ಟಿಯನ್ನು ಮಂಡಳಿಯ ಜಾಲತಾಣದಲ್ಲಿ https://kseab.karnataka.gov.in ಪ್ರಕಟಿಸಲಾಗಿದೆ. ಈ ಅವಕಾಶವನ್ನು ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಬೇಕು ಎಂದು ಮಂಡಳಿ ತಿಳಿಸಿದೆ.

ವೇಳಾಪಟ್ಟಿ ಹೀಗಿದೆ:
ಆಗಸ್ಟ್ 21: ಕನ್ನಡ
ಆಗಸ್ಟ್ 22: ರಸಾಯನಶಾಸ್ತ್ರ
ಆಗಸ್ಟ್ 23: ಸಮಾಜ ಶಾಸ್ತ್ರ,
ಆಗಸ್ಟ್ 24: ವ್ಯವಹಾರ ಅಧ್ಯಯನ
ಆಗಸ್ಟ್ 25: ಇತಿಹಾಸ
ಆಗಸ್ಟ್ 26: ಇಂಗ್ಲೀಷ್‌
ಆಗಸ್ಟ್ 28: ಭೌತಶಾಸ್ತ್ರ, ಮನಃಶಾಸ್ತ್ರ
ಆಗಸ್ಟ್ 29: ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ
ಆಗಸ್ಟ್ 30: ರಾಜ್ಯಶಾಸ್ತ್ರ, ಗಣಿತ ಶಾಸ್ತ್ರ
ಆಗಸ್ಟ್ 31: ಹಿಂದಿ
ಸೆಪ್ಟೆಂಬರ್ 01: ಅರ್ಥಶಾಸ್ತ್ರ, ಜೀವಶಾಸ್ತ್ರ
ಸೆಪ್ಟೆಂಬರ್ 02: ತೆಲುಗು, ತಮಿಳು, ಉರ್ದು ಇತರ ಭಾಷೆ

ಈ ಮೊದಲು ಪ್ರಸಕ್ತ ವರ್ಷದಲ್ಲಿ ಮೇ ಮತ್ತು ಜೂನ್ ತಿಂಗಳಿನಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯನ್ನು ನಡೆಸಲಾಗಿತ್ತು. ಆ ಬಳಿಕ ಜೂನ್ 20 ರಂದು ಫಲಿತಾಂಶ ಪ್ರಕಟವಾಗಿತ್ತು. ಇದೀಗ ಮತ್ತೊಂದು ಪೂರಕ ಪರೀಕ್ಷೆ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ದಿನಾಂಕ ಪ್ರಕಟಿಸಿದೆ.

ಕಳೆದ ಬಾರಿಯ ಪೂರಕ ಪರೀಕ್ಷೆಗೆ ಒಟ್ಟು 1,58,881 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಆದ್ರೆ 1,57,756 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 50,478 ವಿದ್ಯಾರ್ಥಿಗಳು ಪಾಸ್ ಆಗಿದ್ದರು. ಪೂರಕ ಪರೀಕ್ಷೆಯಲ್ಲಿ ಶೇ.32 ರಷ್ಟು ಫಲಿತಾಂಶ ಬಂದಿತ್ತು.

ಇದಕ್ಕೂ ಮುನ್ನ ಮಾಚ್​​ ತಿಂಗಳಲ್ಲಿ ನಡೆದ 2022-23ನೇ ಸಾಲಿನ ದ್ವಿತೀಯ ಪಿಯಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಏಪ್ರಿಲ್​ನಲ್ಲಿ ಪ್ರಕಟವಾಗಿತ್ತು. ಈ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದರು. ಪರೀಕ್ಷೆಗೆ ಹಾಜರಾದ ಒಟ್ಟು 7,02,067 ವಿದ್ಯಾರ್ಥಿಗಳ ಪೈಕಿ 5,24,209 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಶೇ. 74.67 ರಷ್ಟು ಫಲಿತಾಂಶ ಬಂದಿತ್ತು. ವಾಣಿಜ್ಯ ವಿಭಾಗದಲ್ಲಿ ಶೇ. 75.8, ಕಲಾ ವಿಭಾಗ ಶೇ. 61.22 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.85.71 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದರು.

Source : https://m.dailyhunt.in/news/india/kannada/etvbhar9348944527258-epaper-etvbhkn/pu+exam+dvitiya+piyusi+puraka+parikshe+2+velaapatti+prakata+vidyaarthigalige+mattondu+avakaasha-newsid-n522764436?listname=newspaperLanding&topic=homenews&index=0&topicIndex=0&mode=pwa&action=click

Leave a Reply

Your email address will not be published. Required fields are marked *