
ಜೈಪುರ: ಕ್ರಿಕೆಟ್ ಆಡುವಾಗ ಕಾಲಿಗೆ ಗಂಭೀರ ಗಾಯ ಮಾಡಿಕೊಂಡಿದ್ದ ಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ (Rahul Dravid) ಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡೇ ರಾಜಸ್ತಾನ ರಾಯಲ್ಸ್ (Rajsthan Royals) ತಂಡದ ಆಟಗಾರರಿಗೆ ಕೋಚಿಂಗ್ ನೀಡುತ್ತಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 18ನೇ ಆವೃತ್ತಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಹಲವು ಆಟಗಾರರು ತಂಡ ಸೇರಿಕೊಂಡಿದ್ದು, ತವರು ಮೈದಾನಗಳಲ್ಲಿ ಕಠಿಣ ಅಭ್ಯಾಸ ಆರಂಭಿಸಿದ್ದಾರೆ. ಈ ಮಧ್ಯೆ ಕಾಲಿಗೆ ಗಂಭೀರ ಗಾಯ ಮಾಡಿಕೊಂಡು ಎದ್ದು ನಿಲ್ಲಲೂ ಸಾಧ್ಯವಾಗದಂತಹ ಪರಿಸ್ಥಿತಿಯಲ್ಲಿರುವ ರಾಹುಲ್ ದ್ರಾವಿಡ್ ತರಬೇತಿ ಸಲುವಾಗಿ ಮೈದಾನಕ್ಕೆ ಆಗಮಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಮಾತ್ರವಲ್ಲದೇ ಕಾಲಿನ ಗಾಯದ ಹೊರತಾಗಿಯೂ ತಂಡದ ತರಬೇತಿ ಅವಧಿಯಲ್ಲಿ ಅಚ್ಚರಿಯ ರೀತಿಯಲ್ಲಿ ಕಾಣಿಸಿಕೊಂಡು ಆಟಗಾರರಿಗೆ ತರಬೇತಿ ಕೂಡ ನೀಡಿದ್ದಾರೆ. ಪ್ರಸ್ತುತ ಸರಿಯಾಗಿ ನಡೆಯಲು ಸಾಧ್ಯವಾಗದ ದ್ರಾವಿಡ್, ಗಾಲ್ಫ್ ಕಾರ್ಟ್‌ನಲ್ಲಿ ಮೈದಾನಕ್ಕೆ ಆಗಮಿಸಿದ್ದು, ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ಗೆ ಮಾರ್ಗದರ್ಶನ ನೀಡುತ್ತಾ ಕ್ರಚಸ್ ಸಹಾಯದಿಂದ ನಿಂತಿದ್ದರು.
ಈ ವಿಡಿಯೋವನ್ನು ರಾಜಸ್ಥಾನ ರಾಯಲ್ಸ್ ತಂಡ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ‘ಭಾರತದ ಮಾಜಿ ಕೋಚ್ 10 ವರ್ಷಗಳ ನಂತರ ಆರ್‌ಆರ್‌ಗೆ ಮರಳುತ್ತಿದ್ದಾರೆ. ಈ ಹಿಂದೆ ನಾಯಕ ಮತ್ತು ಮಾರ್ಗದರ್ಶಕರಾಗಿ ನಿರ್ಣಾಯಕ ಪಾತ್ರ ವಹಿಸಿದ್ದರು. ಇದೀಗ ಮತ್ತೆ ಕೋಚ್ ಆಗಿ ತಂಡ ಸೇರ್ಪಡೆಯಾಗಿದ್ದಾರೆ’ ಎಂದು ಸಂತಸ ಹಂಚಿಕೊಂಡಿದೆ.
Source : https://publictv.in/injured-rahul-dravid-joins-rajasthan-royals-camp-ahead-of-ipl-2025-on-crutches